ರಾಜ್ಯದ ಎಲ್ಲಾ ಗ್ರಾಹಕರಿಗೆ ಸ್ಥಳೀಯ ಭಾಷೆ ಕನ್ನಡದಲ್ಲೇ ಸೇವೆ ನೀಡುವುದು ರಾಷ್ಟ್ರೀಕೃತ ಬ್ಯಾಂಕ್‌ಗಳ ಜವಾಬ್ದಾರಿಯಾಗಿದೆ. ಆದರೆ, ಈ ಬ್ಯಾಂಕ್ ಶಾಖೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕನ್ನಡ ಬಾರದವರಂತೆ ವರ್ತಿಸುತ್ತಿದ್ದಾರೆ. ಗ್ರಾಹಕರಿಗೆ ಹಿಂದಿ ಅಥವಾ ಇಂಗ್ಲಿಷ್ ಭಾಷೆ ಬಳಕೆಗೆ ಪರೋಕ್ಷವಾಗಿ ಒತ್ತಡ ಹೇರುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ​ಕೆ.ಎಂ.ದೊಡ್ಡಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಶಾಖೆಗಳಲ್ಲಿ ಗ್ರಾಹಕರೊಂದಿಗೆ ಕನ್ನಡದಲ್ಲೇ ವ್ಯವಹರಿಸುವಂತೆ ಆಗ್ರಹಿಸಿ, ಬ್ಯಾಂಕ್‌ನ ಎಲ್ಲಾ ಸೇವೆಗಳನ್ನು ಕನ್ನಡದಲ್ಲಿ ಲಭ್ಯವಾಗುವಂತೆ ಮಾಡಬೇಕು ಎಂದು ಒತ್ತಾಯಿಸಿ ಕನ್ನಡ ಸೇನೆ ಸಂಘಟನೆ ಕಾರ್ಯಕರ್ತರು ಬ್ಯಾಂಕ್ ಶಾಖೆಯಲ್ಲಿ ಪ್ರತಿಭಟನೆ ನಡೆಸಿದರು.

ಎಸ್‌ಬಿಐ ಶಾಖೆ ಆವರಣದಲ್ಲಿ ಸೇರಿದ ಕನ್ನಡ ಸೇನೆ ಹಾಗೂ ವಿವಿಧ ಸಂಘಟನೆಗಳ ಮುಖಂಡರು, ಬ್ಯಾಂಕ್‌ನಲ್ಲಿ ಇಂಗ್ಲಿಷ್, ಹಿಂದಿ ಬಳಕೆ ಮಾಡುತ್ತಿಲ್ಲ ಎಂದು ಸಿಬ್ಬಂದಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡ ಸೇನೆ ತಾಲೂಕು ಘಟಕದ ಅಧ್ಯಕ್ಷ ರಾಘವೇಂದ್ರ ಮಾತನಾಡಿ, ರಾಜ್ಯದ ಎಲ್ಲಾ ಗ್ರಾಹಕರಿಗೆ ಸ್ಥಳೀಯ ಭಾಷೆ ಕನ್ನಡದಲ್ಲೇ ಸೇವೆ ನೀಡುವುದು ರಾಷ್ಟ್ರೀಕೃತ ಬ್ಯಾಂಕ್‌ಗಳ ಜವಾಬ್ದಾರಿಯಾಗಿದೆ. ಆದರೆ, ಈ ಬ್ಯಾಂಕ್ ಶಾಖೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕನ್ನಡ ಬಾರದವರಂತೆ ವರ್ತಿಸುತ್ತಿದ್ದಾರೆ. ಗ್ರಾಹಕರಿಗೆ ಹಿಂದಿ ಅಥವಾ ಇಂಗ್ಲಿಷ್ ಭಾಷೆ ಬಳಕೆಗೆ ಪರೋಕ್ಷವಾಗಿ ಒತ್ತಡ ಹೇರುತ್ತಿದ್ದಾರೆ ಎಂದು ಕಿಡಿಕಾರಿದರು.

ಬ್ಯಾಂಕ್‌ನ ಧೋರಣೆಯಿಂದಾಗಿ ಗ್ರಾಹಕರು, ಹಿರಿಯ ನಾಗರಿಕರು ಮತ್ತು ರೈತರು ತಮ್ಮ ಸಾಲದ ಅರ್ಜಿಗಳು, ಪಾಸ್‌ಬುಕ್ ನವೀಕರಣ ಹಾಗೂ ಹಣಕಾಸು ವ್ಯವಹಾರ ಮಾಡಲು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಕೂಡಲೇ ಬ್ಯಾಂಕ್ ಆಡಳಿತ ಮಂಡಳಿ ಎಚ್ಚೆತ್ತುಕೊಂಡು ಎಲ್ಲಾ ನಾಮಫಲಕಗಳನ್ನು ಕನ್ನಡದಲ್ಲಿ ಅಳವಡಿಸಬೇಕು. ಕನ್ನಡ ಬಲ್ಲ ಸಿಬ್ಬಂದಿಯನ್ನು ಗ್ರಾಹಕರ ಸೇವೆಗೆ ನಿಯೋಜಿಸಬೇಕು ಎಂದು ಆಗ್ರಹಿಸಿ, ಕನ್ನಡದಲ್ಲಿ ವ್ಯವಹಾರ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಕರಡಕೆರೆ ಯೋಗೇಶ್, ಆಸರೆ ಸೇವಾ ಟ್ರಸ್ಟ್ ಅಧ್ಯಕ್ಷ ರಘುವೆಂಕಟಗೌಡ, ಪೈಕಿ ಮಹೇಶ್, ವಿಕಾಸ್ ಗೌಡ, ದಿಗಂತ್, ಗುಡಿಗೆರೆ ಬಸವರಾಜ, ಹಳ್ಳಿಕೆರೆ ನಾಗೇಶ್, ಸಂತೋಷ್, ಅಭಿಷೇಕ, ನಿರಂಜನ, ಸೇರಿದಂತೆ ಹಲವರು ಉಪಸ್ಥಿತರಿದ್ದರು.