ಭೀಕರ ಪ್ರವಾಹದಿಂದ ಸಾವಿರಾರು ಮಂದಿಯನ್ನು ಬಲಿ ಪಡೆದ ನೇಪಾಳದಲ್ಲಿ ವೀರೋಚಿತ ರಕ್ಷಣಾ ಕಾರ್ಯವೊಂದು ಶುಕ್ರವಾರ ನಡೆದಿದೆ. ಕಳೆದ 10 ದಿನದಿಂದ ತ್ರಿಶೂಲಿ ಜಲವಿದ್ಯುತ್ ಯೋಜನೆಯ ಸುರಂಗದೊಳಗೆ 170 ಮೀ. ಆಳದಲ್ಲಿ ಸಿಲುಕಿದ್ದ ಇಬ್ಬರನ್ನು ಜೀವಂತವಾಗಿ ಪವಾಡಸದೃಶ ರೀತಿಯಲ್ಲಿ ರಕ್ಷಿಸಲಾಗಿದೆ.
ಕಾಠ್ಮಂಡು : ಭೀಕರ ಪ್ರವಾಹದಿಂದ ಸಾವಿರಾರು ಮಂದಿಯನ್ನು ಬಲಿ ಪಡೆದ ನೇಪಾಳದಲ್ಲಿ ವೀರೋಚಿತ ರಕ್ಷಣಾ ಕಾರ್ಯವೊಂದು ಶುಕ್ರವಾರ ನಡೆದಿದೆ. ಕಳೆದ 10 ದಿನದಿಂದ ತ್ರಿಶೂಲಿ ಜಲವಿದ್ಯುತ್ ಯೋಜನೆಯ ಸುರಂಗದೊಳಗೆ 170 ಮೀ. ಆಳದಲ್ಲಿ ಸಿಲುಕಿದ್ದ ಇಬ್ಬರನ್ನು ಜೀವಂತವಾಗಿ ಪವಾಡಸದೃಶ ರೀತಿಯಲ್ಲಿ ರಕ್ಷಿಸಲಾಗಿದೆ. ವಿಶೇಷವೆಂದರೆ ರಕ್ಷಣೆಗೆ ಒಳಗಾದ ಸಿಬ್ಬಂದಿಯಲ್ಲಿ ಒಬ್ಬರು, ‘ನಾನು ಇತರ ಸಿಬ್ಬಂದಿಯನ್ನು ರಕ್ಷಿಸಿ ಅಲ್ಲೇ ಸಿಲುಕಿದೆ. ಕೊನೆಗೆ ಹರೇಕೃಷ್ಣ ಮಂತ್ರ ಪಠಿಸುತ್ತ ಜೀವಂತವಾಗಿ ಬದುಕಿದೆ’ ಎಂದಿದ್ದಾರೆ. ಇವರು ರಕ್ಷಣೆಗೆ ಒಳಗಾಗಿದ್ದು ಕೃಷ್ಣ ಜನ್ಮಾಷ್ಟಮಿಯಿಂದು ಎಂಬುದು ವಿಶೇಷ.
ತ್ರಿಶೂಲಿ ಜಲವಿದ್ಯುತ್ ಯೋಜನೆಯ 3ಎ ಸಂಖ್ಯೆಯ ಸುರಂಗದ ಒಳಗೆ ಸಿಲುಕಿದ್ದ ಕಬೀರ್ ಮಹಾರ್ಜನ್ (45). ಸಂಜಯ್ ಸಾಹ್ (30) ಪವಾಡ ಸದೃಶವಾಗಿ ಬದುಕುಳಿದವರು. ಮಹಾರ್ಜನ್ ಈ ಯೋಜನೆಗೆ ಯಾಂತ್ರಿಕ ಮೇಲ್ವಿಚಾರಕರಾಗಿದ್ದರೆ, ಸಾಹ್ ಫೋರ್‌ಮ್ಯಾನ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು.
ಇಬ್ಬರೂ ಆ.26ರ ಸಂಭವಿಸಿದ ಪ್ರವಾಹದ ಬಳಿಕ ನಾಪತ್ತೆಯಾಗಿದ್ದರು. ಈ ಮಧ್ಯೆ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದ ಸಿಬ್ಬಂದಿಗೆ ಇತ್ತೀಚೆಗೆ ಸುರಂಗದ ಒಳಗಡೆಯಿಂದ ಮನುಷ್ಯರ ಶಬ್ದ ಕೇಳಿ ಬಂದಿತ್ತು. ಆಗ ನೇಪಾಳ ಸೇನೆ ಮತ್ತು ಸಶಸ್ತ್ರ ಪೊಲೀಸ್ ಪಡೆ ಸಿಬ್ಬಂದಿಯು, ಸುರಂಗದೊಳಗೆ ಸಿಲುಕಿದ್ದ ಇಬ್ಬರನ್ನು ರಕ್ಷಿಸಿ ಹೊರ ಕರೆದುಕೊಂಡು ಬಂದಿದ್ದಾರೆ. ಇಬ್ಬರೂ ಅಸ್ವಸ್ಥರಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಮಹಾರ್ಜನ್ ಸ್ಥಿತಿ ಗಂಭೀರವಾಗಿದೆ.
ಇತರರ ರಕ್ಷಿಸಿದೆ, ಹರೇಕೃಷ್ಣ ಮಂತ್ರ ಜಪಿಸಿದೆ:
ಆಸ್ಪತ್ರೆಗೆ ದಾಖಲಾಗುವಾಗ ದುರಂತದ ಕ್ಷಣಗಳನ್ನು ಸಂಕ್ಷಿಪ್ತವಾಗಿ ವಿವರಿಸಿದ ಸಾಹ್, ‘ಅಪಘಾತ ಸಂಭವಿಸಿದಾಗ ನಾನು ಸುರಂಗದ ನಿಯಂತ್ರಣ ಕೊಠಡಿಯಲ್ಲಿ ಕೆಲಸ ಮಾಡುತ್ತಿದ್ದೆ. ಹೀಗಾಗಿ ಎಲ್ಲರ ಜೀವ ಉಳಿಸುವುದು ನನ್ನ ಜವಾಬ್ದಾರಿಯಾಗಿತ್ತು. ದುರಂತದ ದಿನ ಪ್ರವಾಹದ ನೀರು ಹೊಕ್ಕ ಕೂಡಲೇ ಎಲ್ಲರೂ ಓಡುವಂತೆ ತಾನು ಒತ್ತಾಯಿಸಿದೆ. ಆದರೆ ಇತರರು ಹೋಗುವ ಹೊತ್ತಿಗೆ ನಾನು ತಪ್ಪಿಸಿಕೊಳ್ಳಲು ತುಂಬಾ ತಡವಾಗಿತ್ತು. ಅಲ್ಲಿಯೇ ಸಿಲುಕಿಬಿಟ್ಟೆ’ ಎಂದರು.
‘ಇದಾದ ಬಳಿಕ ಸುರಂಗದೊಳಗೆ ನಾನು ಕಳೆದ 9 ದಿನಗಳಿಂದಲೂ ಹರೇ ಕೃಷ್ಣ ಮಂತ್ರವನ್ನು ಜಪಿಸುತ್ತಿದ್ದೆ’ ಎಂದು ಅವರು ಭಾವುಕರಾಗಿ ನುಡಿದರು.
ಇನ್ನು ಈ ಸುರಂಗದೊಳಗೆ ಪ್ರವಾಹ ಅಪ್ಪಳಿಸುವ ಸಂದರ್ಭದಲ್ಲಿ ಕೆಲಸ ಹಲವಾರು ಸಿಬ್ಬಂದಿ ಮಾಡುತ್ತಿದ್ದರು, ಹೀಗಾಗಿ ಇನ್ನೂ 4-5 ಮಂದಿ ಇಲ್ಲಿಯೇ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ ಎಂದೂ ಸಾಹ್ ಹೇಳಿದರು.
ಕಂಡು ಕೇಳರಿಯದ ರಕ್ಷಣೆ- ತಜ್ಞ ಡಿಕ್ಸ್:
2023ರ ಉತ್ತರಾಖಂಡ ಸುರಂಗ ರಕ್ಷಣಾ ಕಾರ್ಯದಲ್ಲಿ ತಮ್ಮ ಪಾತ್ರಕ್ಕಾಗಿ ಭಾರತದಲ್ಲಿ ಪ್ರಸಿದ್ಧರಾಗಿದ್ದ ಪ್ರಸಿದ್ಧ ಆಸ್ಟ್ರೇಲಿಯಾದ ಸುರಂಗ ರಕ್ಷಣಾ ತಜ್ಞ ಅರ್ನಾಲ್ಡ್ ಡಿಕ್ಸ್, ಈಗ ಸಿಡ್ನಿಯಿಂದಲೇ ರಕ್ಷಣಾ ಕಾರ್ಯಾಚರಣೆಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಅವರು ಈ ಬಗ್ಗೆ ಮಾತನಾಡಿ, ‘ಸುರಂಗದಿಂದ ಇಬ್ಬರು ಕಾರ್ಮಿಕರನ್ನು ರಕ್ಷಿಸಿದ್ದು ಅಸಾಧಾರಣ ಮತ್ತು ಜಗತ್ತು ಇಲ್ಲಿಯವರೆಗೆ ನೋಡಿರದ ಸಂಗತಿ’ ಎಂದು ಬಣ್ಣಿಸಿದ್ದಾರೆ.
1300ರ ಸನಿಹ ಸಾವಿನ ಸಂಖ್ಯೆ
ಕಾಠ್ಮಂಡು: ನೇಪಾಳ ಪ್ರವಾಹ ದುರಂತದಲ್ಲಿ ಸಾವನ್ನಪ್ಪಿದ್ದವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಶುಕ್ರವಾರ ಸಂಜೆವರೆಗೆ 1295 ಜನರು ಪ್ರಾಣ ಕಳೆದುಕೊಂಡಿದ್ದಾರೆ. 4798ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದು, ಶೋಧ ಕಾರ್ಯಾಚರಣೆ ಮುಂದುವರೆದಿದೆ. ಕಣ್ಮರೆಯಾದವರಲ್ಲಿ 600 ಮಕ್ಕಳು ಕೂಡ ಸೇರಿದ್ದಾರೆ ಎಂದು ಸರ್ಕಾರ ಹೇಳಿದೆ.

