ಕಳೆದ ಮೂರೂವರೆ ದಶಕಗಳಲ್ಲೇ ಭೀಕರ ಭೀಕರ ಪ್ರವಾಹಕ್ಕೆ ಸಿಲುಕಿರುವ ನೇಪಾಳದಲ್ಲಿ ಮೃತಪಟ್ಟವರ ಸಂಖ್ಯೆ 360ಕ್ಕೆ ಏರಿಕೆಯಾಗಿದ್ದು, 1000ಕ್ಕೂ ಹೆಚ್ಚು ಜನ ನಾಪತ್ತೆ ಆಗಿದ್ದಾರೆ. ದುರಂತದಲ್ಲಿ ನಾಪತ್ತೆಯಾಗಿರುವ 288 ಭಾರತೀಯರು ಸೇರಿದಂತೆ ನೂರಾರು ಜನರಿಗಾಗಿ ರಕ್ಷಣಾ ಪಡೆಗಳು ಸಮರೋಪಾದಿಯಲ್ಲಿ ಶೋಧ
ಕಾಠ್ಮಂಡು: ಕಳೆದ ಮೂರೂವರೆ ದಶಕಗಳಲ್ಲೇ ಭೀಕರ ಭೀಕರ ಪ್ರವಾಹಕ್ಕೆ ಸಿಲುಕಿರುವ ನೇಪಾಳದಲ್ಲಿ ಮೃತಪಟ್ಟವರ ಸಂಖ್ಯೆ 360ಕ್ಕೆ ಏರಿಕೆಯಾಗಿದ್ದು, 1000ಕ್ಕೂ ಹೆಚ್ಚು ಜನ ನಾಪತ್ತೆ ಆಗಿದ್ದಾರೆ. ದುರಂತದಲ್ಲಿ ನಾಪತ್ತೆಯಾಗಿರುವ 288 ಭಾರತೀಯರು ಸೇರಿದಂತೆ ನೂರಾರು ಜನರಿಗಾಗಿ ರಕ್ಷಣಾ ಪಡೆಗಳು ಸಮರೋಪಾದಿಯಲ್ಲಿ ಶೋಧ ಕಾರ್ಯಾಚರಣೆ ಮುಂದುವರಿಸಿದ್ದು, ದೇಶದ ಆಧುನಿಕ ಇತಿಹಾಸದಲ್ಲೇ ಇದು ಅತ್ಯಂತ ಭೀಕರ ನೈಸರ್ಗಿಕ ದುರಂತವಾಗಿ ಮಾರ್ಪಟ್ಟಿದೆ.
ಬುಧವಾರ ಸಂಭವಿಸಿದ ಈ ಜಲಪ್ರಳಯವು ನೇಪಾಳದ ಹಲವು ಜಿಲ್ಲೆಗಳಲ್ಲಿ ಭಾರಿ ಹಾನಿ ಉಂಟುಮಾಡಿದೆ. ಗುರುವಾರ ಕಾರ್ಯಾಚರಣೆ ವೇಳೆ ಮತ್ತಷ್ಟು ಶವಗಳು ಪತ್ತೆಯಾಗಿದ್ದು, ಸಾವಿನ ಸಂಖ್ಯೆ ದಿಢೀರ್ ಏರಿಕೆಯಾಗಿದೆ. ಪೊಲೀಸ್ ವಕ್ತಾರ ಅಬಿ ನಾರಾಯಣ್ ಕಾಫ್ಲೆ ನೀಡಿರುವ ಮಾಹಿತಿಯಂತೆ ಚಿತ್ವಾನ್‌ನಲ್ಲಿ 108, ನವಲ್‌ಪರಾಸಿ ಪೂರ್ವದಲ್ಲಿ 62, ಧಾಡಿಂಗ್‌ನಲ್ಲಿ 27, ಗೋರ್ಖಾದಲ್ಲಿ 20, ರಸುವಾದಲ್ಲಿ 17, ನವಲ್‌ಪರಾಸಿ ವೆಸ್ಟ್‌ನಲ್ಲಿ 15, ನುವಾಕೋಟ್‌ನಲ್ಲಿ 12 ಹಾಗೂ ತನಹುನ್‌ನಲ್ಲಿ 9 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ.
800 ಜನರ ರಕ್ಷಣೆ:
ಇನ್ನು ದುರಂತದಿಂದಾಗಿ 35 ಸೇತುವೆಗಳು, 45 ತೂಗುಸೇತುವೆಗಳು ಹಾಗೂ 40 ಕಿ.ಮೀ.ಗೂ ಹೆಚ್ಚು ಉದ್ದದ ಮುಖ್ಯ ರಸ್ತೆಗಳು ಕೊಚ್ಚಿಹೋಗಿವೆ. ಕಾಠ್ಮಂಡುವನ್ನು ಸಂಪರ್ಕಿಸುವ ಮುಖ್ಯ ಹೆದ್ದಾರಿ ಸೇರಿದಂತೆ ದೇಶದ ಪ್ರಮುಖ ರಸ್ತೆ ಸಂಚಾರ ಸಂಪೂರ್ಣವಾಗಿ ಕಡಿತಗೊಂಡಿದೆ. ಸದ್ಯ ರಕ್ಷಣಾ ಪಡೆಗಳು 800ಕ್ಕೂ ಹೆಚ್ಚು ಜನರನ್ನು ರಕ್ಷಿಸಿದ್ದು, ಗಾಯಾಳುಗಳಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರವಾಹಪೀಡಿತ ಪ್ರದೇಶಗಳಿಗೆ ಪ್ರಧಾನಿ ಬಲೇಂದ್ರ ಶಾ ಭೇಟಿ
ಪ್ರವಾಹಪೀಡಿತ ಪ್ರದೇಶಗಳಿಗೆ ನೇಪಾಳ ಪ್ರಧಾನಿ ಬಲೇಂದ್ರ ಶಾ ಅವರು ಮೂಲಸೌಕರ್ಯ ಅಭಿವೃದ್ಧಿ ಸಚಿವ ಸುನಿಲ್ ಲಮ್ಶಾಲ್ ಅವರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

