;Resize=(412,232))
ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿ ಅನೇಕ ಗಣ್ಯರು ಉಪಸ್ಥಿತರಿದ್ದ ಶ್ವೇತಭವನ ಪತ್ರಕರ್ತರ ಗುಂಡು ಪಾರ್ಟಿಯ ಹೋಟೆಲ್‌ಗೆ ಏಕಾಏಕಿ ನುಗ್ಗಿದ ಶಸ್ತ್ರಧಾರಿ ವ್ಯಕ್ತಿಯೊಬ್ಬ ಮನಬಂದಂತೆ ಹಲವು ಸುತ್ತು ಗುಂಡು ಹಾರಿಸಿದ ಘಟನೆ ಅಮೆರಿಕ ಕಾಲಮಾನ ಶನಿವಾರ ರಾತ್ರಿ ನಡೆದಿದೆ. ಈ ವೇಳೆ ಅದೃಷ್ಟವಶಾತ್ ಯಾರಿಗೂ ಅಪಾಯವಾಗಿಲ್ಲ. ಟ್ರಂಪ್ ಈ ರೀತಿಯ ದಾಳಿಯಲ್ಲಿ ಬಚಾವಾಗಿದ್ದು 2 ವರ್ಷದಲ್ಲಿ 3ನೇ ಸಲವಾಗಿದೆ. ಆದರೆ, ದಾಳಿಕೋರನ ಗುರಿ ಯಾರು? ಡೊನಾಲ್ಡ್ ಟ್ರಂಪೋ ಅಥವಾ ಅವರ ಸರ್ಕಾರದ ಬೇರೆ ಯಾರೋ? ಎಂಬ ಪ್ರಶ್ನೆ ವ್ಯಕ್ತವಾಗಿದೆ.
ವಾಷಿಂಗ್ಟನ್‌ನ ಪ್ರತಿಷ್ಠಿತ ಹಿಲ್ಟನ್ ಹೋಟೆಲ್‌ನಲ್ಲಿ ಈ ಘಟನೆ ನಡೆದಿದ್ದು, ಸ್ವಲ್ಪ ಹೊತ್ತಿನಲ್ಲೇ ಕ್ಯಾಲಿಫೋರ್ನಿಯಾ ಮೂಲದ ದಾಳಿಕೋರ ಕೋಲ್ಸ್ ಥಾಮಸ್ ಅಲೆನ್ (31) ಎಂಬಾತನನ್ನು ಬಂಧಿಸಲಾಗಿದೆ. ಆತ ಶಿಕ್ಷಕ ವೃತ್ತಿ ಮಾಡುತ್ತಿದ್ದ ಹಾಗೂ ಟ್ರಂಪ್ ವಿರೋಧಿ ಡೆಮಾಕ್ರಟಿಕ್ ಪಕ್ಷದ ಬೆಂಬಲಿಗನಾಗಿದ್ದ ಎಂದು ಗೊತ್ತಾಗಿದೆ. ಈ ಘಟನೆಯು ಅಧ್ಯಕ್ಷರ ಭದ್ರತೆಯ ಬಗ್ಗೆ ಕಳವಳ ಉದ್ಭವಿಸುವಂತೆ ಮಾಡಿದೆ.
‘ದಾಳಿಕೋರನ ಗುರಿ ಟ್ರಂಪ್ ಅಥವಾ ಅಮೆರಿಕದ ಉನ್ನತ ಸಚಿವರು ಆಗಿರಲೂಬಹುದು. ಆದರೂ ಆತ ಅಲ್ಲಿ ಏಕೆ ಬಂದಿದ್ದ? ನಿಜವಾದ ಉದ್ದೇಶ ಏನು ಎಂಬ ಬಗ್ಗೆ ಸವಿಸ್ತಾರ ತನಿಖೆ ನಡೆಸುತ್ತಿದ್ದೇವೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.
ದಾಳಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿಶ್ವದ ಗಣ್ಯರು ಆಘಾತ ವ್ಯಕ್ತಪಡಿಸಿದ್ದು, ‘ಪ್ರಜಾಸತ್ತಾತ್ಮಕ ದೇಶಗಳಲ್ಲಿ ಹಿಂಸೆಗೆ ಜಾಗವಿಲ್ಲ’ ಎಂದಿದ್ದಾರೆ.
ಪ್ರತಿ ವರ್ಷದಂತೆ ಶ್ವೇತಭವನದ ವರದಿಗಾರರ ಸಂಘ ಹಿಲ್ಟನ್ ಹೋಟೆಲ್‌ನಲ್ಲಿ ಭೋಜನ ಕೂಟ ಆಯೋಜಿಸಿದ್ದು, ಇದರಲ್ಲಿ ಮೊದಲ ಬಾರಿ ಅಧ್ಯಕ್ಷ ಟ್ರಂಪ್ ಭಾಗವಹಿಸಿದ್ದರು. ಜತೆಗೆ ಅವರ ಪತ್ನಿ ಮೆಲಾನಿಯಾ, ಉಪಾಧ್ಯಕ್ಷ ಜೆಡಿ ವ್ಯಾನ್ಸ್, ಉಷಾ ವ್ಯಾನ್ಸ್, ರಾಜಕೀಯ ನಾಯಕರು, ಪತ್ರಿಕಾ ಕಾರ್ಯದರ್ಶಿ ಕ್ಯಾರೊಲಿನ್ ಲೆವಿಟ್, ಶ್ವೇತಭವನದ ವರದಿಗಾರರ ಸಂಘದ ಅಧ್ಯಕ್ಷೆ ಹಾಗೂ ವೈಟ್‌ಹೌಸ್ ಸಂಬಂಧಿತ ಸುದ್ದಿ ವರದಿ ಮಾಡುವ ಪತ್ರಕರ್ತರು ಸೇರಿದಂತೆ ಸಾವಿರಾರು ಜನ ಉಪಸ್ಥಿತರಿದ್ದರು.
ಕಾರ್ಯಕ್ರಮ ಆರಂಭವಾದ ಸ್ವಲ್ಪ ಹೊತ್ತಿನಲ್ಲೇ ಇದ್ದಕ್ಕಿದ್ದಂತೆ ಹಲವು ಸುತ್ತು ಗುಂಡು ಹಾರಿದ ಸದ್ದು ಕೇಳಿಬಂದಿದ್ದು, ಆತಂಕ ಸೃಷ್ಟಿಯಾಯಿತು. ಹೋಟೆಲ್‌ನಲ್ಲಿ ಮೊದಲೇ ರೂಂ ಬುಕ್ ಮಾಡಿಕೊಂಡಿದ್ದ ದಾಳಿಕೋರ, ಟ್ರಂಪ್ ಇದ್ದ ಬಾಲ್ ರೂಂ (ಸಭಾಂಗಣದ) ಹೊರಗೆ ಬಂದು ಗುಂಡು ಹಾರಿಸಿ ನುಗ್ಗಲು ಯತ್ನಿಸಿದ. ಆಗ ಚೆಕ್‌ಪಾಯಿಂಟ್‌ನಲ್ಲೇ ಆತನನ್ನು ಸಿಬ್ಬಂದಿ ತಡೆದು ಬಂಧಿಸಿದರು. ಈ ವೇಳೆ ಆತ ಹಾರಿಸಿದ ಗುಂಡು ಒಬ್ಬ ಭದ್ರತಾ ಸಿಬ್ಬಂದಿಗೆ ತಾಗಿದರೂ ಬುಲೆಟ್ ಪ್ರೂಫ್ ಜಾಕೆಟ್ ಕಾರಣ ಬಚಾವಾದರು.
ದಾಳಿಯ ಬೆನ್ನಲ್ಲೇ ಭದ್ರತಾ ಸಿಬ್ಬಂದಿ ಸೂಚನೆ ಮೇರೆಗೆ ಟ್ರಂಪ್ ಸೇರಿ ಗಣ್ಯರೆಲ್ಲ ಟೇಬಲ್ ಕೆಳಗೆ ಅವಿತರು. ಕೂಡಲೇ ಅಲ್ಲಿದ್ದ ಭದ್ರತಾ ಸಿಬ್ಬಂದಿ ಟ್ರಂಪ್‌ಗೆ ಅಡ್ಡಲಾಗಿ ನಿಂತು ರಕ್ಷಣೆ ನೀಡಿ, ವೇದಿಕೆ ಮೇಲಿದ್ದವರನ್ನೆಲ್ಲಾ ಸುರಕ್ಷಿತವಾಗಿ ಅಲ್ಲಿಂದ ಹೊರಗೆ ಕರೆದೊಯ್ದರು. ಉಳಿದ ಪತ್ರಕರ್ತರೆಲ್ಲಾ ಟೇಬಲ್‌ಗಳ ಕೆಳಗೆ ಅವಿತು ರಕ್ಷಣೆ ಪಡೆದುಕೊಂಡರು.
ಘಟನೆ ನಡೆದ ಸ್ವಲ್ಪ ಹೊತ್ತಿನ ಬಳಿಕ ದಾಳಿಕೋರನನ್ನು ಬಂಧಿಸಲಾಗಿದೆ ಎಂದು ಟ್ರಂಪ್ ಮಾಹಿತಿ ನೀಡಿದರು. ಜತೆಗೆ ಅವನ ಫೋಟೋಗಳನ್ನೂ ಟ್ರುತ್‌ನಲ್ಲಿ ಹಂಚಿಕೊಂಡರು.
ಒಳಬಂದದ್ದು ಹೇಗೆ?:
ಟ್ರಂಪ್ ಔತಣ ಆರಂಭ ಆಗುತ್ತಿದ್ದಂತೆಯೇ ಲಾಬಿಯಲ್ಲಿ ಗನ್ ಹಾಗೂ ಚಾಕು ಹಿಡಿದು ಟ್ರಂಪ್ ಇದ್ದ ಸಭಾಂಗಣದತ್ತ ನಡೆದ. ಪ್ರವೇಶ ದ್ವಾರದ ಚೆಕ್ ಪಾಯಿಂಟ್‌ನಲ್ಲಿದ್ದ ಭದ್ರತಾ ಸಿಬ್ಬಂದಿಯ ಕಣ್ಣುತಪ್ಪಿಸಿ ಒಳಗೆ ನುಗ್ಗಿದಾಗ ಆತನ ಮೇಲೆ ಹಲವು ಸುತ್ತು ಗುಂಡುಗಳನ್ನು ಹಾರಿಸಲಾಯಿತು. ಆದರೆ ಅದರಿಂದ ಯಾವುದೇ ಹಾನಿಯಾಗಿಲ್ಲ. ಒಬ್ಬಂಟಿಯಾಗಿ ಬಂದಿದ್ದ ಆತ ಗುಂಡು ಹಾರಿಸತೊಡಗುತ್ತಿದ್ದಂತೆ ಬಂಧಿಸಲಾಗಿದೆ.
ಆತನ ಬಳಿ ಚಾಕು, 1 ರೈಫಲ್ ಮತ್ತು 1 ಹ್ಯಾಂಡ್‌ಗನ್ ಇತ್ತು. ಕಳೆದ 2 ವರ್ಷಗಳಲ್ಲಿ ಅವನ್ನು ಆತ ಖರೀದಿಸಿದ್ದ ಎಂದು ಅಧಿಕಾರಿ ಹೇಳಿದ್ದಾರೆ. ಕ್ಯಾಲಿಫೋರ್ನಿಯಾದ ಆತನ ಮನೆ ಮೇಲೆ ಎಫ್‌ಬಿಐ ದಾಳಿ ನಡೆಸಿದೆ.
ಆಗಿದ್ದೇನು?
- ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ, ಕಚೇರಿಯಾಗಿರುವ ಶ್ವೇತಭವನದಿಂದ ವರದಿ ಮಾಡುವ ಪತ್ರಕರ್ತರದ್ದೇ ಒಂದು ಸಂಘವಿದೆ
- ಈ ಸಂಘ ವರ್ಷಕ್ಕೊಮ್ಮೆ ಅತ್ಯಂತ ಪ್ರತಿಷ್ಠಿತ ರೀತಿಯಲ್ಲಿ ಭೋಜನ- ಗುಂಡು ಪಾರ್ಟಿಯನ್ನು ಆಯೋಜಿಸುತ್ತದೆ. ಗಣ್ಯರು ಪಾಲ್ಗೊಳ್ಳುತ್ತಾರೆ
- ವಾಷಿಂಗ್ಟನ್‌ನ ಹಿಲ್ಟನ್ ಹೋಟೆಲ್‌ನಲ್ಲಿ ಶನಿವಾರ ರಾತ್ರಿ ಗುಂಡು ಪಾರ್ಟಿ. ಅಮೆರಿಕ ಅಧ್ಯಕ್ಷ ಟ್ರಂಪ್, ಉಪಾಧ್ಯಕ್ಷ ವ್ಯಾನ್ಸ್ ಕುಟುಂಬ ಭಾಗಿ
- ಬಾಲ್ ರೂಂನಲ್ಲಿ ಪಾರ್ಟಿ ಆರಂಭವಾಗುವಷ್ಟರಲ್ಲಿ ಹೊರಾಂಗಣದಲ್ಲಿ ಗುಂಡಿನ ಸದ್ದು. ಪಾರ್ಟಿಯಲ್ಲಿದ್ದವರಿಗೆ ಶಾಕ್. ಟ್ರಂಪ್, ವ್ಯಾನ್ಸ್ ರಕ್ಷಣೆ
- ಸಭಾಂಗಣದ ಚೆಕ್‌ಪಾಯಿಂಟ್‌ನಲ್ಲೇ ದಾಳಿಕೋರನನ್ನು ತಡೆದು ಬಂಧಿಸಿದ ಭದ್ರತಾ ಸಿಬ್ಬಂದಿ. ಒಬ್ಬ ಅಧಿಕಾರಿಗೆ ಗುಂಡೇಟು. ಅಪಾಯವಿಲ್ಲ
ದಾಳಿ ಮಾಡಿದ್ದು
ಉತ್ತಮ ಶಿಕ್ಷಕ!
- ಟ್ರಂಪ್ ಗುಂಡು ಪಾರ್ಟಿ ಮೇಲೆ ಗುಂಡಿನ ದಾಳಿ ನಡೆಸಿದವನು ಕೋಲ್ ಥಾಮಸ್ ಅಲೆನ್ ಎಂಬ 31 ವರ್ಷದ ವ್ಯಕ್ತಿ
- ಈಗ ಮೆಕ್ಯಾನಿಕಲ್ ಎಂಜಿನಿಯರ್, ಸ್ವತಂತ್ರ ಗೇಮರ್. ಇದಿಷ್ಟೆ ಅಲ್ಲದೆ ಉತ್ತಮ ಶಿಕ್ಷಕ ಎಂಬ ಪ್ರಶಸ್ತಿ ಪಡೆದಿದ್ದವ
- ಟ್ರಂಪ್ ಅವರ ಪಕ್ಷ ರಿಪಬ್ಲಿಕನ್‌ಗೆ ಎದುರಾಳಿಯಾಗಿರುವ ಡೆಮೊಕ್ರಟಿಕ್ ಪಕ್ಷದ ಬೆಂಬಲಿಗನಾಗಿರುವ ಥಾಮಸ್
- ಅಮೆರಿಕ ಅಧ್ಯಕ್ಷೀಯ ಚುನಾವಣೆ ವೇಳೆ ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್‌ಗೆ 25 ಡಾಲರ್ ದೇಣಿಗೆ ಕೊಟ್ಟಿದ್ದ
ಅತ್ಯಂತ ಭದ್ರತೆ
ಸ್ಥಳಕ್ಕೆ ಬಂದಿದ್ದೇಗೆ?
- ಗುಂಡು ಪಾರ್ಟಿ ನಡೆಯುತ್ತಿದ್ದ ಹಿಲ್ಟನ್ ಹೋಟೆಲ್‌ನಲ್ಲಿ ರೂಂ ಮಾಡಿರುವವರಿಗೆ ಆ ಹೋಟೆಲ್ ಪ್ರವೇಶಿಸಲು ಅವಕಾಶವಿತ್ತು
- ಭೋಜನಕೂಟ ನಡೆಯುತ್ತಿದ್ದ ಬಾಲ್ ರೂಂಗೆ ಮಾತ್ರ ಅಮೆರಿಕದ ಅಧಿಕಾರಿಗಳು ಅತ್ಯಂತ ಬಿಗಿ ಭದ್ರತಾ ವ್ಯವಸ್ಥೆ ಕಲ್ಪಿಸಿದ್ದರು
- ದಾಳಿಕೋರ ಥಾಮಸ್ ಅಲೆನ್ ಹಿಲ್ಟನ್ ಹೋಟೆಲ್‌ನಲ್ಲಿ ಮೊದಲೇ ರೂಂ ಬುಕ್ ಮಾಡಿದ್ದ. ಶಸ್ತ್ರಾಸ್ತ್ರವನ್ನು ಜೋಡಿಸಿಕೊಂಡಿದ್ದ
- ಟ್ರಂಪ್ ಪಾರ್ಟಿ ಆರಂಭವಾಗುತ್ತಿದ್ದಂತೆ ಲಾಬಿಯಿಂದ ಸಭಾಂಗಣದತ್ತ ನುಗ್ಗಿದ. ತಪಾಸಣಾ ಅಧಿಕಾರಿಗಳ ಮೇಲೆ ದಾಳಿ ಮಾಡಿದ
- ಒಬ್ಬರಿಗೆ ಗುಂಡೇಟು ತಗುಲಿತು. ಗುಂಡು ನಿರೋಧಕ ಕವಚ ಧರಿಸಿದ್ದರಿಂದ ಏನೂ ಆಗಲಿಲ್ಲ. ಬಳಿಕ ಆತನನ್ನು ಬಂಧಿಸಲಾಯಿತು
ಯಾವಾಗ?
ಅಮೆರಿಕ ಕಾಲಮಾನ ಶನಿವಾರ ರಾತ್ರಿ 8.30ಕ್ಕೆ. ಭಾರತೀಯ ಕಾಲಮಾನ ಭಾನುವಾರ ಬೆಳಗ್ಗೆ