ಇಂದೋರ್: ಈ ಬಾರಿ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಮೊದಲ ಗೆಲುವು ಸಾಧಿಸಿದೆ. ಆರಂಭಿಕ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್ ಹೀನಾಯ ಸೋಲು ಕಂಡಿದ್ದ ದ.ಆಫ್ರಿಕಾ, ಸೋಮವಾರ ನ್ಯೂಜಿಲೆಂಡ್ ವಿರುದ್ಧ 6 ವಿಕೆಟ್ ಭರ್ಜರಿ ಗೆಲುವು ಸಾಧಿಸಿದೆ. ಕಿವೀಸ್ ಸತತ 2ನೇ ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲೇ ಬಾಕಿಯಾಯಿತು.
ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 47.5 ಓವರ್‌ಗಳಲ್ಲಿ 231 ರನ್‌ಗೆ ಆಲೌಟಾಯಿತು. ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ಸುಜೀ ಬೇಟ್ಸ್ ವಿಕೆಟ್ ಕಳೆದುಕೊಂಡರೂ, ತಂಡ ಚೇತರಿಸಿಕೊಂಡಿತು. ನಾಯಕಿ ಸೋಫಿ ಡಿವೈನ್ 85, ಬ್ರೂಕ್ ಹಾಲಿಡೇ 45 ರನ್ ಸಿಡಿಸಿದರು. 3 ವಿಕೆಟ್‌ಗೆ 187 ರನ್ ಗಳಿಸಿದ್ದ ತಂಡ, ಬಳಿಕ ದಿಢೀರ್ ಕುಸಿಯಿತು. ಬಳಿಕ ಕೇವಲ 44 ರನ್ ಗಳಿಸುವಷ್ಟರಲ್ಲಿ ತಂಡ 7 ವಿಕೆಟ್ ಕಳೆದುಕೊಂಡು, ಇನ್ನಿಂಗ್ಸ್ ಮುಗಿಸಿತು. ನೊನ್ಕುಲುಲೆಕೊ ಎಂಲಾಬ 4 ವಿಕೆಟ್ ಪಡೆದರು.
ಸ್ಪರ್ಧಾತ್ಮಕ ಗುರಿ ಪಡೆದ ಆಫ್ರಿಕಾ, 40.5 ಓವರ್‌ಗಳಲ್ಲೇ ಗೆಲುವಿನ ದಡ ಸೇರಿತು. ತಾಜ್ಮಿನ್ ಬ್ರಿಟ್ಸ್ 89 ಎಸೆತಗಳಲ್ಲಿ 101 ರನ್ ಸಿಡಿಸಿದರೆ, ಸುನೆ ಲ್ಯೂಸ್ ಔಟಾಘದೆ 83 ರನ್ ಗಳಿಸಿ ತಂಡವನ್ನು ಗೆಲ್ಲಿಸಿದರು. ಈ ಜೋಡಿ 2ನೇ ವಿಕೆಟ್‌ಗೆ 159 ರನ್ ಸೇರಿಸಿ, ಗೆಲುವಿನ ರೂವಾರಿಯಾಗಿ ಹೊರಹೊಮ್ಮಿತು.
ಇಂಗ್ಲೆಂಡ್‌ಗೆ ಸತತ
2ನೇ ಗೆಲುವಿನ ಗುರಿ
ಗುವಾಹಟಿ: ಈ ಬಾರಿ ಸತತ 2ನೇ ಗೆಲುವಿನ ನಿರೀಕ್ಷೆಯಲ್ಲಿರುವ ಮಾಜಿ ಚಾಂಪಿಯನ್ ಇಂಗ್ಲೆಂಡ್ ತಂಡ, ಮಂಗಳವಾರ ಬಾಂಗ್ಲಾದೇಶ ವಿರುದ್ಧ ಸೆಣಸಾಡಲಿದೆ. ಇಂಗ್ಲೆಂಡ್ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ 10 ವಿಕೆಟ್ ಜಯಗಳಿಸಿತ್ತು. ಬಾಂಗ್ಲಾ ತಂಡ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿದ್ದು, ಇಂಗ್ಲೆಂಡ್ ವಿರುದ್ಧ ಉತ್ತಮ ಆಟವಾಡುವ ವಿಶ್ವಾಸದಲ್ಲಿದೆ.