ಸರ್ಕಾರದಿಂದ ಬದಲಾದ ದ್ವಿಭಾಷಾ ಶಿಕ್ಷಣ ನೀತಿಯು ಕನ್ನಡ ಮಾಧ್ಯಮದಲ್ಲಿ ಕಲಿಯಬೇಕೆಂಬ ಮಕ್ಕಳ ಹಾಗೂ ಪೋಷಕರ ಆಶಯಕ್ಕೆ ವಿರುದ್ಧವಾಗಿದೆ. ಶೈಕ್ಷಣಿಕ ವ್ಯವಸ್ಥೆಯಲ್ಲಿ ಸರ್ಕಾರಿ ಶಾಲೆಗಳನ್ನು ಪ್ರಯೋಗ ಶಾಲೆಗಳಂತೆ ನಡೆಸಲಾಗುತ್ತಿದ್ದು, ಶಿಕ್ಷಣ ವ್ಯಾಪಾರೀಕರಣದ ಪ್ರಭಾವಕ್ಕೆ ಸಿಲುಕಿದೆ. ಇದರ ಪರಿಣಾಮವಾಗಿ ಕನ್ನಡ ಮಾಧ್ಯಮದ ಮಕ್ಕಳು ನಲುಗುವಂತಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಿ. ಮಂಜುನಾಥ ಆತಂಕ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸರ್ಕಾರದಿಂದ ಬದಲಾದ ದ್ವಿಭಾಷಾ ಶಿಕ್ಷಣ ನೀತಿಯು ಕನ್ನಡ ಮಾಧ್ಯಮದಲ್ಲಿ ಕಲಿಯಬೇಕೆಂಬ ಮಕ್ಕಳ ಹಾಗೂ ಪೋಷಕರ ಆಶಯಕ್ಕೆ ವಿರುದ್ಧವಾಗಿದೆ. ಶೈಕ್ಷಣಿಕ ವ್ಯವಸ್ಥೆಯಲ್ಲಿ ಸರ್ಕಾರಿ ಶಾಲೆಗಳನ್ನು ಪ್ರಯೋಗ ಶಾಲೆಗಳಂತೆ ನಡೆಸಲಾಗುತ್ತಿದ್ದು, ಶಿಕ್ಷಣ ವ್ಯಾಪಾರೀಕರಣದ ಪ್ರಭಾವಕ್ಕೆ ಸಿಲುಕಿದೆ. ಇದರ ಪರಿಣಾಮವಾಗಿ ಕನ್ನಡ ಮಾಧ್ಯಮದ ಮಕ್ಕಳು ನಲುಗುವಂತಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಿ. ಮಂಜುನಾಥ ಆತಂಕ ವ್ಯಕ್ತಪಡಿಸಿದರು.ಹೊಳಲೂರು ಮಾರುತಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಮಿತಿ ಆಯೋಜಿಸಿದ್ದ ದತ್ತಿ ನಿಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳನ್ನು ಓದಿಸಬೇಕೆಂಬ ಉದ್ದೇಶದಿಂದ ಶಾಲೆಗೆ ದಾಖಲಿಸಿರುವ ಹಲವು ಪೋಷಕರು ದ್ವಿಭಾಷಾ ಶಿಕ್ಷಣ ನೀತಿಯಿಂದ ಎದುರಾಗಿರುವ ಗೊಂದಲದ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಕಲಿಯಬೇಕೆಂಬ ಆಸೆಯಿರುವ ಮಕ್ಕಳಿಗೆ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಪಠ್ಯಗಳನ್ನು ನೀಡುತ್ತಿರುವುದರಿಂದ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ ಎಂದು ಹೇಳಿದರು.ಐದನೇ ತರಗತಿ ವಿದ್ಯಾರ್ಥಿಗಳ ಪಠ್ಯಪುಸ್ತಕಗಳಲ್ಲಿ ಸಮಾಜ ವಿಜ್ಞಾನ, ಗಣಿತ, ವಿಜ್ಞಾನ ಸೇರಿದಂತೆ ಹಲವು ವಿಷಯಗಳನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಸಮಾನಾಂತರವಾಗಿ ಮುದ್ರಿಸಲಾಗುತ್ತಿದೆ. ಇದರಿಂದ ಕನ್ನಡ ಮಾಧ್ಯಮದ ಮಕ್ಕಳ ಕಲಿಕೆಯ ಮೇಲೆ ಪರಿಣಾಮ ಬೀರುತ್ತಿದೆ. ಶಿಕ್ಷಕರು ಬೋಧಿಸುವ ವಿಧಾನ ಮತ್ತು ಪುಸ್ತಕದಲ್ಲಿರುವ ದ್ವಿಭಾಷಾ ಪಠ್ಯದ ನಡುವೆ ಹೊಂದಾಣಿಕೆ ಕಾಣದೆ ಮಕ್ಕಳು ಗೊಂದಲಕ್ಕೊಳಗಾಗುತ್ತಿದ್ದಾರೆ ಎಂದರು.ಕನ್ನಡದಲ್ಲಿ ಉತ್ತರಿಸುವ ಮಕ್ಕಳಿಗೆ ಕಡಿಮೆ, ಇಂಗ್ಲಿಷ್‌ನಲ್ಲಿ ಉತ್ತರಿಸುವವರಿಗೆ ಹೆಚ್ಚಿನ ಗ್ರೇಡ್ ನೀಡಲಾಗುತ್ತದೆ ಎಂಬ ಆತಂಕವೂ ಪೋಷಕರಲ್ಲಿದೆ. ಇಂತಹ ವಿಚಾರಗಳ ಕುರಿತು ಸ್ಪಷ್ಟ ಮಾಹಿತಿಯೂ ದೊರೆಯುತ್ತಿಲ್ಲ. ಕನ್ನಡ ಭಾಷೆ ಮತ್ತು ಪಠ್ಯದ ಕುರಿತು ಮಕ್ಕಳಲ್ಲಿ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ರಸಗ್ರಹಣ ಶಿಬಿರ ಆಯೋಜಿಸಲು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದರೂ ಅಧಿಕಾರಿಗಳು ಕ್ರಮ ಕೈಗೊಳ್ಳಲು ಹಿಂಜರಿಯುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಡಿ. ಮಂಜುನಾಥ ಬೇಸರ ವ್ಯಕ್ತಪಡಿಸಿದರು.ದತ್ತಿ ದಾನಿಗಳಾದ ಕಟೀಲು ಅಪ್ಪು ಪೈ ಹಾಗೂ ವಿನೋದಿನಿ ಪೈ ಅವರ ಆಶಯದಂತೆ ‘ಯುವ ಸಮೂಹ–ಮನೋವಿಜ್ಞಾನದ ಮಹತ್ವ’ ಕುರಿತು ಮಾನಸಿಕ ತಜ್ಞ ಡಾ. ಶಶಿಧರ್ ಮಾತನಾಡಿ, 14ರಿಂದ 25 ವರ್ಷಗಳ ಅವಧಿ ಯುವಜನರ ಜೀವನದಲ್ಲಿ ಅತ್ಯಂತ ಜವಾಬ್ದಾರಿಯುತ ಕಾಲಘಟ್ಟವಾಗಿದ್ದು, ಈ ಹಂತದಲ್ಲಿ ಮಾನಸಿಕ, ದೈಹಿಕ, ಆರ್ಥಿಕ ಹಾಗೂ ಸಾಮಾಜಿಕ ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ಸಾಮಾಜಿಕ ಜವಾಬ್ದಾರಿ, ತಾಳ್ಮೆ ಹಾಗೂ ಇತರರ ಮಾತುಗಳನ್ನು ಆಲಿಸುವ ಮನೋಭಾವ ಬೆಳೆಸಿಕೊಳ್ಳುವುದು ಅಗತ್ಯ ಎಂದು ಕಿವಿಮಾತು ಹೇಳಿದರು.ಎ.ಬಿ. ಬಸಪ್ಪ ಮತ್ತು ಕಮಲಮ್ಮ ಬಿ. ಅರಕೆರೆ, ಹೊನ್ನಾಳಿ ಸ್ಮಾರಕ ದತ್ತಿಯ ಆಶಯದಂತೆ ‘ವಿಶ್ವಕರ್ಮರ ಪಂಚ ಕಸುಬುಗಳು ಮತ್ತು ಕೊಡುಗೆ’ ಕುರಿತು ಡಾ. ಎಸ್.ಬಿ. ಭಾಗ್ಯಲಕ್ಷ್ಮೀ ಮಾತನಾಡಿ, ಶಿಲ್ಪಕಲೆ, ವಾಸ್ತು ನಿರ್ಮಾಣ, ಕೌಶಲ್ಯ, ಸೃಜನಶೀಲ ಚಿಂತನೆ ಹಾಗೂ ಕೆತ್ತನೆ ಕಲೆಯಲ್ಲಿ ವಿಶ್ವಕರ್ಮ ಸಮುದಾಯದ ಕೊಡುಗೆ ಮಹತ್ವದ್ದಾಗಿದೆ ಎಂದು ವಿವರಿಸಿದರು.ಕಾಲೇಜಿನ ಪ್ರಾಂಶುಪಾಲ ಪ್ರಭುಲಿಂಗಅಧ್ಯಕ್ಷತೆ ವಹಿಸಿ ಮಾತನಾಡಿ, ದತ್ತಿ ಕಾರ್ಯಕ್ರಮ ಅರ್ಥಪೂರ್ಣವಾಗಿದ್ದು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಉಪಯುಕ್ತ ವಿಚಾರಗಳನ್ನು ಪರಿಚಯಿಸಿದೆ ಎಂದರು. ಸಹನ ಸಂಗಡಿಗರು ಪ್ರಾರ್ಥಿಸಿ, ಉಪನ್ಯಾಸಕ ಕರೀಮ್ ಸ್ವಾಗತಿಸಿದರು.