ನೇಪಾಳದಲ್ಲಿ ಆ.26ರಂದು ಸಂಭವಿಸಿದ ಮಹಾಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ ಈಗ 1130ಕ್ಕೇರಿದೆ. ಇನ್ನೂ ಸಾವಿರಾರು ಮಂದಿ ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ಹುಡುಕಾಟ ಮುಂದುವರೆದಿದೆ.
ಕಾಠ್ಮಂಡು: ನೇಪಾಳದಲ್ಲಿ ಆ.26ರಂದು ಸಂಭವಿಸಿದ ಮಹಾಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ ಈಗ 1130ಕ್ಕೇರಿದೆ. ಇನ್ನೂ ಸಾವಿರಾರು ಮಂದಿ ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ಹುಡುಕಾಟ ಮುಂದುವರೆದಿದೆ. ಪ್ರವಾಹಪೀಡಿತ ಪ್ರದೇಶದಿಂದ ಈಗಾಗಲೇ 6,541 ಮಂದಿಯನ್ನು ಭದ್ರತಾ ಸಿಬ್ಬಂದಿ ರಕ್ಷಿಸಿದ್ದಾರೆ. ಇನ್ನೂ ಸಾವಿರಾರು ಮಂದಿ ನಾಪತ್ತೆಯಾಗಿರುವ ಶಂಕೆ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಕ್ಕೆ ಚುರುಕು ನೀಡಲಾಗಿದೆ. ಇದಕ್ಕಾಗಿ 7,912 ಮಂದಿಯನ್ನು ನಿಯೋಜಿಸಲಾಗಿದೆ.
ಕೋವಿಡ್ ವೇಳೆ ಮಿಂಚಿದ್ದ ಸೋನು ಸೂದ್ ಈಗ ನೇಪಾಳದ ನೆರವಿಗೆ
ಮುಂಬೈ: ನೇಪಾಳದಲ್ಲಿ ಸಂಭವಿಸಿದ ವಿನಾಶಕಾರಿ ಪ್ರವಾಹದಿಂದ ಸಂತ್ರಸ್ತರಾದ ಜನರಿಗೆ ಸಹಾಯ ಮಾಡಲು ನಟ ಸೋನು ಸೂದ್ ತಮ್ಮ ‘ಸೂದ್ ಚಾರಿಟಿ ಫೌಂಡೇಶನ್’ ತಂಡದೊಂದಿಗೆ ಮಂಗಳವಾರ ಕಾಠ್ಮಂಡುವಿಗೆ ಆಗಮಿಸಿದ್ದಾರೆ. ಅಲ್ಲಿ ಅವರು ನಿರ್ವಸಿತ ಕುಟುಂಬಗಳಿಗೆ ಆಹಾರ ಪದಾರ್ಥ, ಕಂಬಳಿ ಹಾಗೂ ಇತರೆ ಅಗತ್ಯ ವಸ್ತುಗಳನ್ನು ವಿತರಿಸಿದರು. ಕೋವಿಡ್ ಲಾಕ್‌ಡೌನ್ ವೇಳೆ ವಲಸೆ ಕಾರ್ಮಿಕರಿಗೆ ನೆರವು, 2025ರ ಪಂಜಾಬ್ ಪ್ರವಾಹ ಪರಿಹಾರ ಮತ್ತು ದುಬೈನಲ್ಲಿ ಸಿಲುಕಿದ್ದ ಭಾರತೀಯರಿಗೆ ವಸತಿ ವ್ಯವಸ್ಥೆ ಕಲ್ಪಿಸುವ ಮೂಲಕ ಸೋನು ಸೂದ್ ಸಾಕಷ್ಟು ಮೆಚ್ಚುಗೆಗೆ ಪಾತ್ರರಾಗಿದ್ದರು.
ನೆರವು ನೀಡಿದ ಭಾರತಕ್ಕೆ ಸಂಸತ್ತಲ್ಲಿ ನೇಪಾಳ ಪಿಎಂ ಬಾಲೇನ್ ಶಾ ಧನ್ಯವಾದ
ಕಾಠ್ಮಂಡು: ಇತ್ತೀಚೆಗೆ ತಮ್ಮ ದೇಶ ಭೀಕರ ಪ್ರವಾಹಕ್ಕೆ ತುತ್ತಾದಾಗ ಸಕಾಲದಲ್ಲಿ ನೆರವು ನೀಡಿದ ಭಾರತ ಮತ್ತು ಚೀನಾಕ್ಕೆ ನೇಪಾಳ ಪ್ರಧಾನಿ ಬಾಲೇಂದ್ರ ಶಾ ಧನ್ಯವಾದ ತಿಳಿಸಿದ್ದಾರೆ.
ಸಂಸತ್ತಿನಲ್ಲಿ ಮಾತನಾಡಿದ ಅವರು, ‘ಇಂತಹ ಭಾರಿ ದುರಂತದ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ನೆರವನ್ನು ನಿರಾಕರಿಸುವ ಪ್ರಶ್ನೆಯೇ ಉದ್ಭವಿಸಲಿಲ್ಲ. ನಮ್ಮ ಮಿತ್ರರಾಷ್ಟ್ರಗಳಾದ ಚೀನಾ ಮತ್ತು ಭಾರತ ತಂತ್ರಜ್ಞರನ್ನು ಕಳುಹಿಸಿದ್ದವು. ಮೊದಲ ದಿನದಿಂದಲೇ, ಹಾನಿಯ ಪ್ರಮಾಣವನ್ನು ಪರೀಕ್ಷಿಸಲು ವಿವಿಧ ಪ್ರದೇಶಗಳಲ್ಲಿ ವೈಮಾನಿಕ ಪರೀಕ್ಷೆ ನಡೆಸಿದ್ದವು. ಅದು ಅಸಾಧಾರಣ ಪರಿಸ್ಥಿತಿಯಾಗಿತ್ತು’ ಎಂದು ವಿವರಿಸಿದ್ದಾರೆ. ಪ್ರವಾಹಪೀಡಿತ ನೇಪಾಳಕ್ಕೆ ಭಾರತ ಟನ್‌ಗಟ್ಟಲೆ ಪರಿಹಾರ ಸಾಮಗ್ರಿಗಳನ್ನು ಕಳಿಸಿಕೊಟ್ಟಿದೆ.
