ಹಿಮಗಡ್ಡೆ ಕುಸಿತದಿಂದಾಗಿ ಬುಧವಾರ ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ ಸಿಲುಕಿ ಶನಿವಾರದ ವರೆಗೆ ಒಟ್ಟು 669 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅತ್ತ ಸುಮಾರು 183 ಭಾರತೀಯರು ಸೇರಿ 2 ಸಾವಿರ ಜನ ಕಾಣೆಯಾಗಿದ್ದಾರೆ.

ಕಾಠ್ಮಂಡು: ಹಿಮಗಡ್ಡೆ ಕುಸಿತದಿಂದಾಗಿ ಬುಧವಾರ ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ ಸಿಲುಕಿ ಶನಿವಾರದ ವರೆಗೆ ಒಟ್ಟು 669 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅತ್ತ ಸುಮಾರು 183 ಭಾರತೀಯರು ಸೇರಿ 2 ಸಾವಿರ ಜನ ಕಾಣೆಯಾಗಿದ್ದಾರೆ. ಈಗಾಗಲೇ 163 ವಿದೇಶಿಯರು ಸೇರಿದಂತೆ ಸುಮಾರು 2,500 ಜನರನ್ನು ರಕ್ಷಿಸಲಾಗಿದೆ.

ನೇಪಾಳದ ರಾಷ್ಟ್ರೀಯ ವಿಪತ್ತು ಅಪಾಯ ತಗ್ಗಿಸುವಿಕೆ ಮತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಆರ್‌ಆರ್‌ಎಂಎ) ನೀಡಿರುವ ಮಾಹಿತಿ ಪ್ರಕಾರ 8 ಜಿಲ್ಲೆಗಳಲ್ಲಿ ಮೃತದೇಹಗಳು ಪತ್ತೆಯಾಗಿವೆ. ಚಿತ್ವಾನ್‌ನಿಂದ 233, ಪೂರ್ವ ನವಾಲ್‌ಪರಸಿಯಿಂದ 158, ನುವಾಕೋಟ್‌ನಿಂದ 51, ಗೋಖ್ರಾದಿಂದ 48, ಪಶ್ಚಿಮ ನವಾಲ್‌ಪರಸಿಯಿಂದ 47, ಧಾಡಿಂಗ್‌ನಿಂದ 45, ತನಾಹುವಿನಿಂದ 31 ಮತ್ತು ರಾಸುವಾದಿಂದ 13 ಶವಗಳನ್ನು ಹೊರತೆಗೆಯಲಾಗಿದೆ.

ಸಂಪರ್ಕಕ್ಕೆ ಸಿಗದವರಿಗಾಗಿ ಶೋಧ ಕಾರ್ಯಾಚರಣೆ ಜಾರಿಯಲ್ಲಿದೆ. ಅನೇಕರು ಕೆಸರು ತುಂಬಿದ ಅವಶೇಷಗಳಡಿ ಸಿಲುಕಿ ಜೀವನ್ಮರಣದ ಹೋರಾಟ ಮಾಡುತ್ತಿರುವ ಸಂಭವವಿದೆ.

ಈಗಾಗಲೇ ನೆರೆಯಿಂದಾಗಿ ನಲುಗಿರುವ ಪ್ರದೇಶಗಳಲ್ಲಿ ಇನ್ನೊಂದು ಅಲೆಯ ಪ್ರವಾಹ ಉಂಟಾಗಬಹುದು ಎಂದು ಶುಕ್ರವಾರ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು. ಸದ್ಯ ಅಂಥ ಯಾವುದೇ ಆಪತ್ತು ಎದುರಾಗದೇ ಇದ್ದರೂ, ರಕ್ಷಣಾ ತಂಡಗಳು ಪರಿಸ್ಥಿತಿಯನ್ನು ನಿರ್ವಹಿಸಲು ಸಿದ್ಧ ಸ್ಥಿತಿಯಲ್ಲಿವೆ. ಇತ್ತ ನೇಪಾಳದೊಂದಿಗೆ ಗಡಿ ಹಂಚಿಕೊಂಡಿರುವ ಬಿಹಾರ, ಉತ್ತರಪ್ರದೇಶದಲ್ಲೂ ರಕ್ಷಣಾ ಸಿಬ್ಬಂದಿಯನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ.

ಸದ್ಗುರು ಅವರ ತಂಡ ಇದ್ದ ಕೇಂದ್ರ ಖಾಲಿಖಾಲಿ

- ಅವಶೇಷ ಬಿಟ್ಟು ಬೇರೇನೂ ಇಲ್ಲ

ಕಾಠ್ಮಂಡು: ಸದ್ಗುರು ಅವರ ತಂಡದ 80 ಜನ ಸೇರಿದಂತೆ ಕೈಲಾಸ ಮಾನಸಸರೋವರ ಯಾತ್ರೆಗೆ ಹೊರಟಿದ್ದ ಅಥವಾ ಮುಗಿಸಿಕೊಂಡು ಬಂದಿದ್ದ ಭಾರತೀಯರು ಇದ್ದ, ಚೀನಾ-ನೇಪಾಳ ಗಡಿಯಲ್ಲಿರುವ ವಲಸೆ ಕೇಂದ್ರಕ್ಕೆ ಚೀನಾದ ರಕ್ಷಣಾ ತಂಡವು ತಲುಪಿದೆ. ಆದರೆ ದುರದೃಷ್ಟವಶಾತ್‌ ಅಲ್ಲಿ ಅವಶೇಷಗಳು ಬಿಟ್ಟರೆ ಬೇರೇನೂ/ಯಾರೂ ಇಲ್ಲ ಎಂಬ ಆಘಾತಕಾರಿ ವಾಸ್ತವವನ್ನು ಅವರು ಬೆಚ್ಚಿಟ್ಟಿದ್ದಾರೆ.

ಬೃಹತ್‌ ಅಲೆಯೊಂದು ನುಗ್ಗಿಬಂದು, ಗೈರಾಂಗ್ ವಲಸೆ ಕೇಂದ್ರವನ್ನು ಆವರಿಸಿಕೊಂಡು ಮುನ್ನುಗ್ಗಿದ ವಿಡಿಯೋಗಳು ವೈರಲ್‌ ಆಗಿದ್ದವು. ಆ ಸ್ಥಳದಲ್ಲಿ ಕಾಣೆಯದಾದ ತಮ್ಮ ತಂಡದವರನ್ನು ನೆನೆದು ಸದ್ಗುರು ಕೆಲ ದಿನಗಳ ಹಿಂದೆ ಕಣ್ಣೀರಿಟ್ಟಿದ್ದರು. ಆದರೆ ಅಲ್ಲಿನ ಪರಿಸ್ಥಿತಿ ಭೀಕರವಾಗಿದ್ದರಿಂದ ಈವರೆಗೆ ರಕ್ಷಣಾ ಕಾರ್ಯ ನಡೆದಿರಲಿಲ್ಲ. ಇದೀಗ ಶ್ವಾನದಳದೊಂದಿಗೆ ಚೀನಿಯರ 21 ಮಂದಿಯ ತಂಡವು ಹಗ್ಗವನ್ನು ಬಳಸಿ ಪರ್ವತ, ಕಣಿವೆಗಳನ್ನು ದಾಟಿ ಆ ಪ್ರದೇಶವನ್ನು ತಲುಪಿದೆ.

‘ಅಲ್ಲಿ ಕಾಡು ಹಾಗೂ ಕಣ್ಣು ಹಾಯಿಸಿದಷ್ಟು ದೂರ ಬಿದ್ದಿರುವ ಅವಶೇಷಗಳ ರಾಶಿ ಬಿಟ್ಟರೆ ಬೇರೇನೂ ಇಲ್ಲ. ರಸ್ತೆಗೆ ಹಾನಿಯಾಗಿದೆ. ಎಲ್ಲವೂ ಕೆಸರಿನಡಿ ಹೂತುಹೋಗಿದೆ’ ಎಂದು ರಕ್ಷಣಾ ತಂಡದಲ್ಲಿದ್ದವರು ಹೇಳಿದ್ದಾರೆ. ಇದಕ್ಕೆ ಸಾಕ್ಷಿಯೆಂಬಂತೆ ಕೆಲ ವಿಡಿಯೋಗಳು ಲಭಿಸಿವೆ. ಅಲ್ಲಿದ್ದ ಭಾರತೀಯರೆಲ್ಲಾ ಸಾವನ್ನಪ್ಪಿರುವ ಶಂಕೆಯಿದೆ.

ಅವಶೇಷಗಳಿಂದ 97ರ ವೃದ್ಧೆ ಪವಾಡಸದೃಶ ರಕ್ಷಣೆ

ಕಾಠ್ಮಂಡು: ನೇಪಾಳದಲ್ಲಿ ಪ್ರವಾಹದ ಅವಶೇಷಗಳಿಂದ 97 ವರ್ಷದ ವೃದ್ಧೆಯೊಬ್ಬರನ್ನು ಪವಾಡ ಸದೃಶ ರೀತಿ ಪಾರು ಮಾಡಲಾಗಿದೆ. ಈಕೆ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ

ಗುಣಾಮಾಯಾ ಬೊಹರಾ, ಬದುಕುಳಿದ ವೃದ್ಧೆ. ಈಕೆ ಯುದ್ಧದಿಂದ ವಿಜಯಶಾಲಿಯಾಗಿ ಹಿಂತಿರುಗಿದ ಯೋಧಳಂತೆ ಕಾಣುತ್ತಿದ್ದಾಳೆ ಎಂದು ಅವರ ಸೋದರಳಿಯ ದೀಪಕ್ ಬೊಹರಾ ಬಣ್ಣಿಸಿದ್ದಾರೆ.

ಬೊಹರಾಳನ್ನು ಅವಳ ವೃದ್ಧಾಶ್ರಮದ ಅವಶೇಷಗಳಿಂದ ಹೊರತೆಗೆಯುವ ಕಾರ್ಯಾಚರಣೆ 4 ಗಂಟೆಗಳನ್ನು ತೆಗೆದುಕೊಂಡಿತು. ಆಕೆಯನ್ನು ರಕ್ಷಿಸಿ ಜೆಸಿಬಿ ಮಷಿನ್‌ ಮೂಲಕ ಆಸ್ಪತ್ರೆಗೆ ದಾಖಲಿಸಲಾಯಿತು.

ಈ ನಡುವೆ ಪ್ರಕಾಶ್‌ ಗೌತಮ್‌ ಎಂಬುವರು ತಾವು 2 ದಿನ ಸೇನೆಯು ಹೆಲಿಕಾಪ್ಟರ್‌ ಮೂಲಕ ನೀಡಿದ ನೂಡಲ್ಸ್‌ ತಿಂದು ಬದುಕಿದ್ದೆ ಎಂದಿದ್ದಾರೆ.