ನಗರದ ನೈಜ ಸೇವಾ ಸಂಸ್ಥೆಗಳ ಹಿತದೃಷ್ಟಿಯಿಂದ ಸಿ.ಎ. (ಸಿವಿಕ್ ಅಮೆನಿಟಿ) ನಿವೇಶನಗಳ ನವೀಕರಣ ಶುಲ್ಕ ಹಾಗೂ ಬಿಗಿಯಾದ ನಿಯಮಗಳ ಸರಳೀಕರಣಕ್ಕೆ ಒತ್ತಾಯಿಸಿ ವಿಧಾನ ಪರಿಷತ್ ಸದಸ್ಯ ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿ ಡಿ.ಎಸ್.ಅರುಣ್, ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ನೈಜ ಸೇವಾ ಸಂಸ್ಥೆಗಳ ಹಿತದೃಷ್ಟಿಯಿಂದ ಸಿ.ಎ. (ಸಿವಿಕ್ ಅಮೆನಿಟಿ) ನಿವೇಶನಗಳ ನವೀಕರಣ ಶುಲ್ಕ ಹಾಗೂ ಬಿಗಿಯಾದ ನಿಯಮಗಳ ಸರಳೀಕರಣಕ್ಕೆ ಒತ್ತಾಯಿಸಿ ವಿಧಾನ ಪರಿಷತ್ ಸದಸ್ಯ ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿ ಡಿ.ಎಸ್.ಅರುಣ್, ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದರು.30 ವರ್ಷಗಳ ಗುತ್ತಿಗೆ ಅವಧಿ ಮುಗಿದ ನಂತರ ಸಿ.ಎ.ನಿವೇಶನಗಳ ನವೀಕರಣ ಪ್ರಕ್ರಿಯೆ ಸಂಕೀರ್ಣಗೊಳಿಸದೆ ಸರಳೀಕೃತ ನಿಯಮಗಳನ್ನು ಜಾರಿಗೆ ತರಬಾರದು. ನಿಯಮ ಉಲ್ಲಂಘಿಸುವ ಅಥವಾ ದುರುಪಯೋಗಪಡಿಸಿಕೊಳ್ಳುವ ಸಂಸ್ಥೆಗಳ ವಿರುದ್ಧ ಮಾತ್ರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ನೈಜವಾಗಿ ಶ್ರಮಿಸುತ್ತಿರುವ ಸಂಸ್ಥೆಗಳಿಗೆ ತೊಂದರೆ ನೀಡಬಾರದು, ಕಟ್ಟಡ ನಿರ್ಮಾಣಕ್ಕೆ ನಿಗದಿಪಡಿಸಿರುವ 3 ವರ್ಷಗಳ ಗಡುವನ್ನು ಪ್ರಸ್ತುತ ಸ್ಥಿತಿಗತಿಗಳನ್ನು ಆಧರಿಸಿ ಸೂಕ್ತವಾಗಿ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.
ಲಾಭರಹಿತ, ಶೈಕ್ಷಣಿಕ, ಕ್ರೀಡೆ ಮತ್ತು ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿರುವ ನೈಜ ಸಂಸ್ಥೆಗಳಿಗೆ ಕಡಿಮೆ ನವೀಕರಣ ಶುಲ್ಕ ಹಾಗೂ ಸಬ್ಸಿಡಿ ದರದಲ್ಲಿ ನಿವೇಶನ ಒದಗಿಸುವಿಕೆ ಸಹಿತ ಹಲವು ಪ್ರಮುಖ ವಿಚಾರಗಳನ್ನು ಸಚಿವರ ಗಮನಕ್ಕೆ ತರಲಾಯಿತು.ಶಾಸಕರ ಪ್ರಸ್ತಾವನೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು, ಇಲಾಖಾ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ ಸಾರ್ವಜನಿಕ ಮತ್ತು ನೈಜ ಸಂಸ್ಥೆಗಳ ಹಿತರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
---ಪೋಟೋ:-----02ಎಸ್‌ಎಂಜಿಕೆಪಿ06