ಪ್ಯಾರಿಸ್: ಯುವಕರ ಆಕ್ರೋಶಕ್ಕೆ ಉರುಳಿಬಿದ್ದ ನೇಪಾಳ ಸರ್ಕಾರದ ಕಡೆ ಜಗತ್ತಿನ ಗಮನ ಇರುವ ಹೊತ್ತಿನಲ್ಲಿ, ಫ್ರಾನ್ಸ್‌ನಲ್ಲಿ ಕೂಡ ಅಲ್ಲಿನ ಸರ್ಕಾರದ ವಿರುದ್ಧ ಜನ ದಂಗೆಯೆದ್ದಿದ್ದಾರೆ. ಅಧ್ಯಕ್ಷ ಎಮಾನ್ಯುವಲ್ ಮ್ಯಾಕ್ರನ್ ಹಾಗೂ ಅವರಿಂದ ನೇಮಕ ಆಗುತ್ತಿರುವ ಪ್ರಧಾನಿಗಳ ವಿರುದ್ಧ ಹಿಂಸಾತ್ಮಕ ಪ್ರತಿಭಟನೆ ಆರಂಭವಾಗಿದ್ದು, 250 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಫ್ರಾನ್ಸ್ ನೂತನ ಪ್ರಧಾನಿ ಆಗಿ ರಕ್ಷಣಾ ಸಚಿವ ಸೆಬಾಸ್ಟಿಯನ್ ಲೆಕೋರ್ನು ಅವರನ್ನು ಪ್ರಧಾನಿಯಾಗಿ ಮ್ಯಾಕ್ರನ್ ಮಂಗಳವಾರ ನೇಮಿಸಿದ್ದರು. ಈ ಮೂಲಕ, ಫ್ರಾನ್ಸ್ ಒಂದೇ ವರ್ಷದಲ್ಲಿ 4ನೇ ಪಿಎಂ ಕಾಣುವಂತಾಗಿದೆ. ಇದರ ನಡುವೆ ಮ್ಯಾಕ್ರನ್ ಆಡಳಿತ, ಪದೇ ಪದೇ ಪ್ರಧಾನಿ ಬದಲಾವಣೆ ಮತ್ತು ಸರ್ಕಾರದ ಕ್ರಮಗಳಿಂದ ಜನ ಅಸಮಾಧಾನಗೊಂಡಿದ್ದಾರೆ. ದೇಶದ ಅರ್ಥಿಕ ಸ್ಥಿತಿ ಹದಗೆಟ್ಟಿದ್ದು, ಅದನ್ನು ಸುಧಾರಿಸಲು ಪಿಂಚಣಿ, ರಜೆ ಸೇರಿ ಜನರ ಹಲವು ಸವಲತ್ತು ಕಡಿತ ಮಾಡಿರುವ ಕೆಲವು ಕ್ರಮ ಕೈಗೊಂಡ ಬಗ್ಗೆ ಸಿಡಿದೆದ್ದಿದ್ದಾರೆ.
ಹೀಗಾಗಿ ಇವುಗಳ ವಿರುದ್ಧ ‘ಬ್ಲಾಕ್ ಎವ್ರಿಥಿಂಗ್’ (ಎಲ್ಲವನ್ನೂ ಸ್ಥಗಿತಗೊಳಿಸಿ) ಪ್ರತಿಭಟನೆ ಆರಂಭಿಸಿದ್ದು, ವಿಧ್ವಂಸ ಸೃಷ್ಟಿಸಿದ್ದಾರೆ. ರಾಜಧಾನಿ ಪ್ಯಾರಿಸ್ ಸೇರಿದಂತೆ ಹಲವು ಕಡೆಗಳಲ್ಲಿ ರಸ್ತೆಗಳನ್ನು ತಡೆದು ಬೆಂಕಿ ಹಚ್ಚಲಾಗುತ್ತಿದೆ. ರೈಲು ಸಂಚಾರಕ್ಕೂ ಅನುವು ಮಾಡಿಕೊಡುತ್ತಿಲ್ಲ.
ಕೈಮೀರಿದ ದಂಗೆ:
ತಡೆಯಲು ಬಂದ ಪೊಲೀಸರೊಂದಿಗೂ ಪ್ರತಿಭಟನಾಕಾರರು ಸಂಘರ್ಷಕ್ಕಿಳಿದಿದ್ದಾರೆ. ಈ ಆಂದೋಲನಕ್ಕೆ ಯಾವುದೇ ನಾಯಕ ಅಥವಾ ಸಂಘಟನೆ ಮುಂದಾಳತ್ವ ವಹಿಸಿಲ್ಲವಾದ್ದರಿಂದ, ಇದನ್ನು ಹತ್ತಿಕ್ಕಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಪೊಲೀಸರು ಅಶ್ರುವಾಯು ಬಳಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಯತ್ನಿಸುತ್ತಿದ್ದಾರೆ.
ದೇಶದಲ್ಲಿ ನಡೆಯುತ್ತಿರುವ ದಂಗೆಯ ಬಗ್ಗೆ ಮಾತನಾಡಿರುವ ಆಂತರಿಕ ಸಚಿವ ಬ್ರುನೋ, ‘ರೆನ್ನೆಸ್ ನಗರದಲ್ಲಿ ಬಸ್‌ಗೆ ಬೆಂಕಿ ಹಚ್ಚಿ ವಿದ್ಯುತ್ ತಂತಿಗೆ ಹಾನಿ ಮಾಡಲಾಗಿದೆ. ರೈಲು ಮಾರ್ಗವೊಂದು ಸ್ಥಗಿತಗೊಂಡಿದೆ. ಬ್ಯಾರೀಕೇಡ್‌ಗಳನ್ನು ಮುರಿದು ಮುನ್ನುಗ್ಗುತ್ತಿರುವ ಪ್ರತಿಭಟನಾಕಾರರನ್ನು ತಡೆಯಲು 80,000 ಪೊಲೀಸರನ್ನು ನಿಯೋಜಿಸಲಾಗಿದೆ’ ಎಂದು ಹೇಳಿದ್ದಾರೆ.
ಅಸಮಾಧಾನ ಯಾಕೆ?:
ಸರ್ಕಾರಿ ರಜೆಗಳ ಕಡಿತ, ಪಿಂಚಣಿ ಸ್ಥಗಿತದಂತಹ ಕಠಿಣ ಕ್ರಮಗಳನ್ನು ಘೋಷಿಸಿದ್ದ ಈ ಹಿಂದಿನ ಪ್ರಧಾನಿ ಪ್ರಧಾನಿ ಫ್ರಾಂಕೋಯಿಸ್ ಬೇರೂ ಘೋಷಿಸಿದ್ದರು. ಇದರ ಬೆನ್ನಲ್ಲೇ ಸೋಮವಾರ ಸಂಸತ್ತಿನಲ್ಲಿ ವಿಶ್ವಾಸ ಮತ ಪಡೆಯುವಲ್ಲಿ ಸೋತಿದ್ದು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರ ಮರುದಿನವೇ ಅಧ್ಯಕ್ಷ ಮ್ಯಾಕ್ರನ್ ಅವರು ತಮಗೆ ಆಪ್ತ ಮತ್ತು ನಿಷ್ಠರಾಗಿರುವ ರಕ್ಷಣಾ ಸಚಿವ ಸೆಬಾಸ್ಟಿಯನ್ ಲೆಕೋರ್ನು ಅವರನ್ನು ಪ್ರಧಾನಿಯಾಗಿ ನೇಮಿಸಿದ್ದರು. ಈ ಮೂಲಕ, ಫ್ರಾನ್ಸ್ ಒಂದೇ ವರ್ಷದಲ್ಲಿ 4ನೇ ಪಿಎಂ ಕಾಣುವಂತಾಗಿದೆ.
ಇದರಿಂದ ಒಂದು ಕಡೆ ರಾಜಕೀಯ ಅಸ್ಥಿರತೆಯಿರುವುದು ಮತ್ತೊಮ್ಮೆ ಬಯಲಾಗಿದೆ. ಜತೆಗೆ ಆರ್ಥಿಕ ಮುಗ್ಗಟ್ಟಿನ ಕಾರಣ ನೀಡಿ ಜನರ ಹಲವು ಸವಲತ್ತುಗಳನ್ನು ಸರ್ಕಾರ ಕಡಿತ ಮಾಡಿರುವ ಕಾರಣ ಜನರ ತಾಳ್ಮೆಯ ಕಟ್ಟೆಯೂ ಒಡೆದಿದೆ. ಹೀಗಾಗಿ ‘ನಮಗೆ ಸಮಸ್ಯೆಯಿರುವುದು ಮ್ಯಾಕ್ರನ್‌ನಿಂದ’ ಎಂದು ಅವರ ರಾಜೀನಾಮೆಗೂ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ದೇಶದಲ್ಲಿ ಕಳೆದ 2 ವರ್ಷದಲ್ಲಿ 4ನೇ ಪ್ರಧಾನಿ ಹುದ್ದೆಗೇರಿದ್ದು, ರಾಜಕೀಯ ಅಸ್ಥಿರತೆ ಬಗ್ಗೆ ಜನಾಕ್ರೋಶವಿತ್ತು. ಜೊತೆಗೆ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು
ಅರ್ಥಿಕ ಸ್ಥಿತಿ ಸುಧಾರಣೆಗೆ ಮಾಜಿ ಪ್ರಧಾನಿ ಫ್ರಾಂಕೋಯಿಸ್ ಪ್ರಸ್ತಾಪಿಸಿದ್ದ ಪಿಂಚಣಿ, ರಜೆ ಸೇರಿ ಜನರ ಹಲವು ಸವಲತ್ತು ಕಡಿತ ಜನರಿಂದ ಆಕ್ರೋಶ
ಇದನ್ನು ವಿರೋಧಿಸಿ ದೇಶವ್ಯಾಪಿ ಬ್ಲಾಕ್ ಎವ್ರಿಥಿಂಗ್ ಹೆಸರಲ್ಲಿ ರೈಲು, ಬಸ್ ಸಂಚಾರಕ್ಕೆ ಅಡ್ಡಿ. ಕಟ್ಟಡ ವಾಹನಗಳಿಗೆ ಬೆಂಕಿ. 250 ಜನರ ಬಂಧನ