ಬುಧವಾರ ನೇಪಾಳದಲ್ಲಿ ಸಂಭವಿಸಿದ್ದ ಭೀಕರ ಪ್ರವಾಹದ ಬಳಿಕ 320 ಭಾರತೀಯರು ನಾಪತ್ತೆಯಾಗಿದ್ದು, ಸುಮಾರು 400 ಮಂದಿ ಚೀನಾದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ವಿದೇಶಾಂಗ ಇಲಾಖೆ ಶುಕ್ರವಾರ ಮಾಹಿತಿ ನೀಡಿದೆ.

ಕಾಠ್ಮಂಡು/ ನವದೆಹಲಿ: ಬುಧವಾರ ನೇಪಾಳದಲ್ಲಿ ಸಂಭವಿಸಿದ್ದ ಭೀಕರ ಪ್ರವಾಹದ ಬಳಿಕ 320 ಭಾರತೀಯರು ನಾಪತ್ತೆಯಾಗಿದ್ದು, ಸುಮಾರು 400 ಮಂದಿ ಚೀನಾದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ವಿದೇಶಾಂಗ ಇಲಾಖೆ ಶುಕ್ರವಾರ ಮಾಹಿತಿ ನೀಡಿದೆ. ಈ ನಡುವೆ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 580ಕ್ಕೆ ಏರಿಕೆಯಾಗಿದೆ. ಸುಮಾರು 1 ಸಾವಿರ ಮಂದಿ ಕಾಣೆಯಾಗಿದ್ದು, ಅವರಿಗಾಗಿ ಶೋಧಕಾರ್ಯ ನಡೆದಿದೆ.

ಇಂತಹ ಹೊತ್ತಿನಲ್ಲೇ, ಮತ್ತದೇ ಪ್ರದೇಶದಲ್ಲಿ ನೆರೆಯ 2ನೇ ಅಲೆ ಏಳಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದು, ಜನಮಾನಸದಲ್ಲಿ ಭಯ ಬೇರೂರುವಂತೆ ಮಾಡಿದೆ.

ರಕ್ಷಣಾ ಕಾರ್ಯ ಮುಂದುರಿಕೆ:

ಕೆಸರು ಮುಚ್ಚಿದ ಅವಶೇಷಗಳಡಿಯಲ್ಲಿ ಶೋಧ ಕಾರ್ಯ ಮುಂದುವರಿಸಿರುವ ನೇಪಾಳ ಪೊಲೀಸರು, ಚಿತ್ವಾನ್‌ನಲ್ಲಿ 178, ನವಾಲ್‌ಪರಸಿ ಪೂರ್ವದಲ್ಲಿ 110, ಗೋರ್ಖಾದಲ್ಲಿ 44, ನುವಾಕೋಟ್‌ನಲ್ಲಿ 37, ಧಾಡಿಂಗ್ ಜಿಲ್ಲೆಯಲ್ಲಿ 33, ತನಹುವಿನಲ್ಲಿ 28, ಪಶ್ಚಿಮ ನವಾಲ್‌ಪರಸಿಯಲ್ಲಿ 27 ಮತ್ತು ರಸುವಾದಲ್ಲಿ 12 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಜತೆಗೆ ಟಿಬೆಟ್‌ನ ಮೂವರು ಪ್ರಾಣ ಕಳೆದುಕೊಂಡಿದ್ದಾರೆ ಎಂದರು.

ಒಟ್ಟಿನಲ್ಲಿ ಈವರೆಗೆ 1,545 ಗಾಯಾಳುಗಳನ್ನು ರಕ್ಷಿಸಲಾಗಿದ್ದು, ಅದರಲ್ಲಿ 84 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

2ನೇ ಪ್ರವಾಹದ ಭೀತಿ:

ಹಿಮಪಾತದ ವೇಳೆ ನದಿ ಸೇರಿದ ಮಂಜಿನ ಬೃಹತ್‌ ಗಡ್ಡೆಗಳು ಮತ್ತು ಬಂಡೆಗಳು ನೇಪಾಳ-ಟಿಬೆಟ್ ಗಡಿಯ ಸಮೀಪದಲ್ಲಿರುವ ಚೋಚೆನ್ ಖೋಲಾ ಮತ್ತು ಪುರೆಪು ತ್ಸಾಂಗ್ಪೋ ನದಿಗಳ ಸಂಗಮ ಪ್ರದೇಶದಲ್ಲಿ ಹರಿವ ನೀರಿಗೆ ಅಡ್ಡಲಾಗಿ ನಿಂತು ತಾತ್ಕಾಲಿಕ ಕೆರೆಗಳನ್ನು ಸೃಷ್ಟಿಸಿವೆ. ಕ್ರಮೇಣ ಇವು ಸರಿದಲ್ಲಿ, ನದಿಯಲ್ಲಿ ಶೇಖರಣೆಯಾಗಿರುವ 20 ಲಕ್ಷ ಕ್ಯೂಬಿಕ್‌ ಕೆಸರುನೀರು ಒಮ್ಮೆಲೆ ನುಗ್ಗಿ, ಸುತ್ತಮುತ್ತಲಿನ ಪ್ರದೇಶಗಳನ್ನು ನುಂಗಿಹಾಕುವ ಸಾಧ್ಯತೆಯಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೇಳಿದೆ. ಜತೆಗೆ, ಯಾವುದೇ ಅಪಾಯದ ಮುನ್ಸೂಚನೆ ದೊರೆತಲ್ಲಿ, ಭೋಟೇಕೋಶಿ ಮತ್ತು ತ್ರಿಶೂಲಿಯಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವವರು ಕೂಡಲೇ ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ನಿರ್ದೇಶಿಸಿದ್ದಾರೆ.

ಅತ್ತ ಟಿಬೆಟ್‌ನ ಜಲಾಶಯವೂ ಒಡೆದಿದ್ದು, ಪ್ರವಾಹದ ಮತ್ತೊಂದು ಅಲೆಗೆ ಸಿದ್ಧರಾಗಿರಿ ಜನರನ್ನು ಎಚ್ಚರಿಸಲಾಗಿದೆ.

- 580 ಸಾವು, ಸುಳಿವು ಸಿಗದ ಸಾವಿರಾರು ಜನರಿಗಾಗಿ ಹುಡುಕಾಟ

- ಟಿಬೆಟ್‌ನಲ್ಲಿ ಒಡೆದ ಅಣೆಕಟ್ಟು: ಪುನಃ ಪ್ರವಾಹದ ಭೀತಿ

- ತವರಿಗೆ ಮರಳಿ: ಪ್ರವಾಸಿಗರಿಗೆ ನೇಪಾಳ ಮನವಿ

- 70 ಕಿ.ಮೀ ತೇಲಿ ಭಾರತಕ್ಕೆ ಹರಿದು ಬಂದವು 7 ಶವ