ಕಾಠ್ಮಂಡು: ಭಾರತ-ಚೀನಾ ಐತಿಹಾಸಿಕ ಗಡಿ ವ್ಯಾಪಾರ ಪುನಾರಂಭಗೊಳಿಸುತ್ತಿದ್ದಂತೆ ಅತ್ತ ನೇಪಾಳ ಗಡಿ ತಗಾದೆ ತೆಗೆದಿದೆ. ಭಾರತ-ಚೀನಾ ನಡುವೆ 3 ಗಡಿ ಪ್ರದೇಶಗಳಲ್ಲಿ ಲೆಪುಲೇಖ್ ಪ್ರದೇಶವು ನೇಪಾಳದ ಗಡಿ ಭಾಗವೆಂದು ಅಲ್ಲಿನ ಸರ್ಕಾರ ಆಕ್ಷೇಪ ತೆಗೆದಿದೆ. ಲೆಪುಲೇಖ್ ಪ್ರದೇಶ ನೇಪಾಳದ ಅವಿಭಾಜ್ಯ ಅಂಗ. ಇಲ್ಲ ಭಾರತ ಮತ್ತು ಚೀನಾ ವ್ಯಾಪಾರ ನಡೆಸುವುದು ಅಕ್ರಮ ಎಂದಿದೆ.
ಮಂಗಳವಾರ ಭಾರತ ಮತ್ತು ಚೀನಾ ನಡುವೆ ಗಡಿ ವ್ಯಾಪಾರ ಒಪ್ಪಂದ ಹೊರಬೀಳುತ್ತಿದ್ದಂತೆ ಬುಧವಾರ ಪ್ರತಿಕ್ರಿಯಿಸಿರುವ ನೇಪಾಳ ವಿದೇಶಾಂಗ ವಕ್ತಾರ ಲೋಕಬಹದ್ದೂರ್ ಚೆಟ್ರಿ, ‘ಮಹಾಕಾಳಿ ನದಿಯ ಪೂರ್ವ ಭಾಗದಲ್ಲಿರುವ ಲೆಪುಲೇಖ್, ಲಿಂಪಿಯಾಧುರಾ ಮತ್ತು ಕಾಲಾಪಾನಿ ಪ್ರದೇಶಗಳು ನೇಪಾಳದ ಭಾಗವಾಗಿದ್ದು, ನಮ್ಮ ಅಧಿಕೃತ ಭೂಪಟ ಮತ್ತು ಸಂವಿಧಾನದಲ್ಲಿಯೂ ಇದೆ. ಈ ಪ್ರದೇಶದಲ್ಲಿ ಭಾರತವು ರಸ್ತೆ ನಿರ್ಮಿಸುವುದು, ಗಡಿ ವಿಸ್ತರಣೆ, ಗಡಿ ವ್ಯಾಪಾರ ನಡೆಸಬಾರದು. ಈ ಪ್ರದೇಶಗಳು ನೇಪಾಳದ ಭಾಗವಾಗಿದೆ’ ಎಂದು ಹೇಳಿದ್ದಾರೆ.
ಭಾರತ ತಿರುಗೇಟು:
ನೇಪಾಳದ ಹೇಳಿಕೆಗಳು ಸತ್ಯಕ್ಕೆ ದೂರವಾಗಿದ್ದು, ಆಧಾರರಹಿತವಾಗಿದೆ. ಲೆಪುಲೇಖ್ ಮೂಲಕ ಭಾರತ ಚೀನಾ 1954ರಿಂದ ವ್ಯಾಪಾರ ನಡೆಸುತ್ತಿದ್ದು, ಕೋವಿಡ್ ಮತ್ತು ಕೆಲ ಘಟನೆಗಳಿಂದ ನಿಂತಿತ್ತು. ಈಗ ಮತ್ತೆ ಆರಂಭವಾಗಿದೆ ಎಂದು ಭಾರತ ತಿರುಗೇಟು ನೀಡಿದೆ.