ವಿದೇಶಗಳ ಮೇಲೆ ಪ್ರಯೋಗಿಸಿದ್ದ ಡೊನಾಲ್ಡ್ ಟ್ರಂಪ್ ಅವರು ಪ್ರಯೋಗಿಸಿದ್ದ ಬೇಕಾಬಿಟ್ಟಿ ತೆರಿಗೆ ಅಸ್ತ್ರವನ್ನು ಅಸಾಂವಿಧಾನಿಕ ಎಂದು ಅಮೆರಿಕ ಸುಪ್ರೀಂ ಕೋರ್ಟ್ ರದ್ದು ಮಾಡಿದ ಬೆನ್ನಲ್ಲೇ, ಅವರು ಭಾರತ ಸೇರಿ ಎಲ್ಲ ದೇಶಗಳ ಮೇಲೆ ಹೊಸದಾಗಿ ಶೇ.10ರಷ್ಟು ತಾತ್ಕಾಲಿಕ ಸುಂಕ ವಿಧಿಸಲು ತೀರ್ಮಾನ ಮಾಡಿದ್ದಾರೆ.
ವಾಷಿಂಗ್ಟನ್ : ವಿದೇಶಗಳ ಮೇಲೆ ಪ್ರಯೋಗಿಸಿದ್ದ ಡೊನಾಲ್ಡ್ ಟ್ರಂಪ್ ಅವರು ಪ್ರಯೋಗಿಸಿದ್ದ ಬೇಕಾಬಿಟ್ಟಿ ತೆರಿಗೆ ಅಸ್ತ್ರವನ್ನು ಅಸಾಂವಿಧಾನಿಕ ಎಂದು ಅಮೆರಿಕ ಸುಪ್ರೀಂ ಕೋರ್ಟ್ ರದ್ದು ಮಾಡಿದ ಬೆನ್ನಲ್ಲೇ, ಅವರು ಭಾರತ ಸೇರಿ ಎಲ್ಲ ದೇಶಗಳ ಮೇಲೆ ಹೊಸದಾಗಿ ಶೇ.10ರಷ್ಟು ತಾತ್ಕಾಲಿಕ ಸುಂಕ ವಿಧಿಸಲು ತೀರ್ಮಾನ ಮಾಡಿದ್ದಾರೆ. ಈ ಹೊಸ ಪ್ರತಿ ಸುಂಕ ಫೆ.24ರಿಂದಲೇ ಜಾರಿಗೆ ಬರಲಿದೆ. ಈ ಮೂಲಕ ಭಾರತದ ಮೇಲೆ ಅಮೆರಿಕ ವಿಧಿಸಲುದ್ದೇಶಿಸಿದ್ದ ಶೇ.18ರಷ್ಟು ತೆರಿಗೆ ತಾತ್ಕಾಲಿಕವಾಗಿ ಶೇ.10ಕ್ಕೆ ಇಳಿಕೆಯಾದಂತಾಗಲಿದೆ.
ಅಮೆರಿಕದ ಸುಪ್ರೀಂ ಕೋರ್ಟ್ ಶುಕ್ರವಾರವಷ್ಟೇ ಭಾರತವೂ ಸೇರಿ ವಿಶ್ವದ ಹಲವು ದೇಶಗಳ ಮೇಲೆ ಟ್ರಂಪ್ ಅವರು ವಿಧಿಸಿದ್ದ ಪ್ರತಿ ತೆರಿಗೆಯನ್ನು ಅಕ್ರಮ ಎಂದು ಹೇಳಿ ರದ್ದು ಮಾಡಿತ್ತು. ಅಮೆರಿಕ ಈ ಹಿಂದೆ ಭಾರತದ ಮೇಲೆ ಅತಿ ಹೆಚ್ಚು ಅಂದರೆ ಶೇ.25ರಷ್ಟು ಪ್ರತಿ ತೆರಿಗೆ ವಿಧಿಸಿತ್ತು. ಇದರ ಜತೆಗೆ ರಷ್ಯಾದಿಂದ ತೈಲ ಖರೀದಿ ಮಾಡುತ್ದಿದ್ದ ಕಾರಣಕ್ಕೆ ಹೆಚ್ಚುವರಿ ಶೇ.25ರಷ್ಟು ಸೇರಿ ಒಟ್ಟು ಶೇ.50ರಷ್ಟು ತೆರಿಗೆ ಹಾಕಿತ್ತು. ಭಾರತವು ಅತಿ ಹೆಚ್ಚು ಅಮೆರಿಕ ತೆರಿಗೆ ಹಾಕಿಸಿಕೊಂಡ ದೇಶಗಳಲ್ಲಿ ಒಂದಾಗಿತ್ತು.
ಈ ತಿಂಗಳ ಆರಂಭದಲ್ಲಿ ಭಾರತ-ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದ ಅಂತಿಮಗೊಂಡು ಭಾರತದ ಮೇಲಿನ ತೆರಿಗೆಯನ್ನು ಶೇ.18ಕ್ಕಿಳಿಸಲು ನಿರ್ಧಾರವಾಗಿತ್ತು. ಇದೀಗ ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಟ್ರಂಪ್ ಸರ್ಕಾರ ಹೊಸದಾಗಿ ಹೊರಡಿಸಿದ ಆದೇಶದಿಂದಾಗಿ ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಶೇ.10ರಷ್ಟು ತೆರಿಗೆಯಷ್ಟೇ ಬೀಳಲಿದೆ.
5 ತಿಂಗಳವರೆಗಷ್ಟೇ ಈ ತೆರಿಗೆ:
ಅಮೆರಿಕ ಅಧ್ಯಕ್ಷ ಇದೀಗ ಹೊರಡಿಸಿರುವ ಶೇ.10ರಷ್ಟು ತೆರಿಗೆ ಆದೇಶ ಕೇವಲ ತಾತ್ಕಾಲಿಕ ಅಷ್ಟೆ. ಗರಿಷ್ಠ 150 ದಿನ ಅಂದರೆ ಐದು ತಿಂಗಳಿಗಷ್ಟೇ ಈ ತೆರಿಗೆ ಸೀಮಿತವಾಗಲಿದೆ. ಈ ಅವಧಿಯಲ್ಲಿ ಅಮೆರಿಕವು ಹೊಸದಾಗಿ ಹೆಚ್ಚಿನ ತೆರಿಗೆ ವಿಧಿಸಬಹುದಾಗಿದೆ. ಈ ನಿಟ್ಟಿನಲ್ಲಿ ಅಮೆರಿಕ ಸರ್ಕಾರ ಇದೀಗ ಕಾನೂನು ಸಾಧ್ಯತೆಗಳ ಕುರಿತು ಪರಿಶೀಲನೆ ನಡೆಸುತ್ತಿದೆ.
ಶೇ.10 ತೆರಿಗೆ ಹಾಕಲು ಸೆಕ್ಷನ್ 122 ಬಳಕೆ:
ಕಳೆದ ವರ್ಷ ಟ್ರಂಪ್ ಅವರು ಅಂತಾರಾಷ್ಟ್ರೀಯ ತುರ್ತುಪರಿಸ್ಥಿತಿಯ ಆರ್ಥಿಕ ಶಕ್ತಿಗಳ ಕಾಯ್ದೆ (ಐಇಇಪಿಎ) ಅಡಿ ವಿದೇಶಗಳ ಮೇಲೆ ಶೇ.10ರಿಂದ ಶೇ.50ರ ವರೆಗೆ ತೆರಿಗೆ ಹಾಕಿ ಆರ್ಥಿಕ ಯುದ್ಧ ಸಾರಿದ್ದರು. ಆದರೆ, ‘ಇದು ಅಕ್ರಮ. ಇದನ್ನು ವಿಧಿಸಲು ಸಂಸತ್ತಿಗೆ ಮಾತ್ರ ಅಧಿಕಾರ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹೀಗಾಗಿ ಟ್ರಂಪ್ ಈಗ ಅಪರೂಪಕ್ಕೆ ಬಳಸುವ ಕಾನೂನಾದ 1974ರ ವ್ಯಾಪಾರ ಕಾಯ್ದೆಯ ಸೆಕ್ಷನ್ 122 ಬಳಸಿ ಈಗ ವಿದೇಶಿ ವಸ್ತುಗಳ ಮೇಲೆ ಶೇ.10 ಆಮದು ಸುಂಕ ಘೋಷಿಸಿದ್ದಾರೆ. ಯಾವುದೇ ದೇಶದೊಂದಿಗೆ ವ್ಯಾಪಾರ ಅಸಮತೋಲನ ಪರಿಹರಿಸಲು 150 ದಿನಗಳವರೆಗೆ ಗರಿಷ್ಠ ಶೇ.15ರಷ್ಟು ಸುಂಕವನ್ನು ವಿಧಿಸುವ ಅಧಿಕಾರವನ್ನು ಇದು ಅಮೆರಿಕ ಅಧ್ಯಕ್ಷರಿಗೆ ನೀಡುತ್ತದೆ, ನಂತರ ಅದಕ್ಕೆ ಸಂಸತ್ತಿನ ಅನುಮೋದನೆ ಬೇಕಾಗುತ್ತದೆ.
ಅಮೆರಿಕ ಸುಂಕದ ಬಗ್ಗೆ ಅಧ್ಯಯನ: ಭಾರತ ಮೊದಲ ಪ್ರತಿಕ್ರಿಯೆ
ಪಿಟಿಐ ನವದೆಹಲಿಅಮೆರಿಕ ಸುಪ್ರೀಂ ಕೋರ್ಟು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇರಿದ್ದ ಪ್ರತಿತೆರಿಗೆಗಳನ್ನು ಅಕ್ರಮ ಎಂದು ತೀರ್ಪು ನೀಡಿದ ಬೆನ್ನಲ್ಲೇ, ‘ಅಮೆರಿಕದ ಸುಂಕದ ವಿದ್ಯಮಾನಗಳು ಮತ್ತು ಅವುಗಳ ಪರಿಣಾಮಗಳನ್ನು ಭಾರತ ಸರ್ಕಾರ ಅಧ್ಯಯನ ಮಾಡುತ್ತಿದೆ’ ಎಂದು ವಾಣಿಜ್ಯ ಸಚಿವಾಲಯ ಶನಿವಾರ ತಿಳಿಸಿದೆ.
ಮೊದಲ ಬಾರಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅದು, ‘ಶುಕ್ರವಾರ ಸುಂಕಗಳ ಕುರಿತು ಅಮೆರಿಕದ ಸುಪ್ರೀಂ ಕೋರ್ಟ್ ತೀರ್ಪನ್ನು ನಾವು ಗಮನಿಸಿದ್ದೇವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಈ ನಿಟ್ಟಿನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದಾರೆ. ಅಮೆರಿಕ ಆಡಳಿತವು ಕೆಲವು ಕ್ರಮಗಳನ್ನು (ಶೇ.10 ಸುಂಕ) ಘೋಷಿಸಿದೆ. ಈ ಎಲ್ಲಾ ಬೆಳವಣಿಗೆಗಳ ಪರಿಣಾಮಗಳ ಬಗ್ಗೆ ನಾವು ಅಧ್ಯಯನ ಮಾಡುತ್ತಿದ್ದೇವೆ’ ಎಂದಿದೆ.
ಟ್ರಂಪ್ ಜತೆ ಹೊಸದಾಗಿ ಟ್ರೇಡ್ ಡೀಲ್ ಚರ್ಚೆ ನಡೆಸಿ: ಕೈ
ನವದೆಹಲಿ: ‘ಟ್ರಂಪ್ ತೆರಿಗೆ’ ಅಮೆರಿಕ ಸುಪ್ರೀಂ ಕೋರ್ಟ್‌ನಲ್ಲಿ ಬಿದ್ದು ಹೋದ ಹಿನ್ನೆಲೆಯಲ್ಲಿ ಅಮೆರಿಕ ಜತೆಗೆ ಇತ್ತೀಚೆಗೆ ಮಾಡಿಕೊಂಡಿರುವ ಮಧ್ಯಂತರ ವ್ಯಾಪಾರ ಒಪ್ಪಂದವನ್ನು ತಡೆಹಿಡಿದು, ಹೊಸದಾಗಿ ಮಾತುಕತೆ ಶುರು ಮಾಡುವಂತೆ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ಆಗ್ರಹಿಸಿದೆ.ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ‘ವಾಣಿಜ್ಯ ಸಚಿವ ಪಿಯೂಶ್ ಗೋಯಲ್ ಅವರಿಗೆ ಕೋರ್ಟ್ ತೀರ್ಪು ಯಾವಾಗ ಬೇಕಿದ್ದರೂ ಬರಬಹುದೆಂಬ ಮಾಹಿತಿ ಇತ್ತು. ಆದರೂ ಒಪ್ಪಂದಕ್ಕೆ ಆತುರ ತೋರಿದ್ದು ಏಕೆ? ’ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ, ‘ಈ ಘೋಷಣೆ ಮಾಡುವಂತೆ ಟ್ರಂಪ್‌ಗೆ ಮೋದಿ ಮನವಿ ಮಾಡಿರಬಹುದು ಎಂಬುದು ನಮ್ಮ ಭಾವನೆ’ ಎಂದೂ ತಿಳಿಸಿದ್ದಾರೆ.
ಕೋರ್ಟಲ್ಲಿ ಟ್ರಂಪ್‌ಗೆ ಸುಂಕ ಶಾಕ್ ಕೊಟ್ಟಿದ್ದು ಭಾರತ ಮೂಲದ ವಕೀಲರು
ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏಕಪಕ್ಷೀಯವಾಗಿ ಜಗತ್ತಿನ ಇತರ ರಾಷ್ಟ್ರಗಳ ಮೇಲೆ ಹೇರಿದ್ದ ತೆರಿಗೆ ರದ್ದುಗೊಳಿಸಿ ಸುಪ್ರೀಂ ಕೋರ್ಟ್ ತೀರ್ಪು ಬೆನ್ನಲ್ಲೇ, ಈ ವಿಚಾರದಲ್ಲಿ ಟ್ರಂಪ್ ಅವರ ಸುಂಕದ ವಿರುದ್ಧ ವಾದ ಮಂಡಿಸಿದ್ದು ಭಾರತ ಮೂಲದ ವಕೀಲ ನೀಲ್ ಕತ್ಯಾಲ್ ಹಾಗೂ ಪ್ರತೀಕ್ ಶಾ ಎಂಬ ವಿಷಯ ಗೊತ್ತಾಗಿದೆ,ಅಮೆರಿಕದ ಖ್ಯಾತ ವಕೀಲರಾದ ನೀಲ್ ಅವರು ಬರಾಕ್ ಒಬಾಮಾ ಅವಧಿಯಲ್ಲಿ ಸಾಲಿಟರ್ ಜನರಲ್ ಆಗಿಯೂ ಕರ್ತವ್ಯ ನಿರ್ವಹಿಸಿದ್ದರು. ಡೊನಾಲ್ಡ್ ಟ್ರಂಪ್ ವಿವಾದಾತ್ಮಕ ಸುಂಕ ನೀತಿಗಳನ್ನು ಪ್ರಶ್ನಿಸಿ, ಸಣ್ಣ ಉದ್ಯಮಿಗಳ ಗುಂಪಿನ ಪರವಾಗಿ ವಾದಿಸಿ ಕಾನೂನು ಹೋರಾಟದಲ್ಲಿ ಗುರುತಿಸಿಕೊಂಡಿದ್ದರು. ಇದೀಗ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿ ಗೆಲುವು ಸಾಧಿಸಿದ್ದಾರೆ. ತೀರ್ಪಿನ ಬೆನ್ನಲ್ಲೇ ಅವರು, ‘ಇದು ನಮಗೆ ಸಿಕ್ಕ ಜಯ’ ಎಂದು ಹರ್ಷಿಸಿದ್ದಾರೆ.
ಈ ಪ್ರಕರಣದಲ್ಲಿ ಭಾರತೀಯ-ಅಮೆರಿಕನ್ ವಕೀಲ ಪ್ರತೀಕ್ ಶಾ, ಸುಂಕ ಹೇರಿದ್ದ ಅಧ್ಯಕ್ಷರ ಅಧಿಕಾರವನ್ನು ಪ್ರಶ್ನಿಸಿದ ಎರಡು ಶೈಕ್ಷಣಿಕ ಆಟಿಕೆ ಕಂಪನಿಗಳಾದ ಲರ್ನಿಂಗ್ ರಿಸೋರ್ಸಸ್ ಮತ್ತು ಹ್ಯಾಂಡ್2ಮೈಂಡ್‌ನ ಪ್ರಮುಖ ಸಲಹೆಗಾರರಾಗಿದ್ದರು.
ಯಾರು ಈ ನೀಲ್?
1970ರಲ್ಲಿ ಶಿಕಾಗೋದಲ್ಲಿ ಜನಿಸಿದ ನೀಲ್ ಅವರ ತಂದೆ ತಾಯಿ ಇಬ್ಬರೂ ಭಾರತದಿಂದ ಅಮೆರಿಕಗೆ ವಲಸೆ ಹೋಗಿದ್ದರು. ತಾಯಿ ಮಕ್ಕಳ ತಜ್ಞೆ ಮತ್ತು ತಂದೆ ಎಂಜಿನಿಯರ್. ನೀಲ್ ಅವರು ಯೇಲ್ ಕಾನೂನೂ ಕಾಲೇಜಿನಲ್ಲಿ ಪದವಿ ಪಡೆದಿದ್ದರು. ಜಾರ್ಜ್‌ಟೌನ್ ವಿವಿಯಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲ ಪ್ರಾಧ್ಯಾಪಕರಾಗಿದ್ದರು. ಇದುವರೆಗೆ ಸುಪ್ರೀಂ ಕೋರ್ಟ್‌ನಲ್ಲಿ 54 ಪ್ರಕರಣಗಳನ್ನು ವಾದಿಸಿದ್ದಾರೆ.
