ಕಸ್ತೂರಿ ರಂಗನ್ ವರದಿಯ ಗಂಭೀರತೆ ಅರಿತುಕೊಳ್ಳವಲ್ಲಿ ಜಿಲ್ಲೆಯ ರಾಜಕಾರಣಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ, ಬಿಜೆಪಿ ಪ್ರಭಾರಿ ಆರ್.ಕೆ. ಸಿದ್ದರಾಮಣ್ಣ ಹೇಳಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕಸ್ತೂರಿ ರಂಗನ್ ವರದಿಯ ಗಂಭೀರತೆ ಅರಿತುಕೊಳ್ಳವಲ್ಲಿ ಜಿಲ್ಲೆಯ ರಾಜಕಾರಣಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ, ಬಿಜೆಪಿ ಪ್ರಭಾರಿ ಆರ್.ಕೆ. ಸಿದ್ದರಾಮಣ್ಣ ಹೇಳಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2013 ರಿಂದ ಕಸ್ತೂರಿರಂಗನ್ ವರದಿ ಜಾರಿಯ ವಿಚಾರವಾಗಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸುತ್ತಿದೆ. ನಮ್ಮ ಬಿಜೆಪಿ ಸಂಸದರು ಅನೇಕ ಬಾರಿ ಇದರ ಪ್ರಸ್ತಾವನೆಯನ್ನು ಸಂಸತ್‌ನಲ್ಲಿ ಮಂಡಿಸಿದ್ದಾರೆ. ಸಾಧಕ ಬಾಧಕಗಳನ್ನು ಚರ್ಚಿಸಿದ್ದಾರೆ. ಆದರೂ ಈಗ ಏಳನೇ ಬಾರಿ ಅಧಿಸೂಚನೆ ಹೊರಡಿಸಿದೆ ಎಂದರು.
ನಮಗೂ ಪರಿಸರ ಉಳಿಯಬೇಕೆಂಬ ಆಸೆ ಇದೆ. ಪರಿಸರ ಇಲ್ಲದಿದ್ದರೆ ನಾವ್ಯಾರು ಇಲ್ಲ. ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸವೂ ಬೇಡ. ಈ ವರದಿಯಿಂದ ರಾಜ್ಯದ ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಈಗಾಗಲೇ ಪರಿಸರ ಸೂಕ್ಷ್ಮ ಪ್ರದೇಶ ಗುರುತಿಸಿದ್ದಾರೆ. ಕರ್ನಾಟಕದ 1449 ಗ್ರಾಮದಲ್ಲಿ ಮೂರು ಜಿಲ್ಲೆಯಲ್ಲಿ 1138 ಗ್ರಾಮಗಳು ಬರುತ್ತದೆ. ಜನರು ಬದುಕಿನ ಪ್ರಶ್ನೆಯಾಗಿರುವುದರಿಂದ ಪಕ್ಷ ರಾಜಕಾರಣ ಮಾಡದೇ ಜನರ ಒಳಿತಿಗಾಗಿ ಯೋಚಿಸಬೇಕಿದೆ ಎಂದರು.ಕೇರಳ ರಾಜ್ಯದವರು ಭೌತಿಕ ಸರ್ವೆ ಮಾಡಿಸಿ ಜನವಸತಿ, ಕೃಷಿ ಪ್ರದೇಶವನ್ನು ಅತಿಸೂಕ್ಷ್ಮ ಪ್ರದೇಶದಿಂದ ಕೈಬಿಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಅದೇ ರೀತಿ ರಾಜ್ಯ ಸರ್ಕಾರವೂ ಕೂಡ ಭೌತಿಕ ಸರ್ವೆ ನಡೆಸಿ, ಜನವಸತಿ, ಕೃಷಿ ಪ್ರದೇಶವನ್ನು ಕೈ ಬಿಟ್ಟು ಮಾರ್ಪಾಡು ಮಾಡಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಒತ್ತಾಯಿಸಿದರು.
ಪಕ್ಷಾತೀತ ಹೋರಾಟಕ್ಕೆ ಬೆಂಬಲ: ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಜಿಲ್ಲೆಯಲ್ಲಿ ನಡೆಯುತ್ತಿರುವ ಪಕ್ಷಾತೀತ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಹೇಳಿದರು. ಈಗಾಗಲೇ ಮೂರು ಜಿಲ್ಲೆಯ ಸಂಸದರು, ಮಾಜಿ ಸಂಸದರು ಬಿಜೆಪಿ ಕಚೇರಿಯಲ್ಲಿ ವರದಿ ಕುರಿತು ಚರ್ಚೆ ಮಾಡಿದ್ದೇವೆ. ಇದು ಪಕ್ಷ ರಾಜಕಾರಣಕ್ಕೆ ಒಳಪಡಬಾರದು. ವಿಷಯ ಆಧಾರಿತ ಮೇಲೆ ಬೆಂಬಲ ಕೊಟ್ಟಿದ್ದೇವೆ. ಮಧು ಬಂಗಾರಪ್ಪ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಬೇಕು. ಅವರಿಗೆ ಇದರ ಗಂಭೀರತೆ ಅರ್ಥ ಆಗಿಲ್ಲ ಎಂದು ಕಿಡಿಕಾರಿದರು.ವಿಶೇಷ ಅಧಿವೇಶನ ಸ್ವಾಗತಾರ್ಹ: ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಕಸ್ತೂರಿ ರಂಗನ್ ವರದಿ ವಿಚಾರವಾಗಿ ವಿಶೇಷ ಅಧಿವೇಶನ ಕರೆದು ಚರ್ಚೆ ನಡೆಸುವುದಾಗಿ ನೀಡಿರುವ ಹೇಳಿಕೆಯ ಸ್ವಾಗತಿಸಿದ ಅವರು, ಪಕ್ಷ ಬೇಧ ಮರೆದು ಎಲ್ಲಾ ನಾಯಕರು ವಿಶೇಷ ಅಧಿವೇಶನದಲ್ಲಿ ಭಾಗಿಯಾಗಿ ಚರ್ಚೆ ನಡೆಸಿ ಕಸ್ತೂರಿ ರಂಗನ್ ವರದಿಯ ವಿರುದ್ಧ ನಿರ್ಣಯ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ ಜಗದೀಶ್, ಮೋಹನ್ ರೆಡ್ಡಿ, ಮಾಲತೇಶ್, ಶಿವರಾಜು, ಕೆ.ಜಿ.ಕುಮಾರಸ್ವಾಮಿ, ಚಂದ್ರಶೇಖರ್, ಮಂಜುನಾಥ್ ಇದ್ದರು.ಮಧುಬಂಗಾರಪ್ಪ, ಬಂಗಾರಪ್ಪ ಅಲ್ಲ: ಸಿದ್ದರಾಮಣ್ಣ: ನೀವು ಮಧು ಬಂಗಾರಪ್ಪ ಅಷ್ಟೇ, ಬಂಗಾರಪ್ಪ ಅಲ್ಲ. ಬಂಗಾರಪ್ಪ ಆಗಲು ನಿಮ್ಮಲ್ಲಿ ಆ ಸಾಮರ್ಥ್ಯ ಇಲ್ಲ. ನೀವು ಅಷ್ಟು ಸಾಧನೆಯನ್ನು ಮಾಡಿಲ್ಲ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ, ಬಿಜೆಪಿ ಪ್ರಭಾರಿ ಆರ್.ಕೆ. ಸಿದ್ದರಾಮಣ್ಣ ಟೀಕಿಸಿದರು. ಮಧು ಬಂಗಾರಪ್ಪ ಅವರ ತಂದೆಯ ಹೆಸರಿನಿಂದ ಸಚಿವರಾಗಿದ್ದಾರೆಯೇ ಹೊರತು ತಮ್ಮ ಸ್ವಂತ ಹೋರಾಟ ಅಥವಾ ಸಾಧನೆಯಿಂದ ಅಲ್ಲ. ಬಂಗಾರಪ್ಪನವರು ಈ ಹಿಂದೆ ನನಗೆ ತಮ್ಮ ಸಚಿವ ಸಂಪುಟದಲ್ಲಿ ಸ್ಥಾನ ನೀಡಿದ್ದರು. ಆ ಋಣ ತೀರಿಸಲು ಮಧು ಬಂಗಾರಪ್ಪರಿಗೆ ನನ್ನ ಅವಧಿಯಲ್ಲಿ ಸಚಿವ ಸ್ಥಾನ ನೀಡಿದ್ದೇನೆ ಎಂದು ಸ್ವತಃ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಈ ಹೇಳಿಕೆಯೇ ಅವರು ಸಚಿವ ಸ್ಥಾನ ಹೇಗೆ ದೊರಕಿತು ಎಂಬುದನ್ನು ತಿಳಿಸುತ್ತದೆ ಎಂದು ಟೀಕಿಸಿದರು.