;Resize=(412,232))
ಜೋಗಿ
ಫಿಲಡೆಲ್ಫಿಯಾ : ಸಾವಿರಾರು ವರ್ಷಗಳ ಇತಿಹಾಸ ಮತ್ತು ಶ್ರೀಮಂತ ಪರಂಪರೆಯನ್ನು ಹೊಂದಿರುವ ಕನ್ನಡ ಭಾಷೆ ಇಂದಿನ ತಂತ್ರಜ್ಞಾನ ಹಾಗೂ ಡಿಜಿಟಲ್ ಯುಗದಲ್ಲಿಯೂ ತನ್ನ ಸ್ಥಾನವನ್ನು ಉಳಿಸಿಕೊಳ್ಳಬೇಕಾಗಿದೆ. ಅದಕ್ಕಾಗಿ ಕನ್ನಡಿಗರೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಅಮೆರಿಕದ ಫಿಲಡೆಲ್ಫಿಯಾದಲ್ಲಿ ನಡೆಯುತ್ತಿರುವ ಅಕ್ಕ ರಜತ ಮಹೋತ್ಸವ ವಿಶ್ವ ಕನ್ನಡ ಸಮ್ಮೇಳನದಲ್ಲಿ ಆನ್‌ಲೈನ್ ಮೂಲಕ ಸಂದೇಶ ನೀಡಿದ ಅವರು, ‘ಕನ್ನಡವನ್ನು ಕೇವಲ ಮಾತನಾಡುವ ಭಾಷೆಯಾಗಿ ನೋಡದೆ, ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ಹೊತ್ತುಕೊಳ್ಳಬೇಕು’ ಎಂದು ಕರೆ ನೀಡಿದರು.
‘ವಿದೇಶದಲ್ಲಿದ್ದರೂ ಕನ್ನಡವನ್ನು ಮರೆಯದೆ, ಭಾರತದಾದ್ಯಂತ ಕನ್ನಡದ ಕಂಪನ್ನು ಪಸರಿಸುವ ಪ್ರಯತ್ನ ಮಾಡುತ್ತಿದ್ದೀರಿ. ತಮ್ಮ ದೃಷ್ಟಿಯಲ್ಲಿ ಇದು ಕೇವಲ ಒಂದು ಕಾರ್ಯಕ್ರಮವಲ್ಲ; ಇದು ಕನ್ನಡದ ಜಾತ್ರೆ, ಕರ್ನಾಟಕದ ಹಬ್ಬ ಮತ್ತು ನಮ್ಮ ನೆನಪುಗಳನ್ನು ಮತ್ತೆ ಸ್ಪರ್ಶಿಸುವ ಪವಿತ್ರ ಕ್ಷಣ’ ಎಂದರು.
‘ಇಂದಿನ ಜಾಗತಿಕ ಯುಗದಲ್ಲಿ ಕನ್ನಡದ ಅಸ್ತಿತ್ವ ಮತ್ತು ಬೆಳವಣಿಗೆಗಾಗಿ ಹೊಸ ಆಲೋಚನೆಗಳೊಂದಿಗೆ ಕೆಲಸ ಮಾಡಬೇಕಾಗಿದೆ. ಕನ್ನಡದ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಬದುಕಿನ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸ ನಿರಂತರವಾಗಿ ನಡೆಯಬೇಕು. ಕನ್ನಡಿಗರು ಎಲ್ಲಿದ್ದರೂ ಕನ್ನಡದ ಬಗ್ಗೆ ಹೆಮ್ಮೆ ಹೊಂದಿ, ಕನ್ನಡದ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡಬೇಕು’ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.
‘ಕನ್ನಡ ಕೇವಲ ಒಂದು ಭಾಷೆಯಲ್ಲ. ಅದು ಒಂದು ಬದುಕಿನ ಪರಂಪರೆ, ಸಂಸ್ಕೃತಿ, ಜೀವನ ವಿಧಾನ ಮತ್ತು ಭಾವನೆಯ ಪ್ರತೀಕ. ಕರ್ನಾಟಕದ ಕರಾವಳಿಯಿಂದ ಉತ್ತರ ಕರ್ನಾಟಕದವರೆಗೆ, ಮಲೆನಾಡಿನಿಂದ ಹೈದರಾಬಾದ್ ಕರ್ನಾಟಕದವರೆಗೆ, ಮೈಸೂರು ಭಾಗದಿಂದ ಬೆಂಗಳೂರಿನವರೆಗೆ ಪ್ರತಿಯೊಂದು ಪ್ರದೇಶವೂ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಈ ವೈವಿಧ್ಯಗಳೆಲ್ಲ ಒಂದಾಗಿ ಸೇರಿದಾಗಲೇ ಕರ್ನಾಟಕದ ಸಂಪೂರ್ಣ ಚಿತ್ರ ಮೂಡುತ್ತದೆ. ಇದೇ ವೈವಿಧ್ಯ ಕನ್ನಡಿಗರ ಶಕ್ತಿಯೂ ಆಗಿದೆ’ ಎಂದು ಅವರು ಅಭಿಪ್ರಾಯಪಟ್ಟರು.
‘ಕರ್ನಾಟಕದ ನೆಲದಲ್ಲಿ ಅನೇಕ ಮಹನೀಯರು ತಮ್ಮ ಚಿಂತನೆ, ಸಾಹಿತ್ಯ ಮತ್ತು ಸಮಾಜಮುಖಿ ಕಾರ್ಯಗಳ ಮೂಲಕ ಕನ್ನಡದ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದಾರೆ. ದಾಸ ಸಾಹಿತ್ಯದ ಮೂಲಕ ಭಕ್ತಿ ಮತ್ತು ದಾಸೋಹದ ಸಂದೇಶವನ್ನು ಸಾರಿದವರು, ವಚನಕಾರರು ಸಾಮಾಜಿಕ ಸಮಾನತೆಯ ಧ್ವನಿಯನ್ನು ಎತ್ತಿದವರು, ಕುವೆಂಪು ವಿಶ್ವಮಾನವ ಸಂದೇಶವನ್ನು ನೀಡಿದವರು, ಬೇಂದ್ರೆ ಕಾವ್ಯದ ಮೂಲಕ ಕನ್ನಡದ ಭಾವಲೋಕವನ್ನು ಶ್ರೀಮಂತಗೊಳಿಸಿದವರು, ಶಿವರಾಮ ಕಾರಂತರು ಜ್ಞಾನ ಮತ್ತು ಸೃಜನಶೀಲತೆಯ ಹೊಸ ಆಯಾಮಗಳನ್ನು ತೆರೆದವರು- ಇಂತಹ ಅನೇಕ ಮಹನೀಯರ ಕೊಡುಗೆ ಕನ್ನಡದ ಪರಂಪರೆಯನ್ನು ಗಟ್ಟಿಗೊಳಿಸಿದೆ’ ಎಂದು ಅವರು ಸ್ಮರಿಸಿದರು.
ಕರ್ನಾಟಕವನ್ನು ಕಟ್ಟುವಲ್ಲಿ ರೈತರ ಪಾತ್ರವನ್ನು ಅವರು ವಿಶೇಷವಾಗಿ ಉಲ್ಲೇಖಿಸಿದರು. ನಮ್ಮ ರೈತರು ಅನ್ನವನ್ನು ಬೆಳೆಯುತ್ತಾರೆ; ಕಾರ್ಮಿಕರು ನಗರಗಳನ್ನು ಕಟ್ಟುತ್ತಾರೆ; ಶಿಕ್ಷಕರು ಮುಂದಿನ ಪೀಳಿಗೆಯನ್ನು ರೂಪಿಸುತ್ತಾರೆ. ಇವರ ಪರಿಶ್ರಮವೇ ಕರ್ನಾಟಕದ ನಿಜವಾದ ಶಕ್ತಿ. ಈ ಎಲ್ಲರ ಕೊಡುಗೆಯನ್ನು ಗೌರವಿಸುವುದೇ ಕನ್ನಡವನ್ನು ಗೌರವಿಸುವುದಾಗಿದೆ ಎಂದು ಅವರು ಹೇಳಿದರು.
ನಾಡು, ನುಡಿ ಮತ್ತು ಸಂಸ್ಕೃತಿಗೆ ಭೌಗೋಳಿಕ ಸೀಮಾರೇಖೆಗಳಿಲ್ಲ. ಅಮೆರಿಕದ ನೆಲದಲ್ಲಿದ್ದರೂ ಕನ್ನಡಿಗರ ಹೃದಯದಲ್ಲಿ ಕನ್ನಡ ಜೀವಂತವಾಗಿದ್ದರೆ, ಅದೇ ನಮ್ಮ ಭಾಷೆಯ ನಿಜವಾದ ವೈಭವ. ಅಕ್ಕ ಸಂಸ್ಥೆ ಕಳೆದ 25 ವರ್ಷಗಳಿಂದ ಈ ಸತ್ಯವನ್ನು ಬದುಕಿನಲ್ಲಿ ಸಾಕಾರಗೊಳಿಸುತ್ತಾ ಬಂದಿದೆ. ಈ ರಜತ ಮಹೋತ್ಸವವು ಕನ್ನಡಿಗರನ್ನು ಬೆಸೆಯುವ, ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಮಹತ್ವದ ಸಂಕಲ್ಪವಾಗಲಿ.
- ಶಿವಮೂರ್ತಿ ಶಿವಾಚಾರ್ಯ ಶ್ರೀ, ತರಳಬಾಳು ಮಠ
ವಿದೇಶದ ನೆಲದಲ್ಲಿ ಕನ್ನಡದ ಕಂಪನ್ನು ಪಸರಿಸುತ್ತಿರುವ ನೀವು ಕೇವಲ ಕನ್ನಡವನ್ನು ಉಳಿಸುತ್ತಿಲ್ಲ; ಒಂದು ಮಹಾನ್ ಸಂಸ್ಕೃತಿಯ ಜೀವಂತ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುತ್ತಿದ್ದೀರಿ. ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಬೇರುಗಳನ್ನು ಮರೆಯದೆ, ಪಡೆದ ಜ್ಞಾನವನ್ನು ಮಾತೃಭೂಮಿಯ ಉನ್ನತಿಗೆ ಅರ್ಪಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಅದೇ ನಮ್ಮ ಸಂಸ್ಕೃತಿಯ ನಿಜವಾದ ಶಕ್ತಿ, ಅದೇ ಅಕ್ಕ ಸಮ್ಮೇಳನದ ಸಾರ್ಥಕತೆ.
ನಿರ್ಮಲಾನಂದನಾಥ ಶ್ರೀ, ಆದಿಚುಂಚನಗಿರಿ ಮಠ