ಗುವಾಹಟಿ: ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಸೋಮವಾರ ಮಾಜಿ ಚಾಂಪಿಯನ್ ಇಂಗ್ಲೆಂಡ್ ತಂಡ ಬಾಂಗ್ಲಾದೇಶ ವಿರುದ್ಧ ಪ್ರಯಾಸದ ಗೆಲುವು ಸಾಧಿಸಿದೆ. ಸುಲಭ ಗೆಲುವಿನ ವಿಶ್ವಾಸದಲ್ಲಿದ್ದ ಇಂಗ್ಲೆಂಡ್, ಬಾಂಗ್ಲಾ ನೀಡಿದ್ದ 179 ರನ್‌ಗಳ ಗುರಿಯನ್ನು ಬೆನ್ನತ್ತಲು 46.1 ಓವರ್ ತೆಗೆದುಕೊಂಡಿತು. ಸತತ 2ನೇ ಗೆಲುವಿನೊಂದಿಗೆ ಇಂಗ್ಲೆಂಡ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಬಾಂಗ್ಲಾದೇಶ ಮೊದಲ ಸೋಲು ಕಂಡಿತು.
ಮೊದಲು ಬ್ಯಾಟ್ ಮಾಡಿದ ಬಾಂಗ್ಲಾ 49.4 ಓವರ್‌ಗಳಲ್ಲಿ 178 ರನ್‌ಗೆ ಸರ್ವಪತನ ಕಂಡಿತು. ಶೋಭನಾ(108 ಎಸೆತಗಳಲ್ಲಿ 60 ರನ್) ಏಕಾಂಗಿ ಹೋರಾಟ ಪ್ರದರ್ಶಿಸಿದರು. ಕೊನೆಯಲ್ಲಿ ರಬೇಯಾ ಖಾನ್ 27 ಎಸೆತಗಳಲ್ಲಿ ಔಟಾಗದೆ 43 ರನ್ ಗಳಿಸಿ, ತಂಡಕ್ಕೆ ನೆರವಾದರು. ಶರ್ಮಿನ್ ಅಖ್ತರ್ 30 ರನ್ ಕೊಡುಗೆ ನೀಡಿದರು. ಇಂಗ್ಲೆಂಡ್ ಪರ ಸೋಫಿ ಎಕ್ಲೆಸ್ಟೋನ್ 3, ಚಾರ್ಲಿ ಡೀನ್, ಅಲೈಸ್ ಕ್ಯಾಪ್ಸಿ, ಲಿನ್ಸೆ ಸ್ಮಿತ್ ತಲಾ 2 ವಿಕೆಟ್ ಪಡೆದರು.
ಸುಲಭ ಗುರಿ ಸಿಕ್ಕರೂ ಇಂಗ್ಲೆಂಡ್ ಒದ್ದಾಡಿ ಗೆಲುವಿನ ದಡ ಸೇರಿತು. 29 ರನ್‌ಗೆ 2 ವಿಕೆಟ್ ಕಳೆದುಕೊಂಡ ತಂಡಕ್ಕೆ ಹೀಥರ್ ನೈಟ್ ಆಸರೆಯಾದರು. ಒಂದೆಡೆ ತಂಡದ ವಿಕೆಟ್ ಉರುಳುತ್ತಿದ್ದರೂ ಗಟ್ಟಿಯಾಗಿ ಕ್ರೀಸ್‌ನಲ್ಲಿ ನೆಲೆಯೂರಿದ ಹೀಥರ್, 111 ಎಸೆತಗಳಲ್ಲಿ ಔಟಾಗದೆ 79 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. 103 ರನ್‌ಗೆ 6 ವಿಕೆಟ್ ಕಳೆದುಕೊಂಡಿದ್ದಾಗ ಹೀಥರ್ ಹಾಗೂ ಡೀನ್ 79 ರನ್ ಜೊತೆಯಾಟವಾಡಿದರು. ಡೀನ್ ಔಟಾಗದೆ 27 ರನ್ ಸಿಡಿಸಿದರು. ನಾಯಕಿ ಸ್ಕೀವರ್ ಬ್ರಂಟ್ 32, ಕ್ಯಾಪ್ಸಿ 20 ರನ್ ಕೊಡುಗೆ ನೀಡಿದರು.