;Resize=(412,232))
ಕೊಲಂಬೋ: ದ್ವೀಪರಾಷ್ಟ್ರ ಶ್ರೀಲಂಕಾಗೆ ಅಪ್ಪಳಿಸಿರುವ ದಿತ್ವಾ ಚಂಡಮಾರುತ ಭಾರಿ ವಿನಾಶ ಸೃಷ್ಟಿಸಿದೆ. 159 ಜನರು ಸಾವನ್ನಪ್ಪಿದ್ದು, 203 ಜನ ಕಾಣೆಯಾಗಿದ್ದಾರೆ. ದೇಶದಲ್ಲಿ ಭಾರೀ ಆಸ್ತಿ-ಪಾಸ್ತಿ ಹಾನಿಯಾಗಿದೆ.
ಚಂಡಮಾರುತದ ಅಬ್ಬರಿಸುತ್ತಿರುವ ಕಾರಣ ಜಾಫ್ನಾ, ಗಾಲೆ ಸೇರಿ ಹಲವು ಭಾಗಗಳು ಬಾಧೆಗೆ ಒಳಗಾಗಿವೆ. ರೈಲು, ವಿಮಾನ ಹಾಗೂ ರಸ್ತೆ ಸಂಚಾರ ಅಸ್ತವ್ಯಸ್ತವಾಗಿವೆ. ಹೀಗಾಗಿ ಪರಿಹಾರ ಕಾರ್ಯಾಚರಣೆಗೆ ವೇಗ ನೀಡುವ ಉದ್ದೇಶದಿಂದಾಗಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಸದ್ಯ 50 ಸಾವಿರಕ್ಕೂ ಹೆಚ್ಚು ಸಂತ್ರಸ್ತರು ಸರ್ಕಾರಿ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.
ಇನ್ನೂ ಹಲವು ದಿನ ಕಾಲ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ನವದೆಹಲಿ: ದಿತ್ವಾ ಚಂಡಮಾರುತದಿಂದ ತತ್ತರಿಸಿರುವ ದ್ವೀಪರಾಷ್ಟ್ರ ಶ್ರೀಲಂಕಾದ ನೆರವಿಗೆ ಇದೀಗ ಭಾರತ ಧಾವಿಸಿದೆ. ‘ಆಪರೇಷನ್ ಸಾಗರ್ ಬಂಧು’ ಕಾರ್ಯಾಚರಣೆ ಅಡಿ 21 ಟನ್ ಪರಿಹಾರ ಸಾಮಗ್ರಿಗಳು, ಅಗತ್ಯ ಉಪಕರಣಗಳು ಹಾಗೂ 80 ಎನ್‌ಡಿಆರ್‌ಎಫ್ ಸಿಬ್ಬಂದಿ ಇರುವ ಸೇನಾ ವಿಮಾನಗಳನ್ನು ಶ್ರೀಲಂಕಾಕ್ಕೆ ಕಳುಹಿಸಿಕೊಟ್ಟಿದೆ.
ಭಾರತೀಯ ವಾಯುಸೇನೆಯ ಸಿ-130, ಐಎಲ್-76 ಸರಕು ವಿಮಾನ ಶನಿವಾರ ಮುಂಜಾನೆ ಕೊಲೊಂಬೋ ಏರ್ಪೋರ್ಟ್‌ನಲ್ಲಿ ಬಂದಿಳಿದಿದ್ದು, ಟೆಂಟ್‌ಗಳು, ಟಾರ್ಪಲಿನ್, ಹೊದಿಕೆಗಳು, ಸ್ಯಾನಿಟರಿ ನ್ಯಾಪ್ಕಿನ್ ಕಿಟ್‌ಗಳು ಮತ್ತು ಸಿದ್ಧ ಆಹಾರ, ಮೆಡಿಸಿನ್ ಮತ್ತಿತರ ಪರಿಹಾರ ವಸ್ತುಗಳನ್ನು ಶ್ರೀಲಂಕಾದ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಶುಕ್ರವಾರವಷ್ಟೇ ಭಾರತದ ಐಎನ್‌ಎಸ್ ವಿಕ್ರಾಂತ್ ಮತ್ತು ಐಎನ್‌ಎಸ್ ಉಯದಗಿರಿ ನೌಕೆಯು ಅಗತ್ಯ ವಸ್ತುಗಳನ್ನು ಶ್ರೀಲಂಕಾಗೆ ಪೂರೈಸಿತ್ತು.
ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಭಾರತ 80 ಮಂದಿ ಎನ್‌ಡಿಆರ್‌ಎಫ್ ಸಿಬ್ಬಂದಿಯನ್ನೂ ಕಳುಹಿಸಿಕೊಟ್ಟಿದ್ದು, ಮತ್ತೊಂದು ತಂಡ ಶ್ರೀಲಂಕಾಗೆ ತೆರಳಲು ಸಿದ್ಧವಾಗಿ ನಿಂತಿದೆ. ರಕ್ಷಣಾ ಕಾರ್ಯಾಚರಣೆಗೆ ಅಗತ್ಯವಿರುವ ದೋಣಿ, ಹೈಡ್ರಾಲಿಕ್ ಕತ್ತರಿಸುವ ಯಂತ್ರಗಳು, ಸಂವಹನ ಉಪಕರಣಗಳು, ಪ್ರಾಥಮಿಕ ಚಿಕಿತ್ಸೆ ಕಿಟ್‌ಗಳನ್ನು ಹೊಂದಿರುವ ಈ ತಂಡ ಶ್ರೀಲಂಕಾದಲ್ಲಿ ಈಗಾಗಲೇ ತನ್ನ ಕಾರ್ಯಾಚರಣೆ ಆರಂಭಿಸಿದೆ.