;Resize=(412,232))
ನವದೆಹಲಿ: ಥಾಯ್ಲೆಂಡ್ ಮತ್ತು ಕಾಂಬೋಡಿಯಾ ನಡುವೆ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಗಡಿ ಸಂಘರ್ಷ ಇದೀಗ ಕಾಂಬೋಡಿಯಾದಲ್ಲಿನ ವಿಷ್ಣುವಿನ ಪ್ರತಿಮೆಯನ್ನು ಬಲಿ ಪಡೆದಿದೆ.
ಉಭಯ ದೇಶಗಳ ನಡುವಿನ ವಿವಾದಿತ ಪ್ರದೇಶದಲ್ಲಿ ಇರುವ, ಪ್ರಸಕ್ತ ಕಾಂಬೋಡಿಯಾ ಗಡಿಯೊಳಗೆ ಬರುವ 9 ಮೀಟರ್ (ಸುಮಾರು 30 ಅಡಿ) ಎತ್ತರದ ವಿಷ್ಣುವಿನ ವಿಗ್ರಹವನ್ನು ಥಾಯ್ಲೆಂಡ್ ಸೇನೆ ಬುಲ್ಡೋಜರ್ ಬಳಸಿ ಧ್ವಂಸಗೊಳಿಸಿದೆ. ಈ ಕುರಿತ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು, ಥಾಯ್ಲೆಂಡ್ ಸರ್ಕಾರದ ಕ್ರಮಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಥಾಯ್ಲೆಂಡ್ ಗಡಿಯಿಂದ 100 ಕಿ.ಮೀ. ದೂರದಲ್ಲಿರುವ ಎನ್ ಸೆಸ್ ಪ್ರದೇಶದಲ್ಲಿ 2014ರಲ್ಲಿ ಕಾಂಬೋಡಿಯಾ ಸರ್ಕಾರ ಸಣ್ಣ ದೇಗುಲ ಮತ್ತು 9 ಮೀಟರ್ ಎತ್ತರದ ವಿಷ್ಣು ವಿಗ್ರಹವನ್ನು ಪ್ರತಿಷ್ಠಾಪಿಸಿತ್ತು. ಇದು ಇತ್ತೀಚಿನ ದಿನಗಳಲ್ಲಿ ಹಿಂದೂ ಮತ್ತು ಬೌದ್ಧರ ಪ್ರಮುಖ ಪ್ರಾರ್ಥನಾ ಸ್ಥಳವಾಗಿ ಹೊರಹೊಮ್ಮಿತ್ತು. ಆದರೆ ಈ ಪ್ರದೇಶ ತನಗೆ ಸೇರಿದ್ದೆಂದು ವಾದಿಸುತ್ತಿರುವ ಥಾಯ್ಲೆಂಡ್ ಸೇನೆ, ಬುಧವಾರ ಬುಲ್ಡೋಜರ್ ಸಮೇತ ಆಗಮಿಸಿ ವಿಗ್ರಹವನ್ನು ಧ್ವಂಸಗೊಳಿಸಿದೆ.