ಕನ್ನಡಿಗರು ಎಲ್ಲೇ ಇದ್ದರೂ ಕನ್ನಡದ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಹೊಂದಿದ್ದಾರೆ ಎಂದು ಅಕ್ಕ ಸಮ್ಮೇಳನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಫಿಲಡೆಲ್ಫಿಯಾ : ಕನ್ನಡಿಗರು ಎಲ್ಲೇ ಇದ್ದರೂ ಕನ್ನಡದ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಹೊಂದಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಅಕ್ಕ ಸಮ್ಮೇಳನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದೇಶದಲ್ಲಿ ನೆಲೆಸಿದ್ದರೂ ಕನ್ನಡದ ಮೇಲಿನ ಅಭಿಮಾನ ಮತ್ತು ಪ್ರೀತಿಯನ್ನು ಕಾಪಾಡಿಕೊಂಡು ಬರುತ್ತಿರುವ ಕನ್ನಡಿಗರನ್ನು ಅಭಿನಂದಿಸಿದರು. ‘ನಾವು ಕೆಲವು ಕ್ಷಣಗಳನ್ನು ನಿಮ್ಮೊಂದಿಗೆ ಕಳೆಯಬಹುದು. ಆದರೆ ನಿಮ್ಮ ಪ್ರೀತಿ ಮತ್ತು ವಿಶ್ವಾಸವನ್ನು ಶಾಶ್ವತವಾಗಿ ನಮ್ಮ ಹೃದಯದಲ್ಲಿ ಇಟ್ಟುಕೊಳ್ಳುತ್ತೇವೆ’ ಎಂದು ಅವರು ಹೇಳಿದರು.
‘ಇದು ಕೇವಲ ಒಂದು ಕಾರ್ಯಕ್ರಮವಲ್ಲ. ಇದು ಕನ್ನಡದ ಜಾತ್ರೆ, ಕರ್ನಾಟಕದ ಹಬ್ಬ, ನಮ್ಮ ನೆನಪುಗಳ ಹಬ್ಬ. ನಮ್ಮ ಬೇರುಗಳನ್ನು ಮತ್ತೆ ಸ್ಪರ್ಶಿಸುವ ಪವಿತ್ರ ಕ್ಷಣ’ ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಕನ್ನಡ ಕೇವಲ ಒಂದು ಭಾಷೆಯಲ್ಲ. ಅದು ಕನ್ನಡಿಗರ ಬದುಕಿನ ಪರಂಪರೆ, ಸಂಸ್ಕೃತಿ ಮತ್ತು ಜೀವನ ವಿಧಾನ. ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮೈಸೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳ ವೈವಿಧ್ಯತೆಯೇ ಕನ್ನಡದ ಶ್ರೀಮಂತಿಕೆಯನ್ನು ರೂಪಿಸಿದೆ ಎಂದು ಅವರು ಹೇಳಿದರು.
ಕರ್ನಾಟಕದ ಸಾಂಸ್ಕೃತಿಕ ಮತ್ತು ಸಾಹಿತ್ಯ ಪರಂಪರೆಯನ್ನು ಸ್ಮರಿಸಿದ ಅವರು, ದಾಸರು, ವಚನಕಾರರು, ಕುವೆಂಪು, ಬೇಂದ್ರೆ, ಶಿವರಾಮ ಕಾರಂತರು ಸೇರಿದಂತೆ ಅನೇಕ ಮಹನೀಯರು ಕನ್ನಡದ ಬೆಳವಣಿಗೆಗೆ ನೀಡಿದ ಕೊಡುಗೆಯನ್ನು ಪ್ರಸ್ತಾಪಿಸಿದರು. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡವನ್ನು ಇಂದಿನ ತಂತ್ರಜ್ಞಾನ ಮತ್ತು ಜಾಗತೀಕರಣದ ಯುಗದಲ್ಲಿಯೂ ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕಿದೆ ಎಂದರು.
ಭಾರತದ ಆರ್ಥಿಕ ಪ್ರಗತಿ:
ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಇಂದು ವಿಶ್ವದ ಪ್ರಮುಖ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು. 2026–27ರ ಮೊದಲ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಬೆಳವಣಿಗೆ ಶೇ.7.8ರಷ್ಟಿದೆ ಎಂದು ಅವರು ಉಲ್ಲೇಖಿಸಿದರು. ಪ್ರಸಕ್ತ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಇನ್ನಷ್ಟು ಉತ್ತಮ ಬೆಳವಣಿಗೆ ಸಾಧಿಸುವ ಗುರಿಯಿದೆ ಎಂದರು.
ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವುದು ದೇಶದ ಮುಂದಿರುವ ಪ್ರಮುಖ ಸವಾಲುಗಳಲ್ಲಿ ಒಂದಾಗಿದೆ. ಇದಕ್ಕಾಗಿ ಕೌಶಲ್ಯಾಭಿವೃದ್ಧಿ ಮತ್ತು ತರಬೇತಿಗೆ ಕೇಂದ್ರ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಯುವಜನರು ಕೈಗಾರಿಕಾ ಕ್ಷೇತ್ರದ ಅಗತ್ಯಗಳಿಗೆ ತಕ್ಕಂತೆ ಕೌಶಲ್ಯಗಳನ್ನು ಬೆಳೆಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.
HMTಯ ವೈಭವದ ನೆನಪು:
ಕೇಂದ್ರ ಕೈಗಾರಿಕೆ ಮತ್ತು ಉಕ್ಕು ಸಚಿವರಾಗಿ ತಮ್ಮ ಇಲಾಖೆಗೆ ಸಂಬಂಧಿಸಿದ ವಿಷಯಗಳನ್ನು ಪ್ರಸ್ತಾಪಿಸಿದ ಕುಮಾರಸ್ವಾಮಿ, HMTಯ ಹಳೆಯ ವೈಭವವನ್ನು ಸ್ಮರಿಸಿದರು.
ಒಂದು ಕಾಲದಲ್ಲಿ HMT ಕಾರ್ಖಾನೆಯ ಕಾರ್ಮಿಕರ ಪರಿಶ್ರಮದಿಂದ ದೇಶದ ವಿವಿಧ ಭಾಗಗಳಲ್ಲಿ HMT ತನ್ನ ಶಾಖೆಗಳನ್ನು ಸ್ಥಾಪಿಸಿತ್ತು. HMT ವಾಚ್‌ಗಳು ಪ್ರತಿಯೊಂದು ಮನೆಯಲ್ಲೂ ಜನಪ್ರಿಯವಾಗಿದ್ದ ಕಾಲವಿತ್ತು. ಮದುವೆ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ HMT ವಾಚ್ ಮತ್ತು ರ‍್ಯಾಲಿ ಸೈಕಲ್‌ಗಳನ್ನು ಉಡುಗೊರೆಯಾಗಿ ನೀಡುವುದು ಒಂದು ರೀತಿಯ ಪ್ರತಿಷ್ಠೆಯ ಸಂಕೇತವಾಗಿತ್ತು ಎಂದು ಅವರು ನೆನಪಿಸಿಕೊಂಡರು.
ಸಾರ್ವಜನಿಕ ವಲಯದ ಕೈಗಾರಿಕೆಗಳು ದೇಶದ ಕೈಗಾರಿಕಾ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿವೆ. ಇಂತಹ ಸಂಸ್ಥೆಗಳ ಸಾಮರ್ಥ್ಯವನ್ನು ಬಳಸಿಕೊಂಡು ದೇಶದ ಕೈಗಾರಿಕಾ ಬೆಳವಣಿಗೆಗೆ ಹೊಸ ದಿಕ್ಕು ನೀಡಬೇಕಾಗಿದೆ ಎಂದು ಅವರು ಹೇಳಿದರು.
ರೈತರು ದೇಶಕ್ಕೆ ಅನ್ನ ನೀಡುತ್ತಿದ್ದಾರೆ, ಕಾರ್ಮಿಕರು ನಗರಗಳನ್ನು ನಿರ್ಮಿಸುತ್ತಿದ್ದಾರೆ ಮತ್ತು ಶಿಕ್ಷಕರು ಭವಿಷ್ಯದ ಪೀಳಿಗೆಯನ್ನು ರೂಪಿಸುತ್ತಿದ್ದಾರೆ. ಇವರ ಕೊಡುಗೆಗಳೇ ಭಾರತದ ನಿಜವಾದ ಶಕ್ತಿ. ಕನ್ನಡಿಗರ ಪ್ರೀತಿ, ಪರಿಶ್ರಮ ಮತ್ತು ಸಾಂಸ್ಕೃತಿಕ ಬದ್ಧತೆಯೊಂದಿಗೆ ಭಾರತವನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕಿದೆ ಎಂದು ಕುಮಾರಸ್ವಾಮಿ ಕರೆ ನೀಡಿದರು.
ಅಕ್ಕ ಸಮ್ಮೇಳನದಲ್ಲೂ ಎಚ್‌ಎಂಟಿ ವಾಚು!
ಅಮೆರಿಕದಲ್ಲಿ ನಡೆಯುತ್ತಿರುವ ಅಕ್ಕ ಸಮ್ಮೇಳನಕ್ಕಾಗಿ 1000 ಎಚ್‌ಎಂಟಿ ವಾಚ್‌ಗಳನ್ನು ಪೂರೈಸಲಾಗಿದೆ. ಕಾರ್ಯಕ್ರಮದಲ್ಲೂ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಎಚ್‌ಎಂಟಿ ಕಂಪನಿಯ ವೈಭವವನ್ನು ಮೆಲುಕು ಹಾಕಿದರು.
