ಉತ್ತರ ಅಮೆರಿಕ ಸೇರಿದಂತೆ ವಿಶ್ವದ ವಿವಿಧ ಭಾಗಗಳ ಕನ್ನಡಿಗರನ್ನು ಒಂದೆಡೆ ಸೇರಿಸುವ ಅಕ್ಕ ವಿಶ್ವ ಕನ್ನಡ ಸಮ್ಮೇಳನ ಶುಕ್ರವಾರದಿಂದ ಫಿಲಡೆಲ್ಫಿಯಾದಲ್ಲಿ ಆರಂಭವಾಗಲಿದೆ. ಸೆಪ್ಟೆಂಬರ್ 4ರಿಂದ 6ರವರೆಗೆ ನಡೆಯಲಿರುವ ಸಮ್ಮೇಳನಕ್ಕೆ ಪೆನ್ಸಿಲ್ವೇನಿಯಾ ಕನ್ವೆನ್ಷನ್ ಸೆಂಟರ್ ಆತಿಥ್ಯ ವಹಿಸಲಿದೆ.

ಜೋಗಿ

ಫಿಲಡೆಲ್ಫಿಯಾ : ಉತ್ತರ ಅಮೆರಿಕ ಸೇರಿದಂತೆ ವಿಶ್ವದ ವಿವಿಧ ಭಾಗಗಳ ಕನ್ನಡಿಗರನ್ನು ಒಂದೆಡೆ ಸೇರಿಸುವ ಅಕ್ಕ ವಿಶ್ವ ಕನ್ನಡ ಸಮ್ಮೇಳನ ಶುಕ್ರವಾರದಿಂದ ಫಿಲಡೆಲ್ಫಿಯಾದಲ್ಲಿ ಆರಂಭವಾಗಲಿದೆ. ಸೆಪ್ಟೆಂಬರ್ 4ರಿಂದ 6ರವರೆಗೆ ನಡೆಯಲಿರುವ ಸಮ್ಮೇಳನಕ್ಕೆ ಪೆನ್ಸಿಲ್ವೇನಿಯಾ ಕನ್ವೆನ್ಷನ್ ಸೆಂಟರ್ ಆತಿಥ್ಯ ವಹಿಸಲಿದೆ.

ಈ ಬಾರಿಯ ಸಮ್ಮೇಳನ ಅಕ್ಕ ಸಂಘಟನೆಯ ಪಾಲಿಗೆ ಮೈಲಿಗಲ್ಲು. ಅಕ್ಕ ತನ್ನ 25ನೇ ವರ್ಷವನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಈ ಸಲದ ಸಮ್ಮೇಳನವನ್ನು ಅತ್ಯಂತ ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಅಕ್ಕ ಬಳಗ ಪಣ ತೊಟ್ಟಿದೆ.

ಈ ಸಮ್ಮೇಳನದ ವಿಶೇಷ:

25ನೇ ವರ್ಷಾಚರಣೆಯ ಸಂದರ್ಭದಲ್ಲಿ ನಡೆಯುತ್ತಿರುವ ಈ ಬಾರಿಯ ಸಮ್ಮೇಳನದಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ಯುವಜನ, ತಂತ್ರಜ್ಞಾನ, ಉದ್ಯಮ, ವೈದ್ಯಕೀಯ, ಸಿನಿಮಾ ಹಾಗೂ ಕ್ರೀಡೆಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೂ ಆದ್ಯತೆ ನೀಡಲಾಗಿದೆ.

ಅಕ್ಕ ಐಡಲ್, ಶಾರ್ಟ್ ಫಿಲ್ಮ್ ಫೆಸ್ಟಿವಲ್, ಸಿನಿಗನ್ನಡ ಫಿಲ್ಮ್ ಫೆಸ್ಟಿವಲ್, ಹ್ಯಾಕಥಾನ್, ಅಕ್ಕ ಟೀಮ್ ಒಲಿಂಪಿಕ್ಸ್, ಕರಿಯರ್ ಕನೆಕ್ಟ್, ಮಹಿಳಾ ವೇದಿಕೆ, ಬಿಸಿನೆಸ್ ಫೋರಂ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಮೂರು ದಿನಗಳ ಕಾಲ ನಡೆಯಲಿವೆ.

ಕೃತಕ ಬುದ್ಧಿಮತ್ತೆ, ರೋಬೋಟಿಕ್ಸ್, ಎಸ್‌ಟಿಇಎಂ ಹಾಗೂ ನವೀನ ತಂತ್ರಜ್ಞಾನಗಳ ಜತೆಗೆ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಬೆಸೆಯುವ ಪ್ರಯತ್ನವೂ ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿದೆ.

ಅಕ್ಕ ಆರಂಭದ ಚರಿತ್ರೆ:

ಉತ್ತರ ಅಮೆರಿಕದ ಕನ್ನಡಿಗರನ್ನು ಸಂಘಟಿಸುವ ಉದ್ದೇಶದಿಂದ 1998ರಲ್ಲಿ ಅಕ್ಕ ಸಂಘಟನೆಯ ರೂಪುಗೊಳ್ಳುವ ಪ್ರಕ್ರಿಯೆ ಆರಂಭವಾಯಿತು. ಅದೇ ವರ್ಷ ಫೀನಿಕ್ಸ್‌ನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಅಕ್ಕ ಸಂಘಟನೆಯ ಹುಟ್ಟಿಗೆ ಚಾಲನೆ ದೊರೆಯಿತು.

2000ರಲ್ಲಿ ಹ್ಯೂಸ್ಟನ್‌ನಲ್ಲಿ ಮೊದಲ ಅಕ್ಕ ವಿಶ್ವ ಕನ್ನಡ ಸಮ್ಮೇಳನ ನಡೆಯಿತು. 2002ರಲ್ಲಿ ಡೆಟ್ರಾಯಿಟ್‌ನಲ್ಲಿ ನಡೆದ ಸಮ್ಮೇಳನದ ಮೂಲಕ ಅಕ್ಕದ ಸಮ್ಮೇಳನಗಳ ಸರಣಿ ಮತ್ತಷ್ಟು ವಿಸ್ತರಿಸಿತು. ಬಳಿಕ ಅಮೆರಿಕದ ವಿವಿಧ ನಗರಗಳಲ್ಲಿ ಸಮ್ಮೇಳನಗಳು ನಡೆದಿದ್ದು, ಇದೀಗ ಫಿಲಡೆಲ್ಫಿಯಾ ಆತಿಥ್ಯ ವಹಿಸುತ್ತಿದೆ.

ಅಕ್ಕದ ಸಂಘಟನಾ ಬೆಳವಣಿಗೆಯಲ್ಲಿ ಡಾ. ಅಮರನಾಥ ಗೌಡ ಮತ್ತು ಮಧು ರಂಗಯ್ಯ ಸೇರಿದಂತೆ ಹಲವು ಪದಾಧಿಕಾರಿಗಳು ಪ್ರಮುಖ ಪಾತ್ರ ವಹಿಸಿದ್ದಾರೆ.

ಈ ಸಮ್ಮೇಳನ ಯಾಕೆ ಮುಖ್ಯ?:

ವಿದೇಶದಲ್ಲಿ ನೆಲೆಸಿರುವ ಕನ್ನಡಿಗರನ್ನು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಮೂಲಕ ಒಂದೆಡೆ ಸೇರಿಸುವ ವೇದಿಕೆಯಾಗಿ ಅಕ್ಕ ಸಮ್ಮೇಳನ ರೂಪುಗೊಂಡಿದೆ. ವಿಶೇಷವಾಗಿ ಅಮೆರಿಕದಲ್ಲಿ ಬೆಳೆದಿರುವ ಎರಡನೇ ಮತ್ತು ಮೂರನೇ ತಲೆಮಾರಿನ ಕನ್ನಡಿಗರನ್ನು ಕನ್ನಡದ ಜತೆಗೆ ಬೆಸೆಯುವುದು ಈ ಸಮ್ಮೇಳನದ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ.

ಕನ್ನಡವನ್ನು ಕೇವಲ ಸಾಂಸ್ಕೃತಿಕ ನೆನಪಾಗಿ ಉಳಿಸದೆ, ಹೊಸ ತಲೆಮಾರಿನ ಬದುಕು, ಶಿಕ್ಷಣ, ತಂತ್ರಜ್ಞಾನ ಮತ್ತು ವೃತ್ತಿಜೀವನದ ಜತೆಗೆ ಬೆಸೆಯುವ ಪ್ರಯತ್ನವೂ ಈ ಬಾರಿ ಕಾಣಿಸುತ್ತಿದೆ. ಈ ಕಾರಣದಿಂದ ಸಮ್ಮೇಳನದ ವ್ಯಾಪ್ತಿ ಸಾಂಸ್ಕೃತಿಕ ಕಾರ್ಯ ಕ್ರಮಗಳನ್ನು ಮೀರಿ ವಿಸ್ತರಿಸಿದೆ.

ಉದ್ಘಾಟನೆಗೆ ಎಚ್‌.ಡಿ. ಕುಮಾರಸ್ವಾಮಿ:

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಉದ್ಘಾಟನೆ ನೆರವೇರಿಸಲಿದ್ದಾರೆ. ಕನ್ನಡದ ಸಿನಿಮಾ ಮತ್ತು ಸಾಂಸ್ಕೃತಿಕ ಕ್ಷೇತ್ರದ ಪ್ರಮುಖ ಕಾರ್ಯಕ್ರಮಗಳಿಗೂ ಸಮ್ಮೇಳನದಲ್ಲಿ ವಿಶೇಷ ಸ್ಥಾನ ನೀಡಲಾಗಿದೆ. ಸಮ್ಮೇಳನದ ಪ್ರಮುಖ ವೇದಿಕೆಗೆ ‘ಪುನೀತ್ ರಾಜ್‌ಕುಮಾರ್ ವೇದಿಕೆ’ ಎಂದು ಹೆಸರಿಡಲಾಗಿದೆ.

*ವಿಶ್ವ ಕನ್ನಡಿಗರ ಸಂಘಟನೆ ಗುರಿ*

ಉತ್ತರ ಅಮೆರಿಕದ ಕನ್ನಡಿಗರನ್ನು ಸಂಘಟಿಸುವ ಉದ್ದೇಶದಿಂದ 1998ರಲ್ಲಿ ಅಕ್ಕ ಸಂಘಟನೆ ಆರಂಭ

ವಿದೇಶದ ಕನ್ನಡಿಗರನ್ನು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಮೂಲಕ ಒಂದೆಡೆ ಸೇರಿಸುವ ವೇದಿಕೆ

‘ಅಕ್ಕ’ಗೆ ಈಗ 25ರ ಸಂಭ್ರಮ. ಈ ನಿಮಿತ್ತ ಸಾಹಿತ್ಯ, ಸಾಂಸ್ಕೃತಿಕ, ಇತ್ಯಾದಿ ಸಮಾರಂಭ ಆಯೋಜನೆ

ಸಮ್ಮೇಳನದ ಪ್ರಮುಖ ವೇದಿಕೆಗೆ ‘ಪುನೀತ್ ರಾಜ್‌ಕುಮಾರ್ ವೇದಿಕೆ’ ಎಂದು ಹೆಸರು. ನಟನಿಗೆ ಗೌರವ

3 ದಿನಗಳ ವಿಶೇಷ ಸಮಾರಂಭಕ್ಕೆ ಕೇಂದ್ರ ಸಚಿವ ಎಚ್‌ಡಿಕೆ ಚಾಲನೆ. ಕರ್ನಾಟಕದ ಅನೇಕರು ಭಾಗಿ