;Resize=(412,232))
ವಾಷಿಂಗ್ಟನ್: ಎಕ್ಸ್‌ನ ಎಐ ಟೂಲ್ ಆಗಿರುವ ಗ್ರೋಕ್ ಬಳಸಿ ಅಶ್ಲೀಲ, ಅಸಭ್ಯ ಫೋಟೋಗಳನ್ನು ಸೃಷ್ಟಿಸಿತ್ತಿರುವ ಬಗ್ಗೆ ಭಾರತ ಸರ್ಕಾರ ಆಕ್ಷೇಪಿಸಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದ ಬೆನ್ನಲ್ಲೇ ಈ ಬಗ್ಗೆ ಅದರ ಮಾಲೀಕ, ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ಪ್ರತಿಕ್ರಿಯಿಸಿದ್ದು, ಅಂತಹವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಅದೇ ಎಕ್ಸ್‌ನಲ್ಲಿ ಮಸ್ಕ್, ‘ಗ್ರೋಕ್ ಬಳಸಿ ಕಾನೂನುಬಾಹಿರ ಪೋಸ್ಟ್‌ಗಳನ್ನು ಸೃಷ್ಟಿಸುತ್ತಿರುವವರು, ಅಂತಹ ಕಾಂಟೆಂಟ್ ಪೋಸ್ಟ್ ಮಾಡುವವರ ವಿರುದ್ಧ ಜರುಗಿಸಲಾಗುವ ಕ್ರಮಕ್ಕೆ ಒಳಗಾಗುತ್ತಾರೆ. ಈ ಬಗ್ಗೆ ನಾವು ತಮಾಷೆ ಮಾಡುತ್ತಿಲ್ಲ’ ಎಂದು ಎಚ್ಚರಿಸಿದ್ದಾರೆ. ಸ್ವತಃ ಮಸ್ಕ್ ಅವರ ಫೋಟೋವನ್ನೂ ಗ್ರೋಕ್ ಬಳಸಿ ಅಶ್ಲೀಲವಾಗಿ ಚಿತ್ರಿಸಲಾಗಿತ್ತು. ಅದರ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ.
ಗ್ರೋಕ್‌ನಲ್ಲಿ ಕೆಲ ಬೇನಾಮಿ ಬಳಕೆದಾರರು ಮಹಿಳೆಯರ ಫೋಟೋ ಹಾಕಿ ಅದನ್ನು ಅಶ್ಲೀಲವಾಗಿ ಮಾರ್ಪಡಿಸುವಂತೆ ಕೇಳಿ ವಿಕೃತ ಆನಂದ ಪಡುತ್ತಿದ್ದರು. ಇದರ ವಿರುದ್ಧ ಎಕ್ಸ್ ಬಳಕೆದಾರರು ದನಿ ಎತ್ತಿದ ಬೆನ್ನಲ್ಲೇ ಭಾರತ ಸರ್ಕಾರ ಕೂಡ, ‘ಅಂತಹ ಅಂಶಗಳನ್ನು ಎಕ್ಸ್‌ನಿಂದ ತೆಗೆದುಹಾಕಬೇಕು ಮತ್ತು ಏನು ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ 72 ತಾಸುಗಳ ಒಳಗಾಗಿ ವರದಿ ನೀಡಬೇಕು’ ಎಂದು ತಾಕೀತು ಮಾಡಿತ್ತು.
ಎಕ್ಸ್‌ನಲ್ಲಿ ಸೃಷ್ಟಿಸಲ್ಪಡುತ್ತಿರುವ ವಿಕೃತ ಪೋಟೋಗಳ ಬಗ್ಗೆ ಫ್ರಾನ್ಸ್‌ನ ಸಚಿವರೂ ಆಕ್ಷೇಪ ವ್ಯಕ್ತಪಡಿಸಿದ್ದು, ‘ಇದು ಕಾನೂನುಬಾಹಿರ’ ಎಂದು ಗುಡುಗಿದ್ದಾರೆ