ತನ್ನ ಖಾರ್ಗ್‌ ದ್ವೀಪದ ಮೇಲೆ ಅಮೆರಿಕ ಅಧ್ಯಕ್ಷ ಟ್ರಂಪ್‌ ಕಣ್ಣುಹಾಕಿದ ಬೆನ್ನಲ್ಲೇ ಯುದ್ಧದ ವ್ಯಾಪ್ತಿಯನ್ನು ವಿಸ್ತರಿಸುವ ಶಪಥಗೈದಿದ್ದ ಇರಾನ್‌, ಸಮರದ 16ನೇ ದಿನ ಅದರಂತೆ ಭಾರೀ ದಾಳಿಗಳನ್ನು ನಡೆಸಿದೆ. ಸೌದಿ ಅರೇಬಿಯಾದಲ್ಲಿರುವ ಅಮೆರಿಕದ ಅಲ್‌-ಖರ್ಜ್‌ ವಾಯುನೆಲೆಯ ಮೇಲೆ ಘನ ಮತ್ತು ದ್ರವ ಇಂಧನವನ್ನು ಬಳಸುವ ಕ್ಷಿಪಣಿಗಳ ಮಳೆಗರೆದಿದೆ

ದುಬೈ: ತನ್ನ ಖಾರ್ಗ್‌ ದ್ವೀಪದ ಮೇಲೆ ಅಮೆರಿಕ ಅಧ್ಯಕ್ಷ ಟ್ರಂಪ್‌ ಕಣ್ಣುಹಾಕಿದ ಬೆನ್ನಲ್ಲೇ ಯುದ್ಧದ ವ್ಯಾಪ್ತಿಯನ್ನು ವಿಸ್ತರಿಸುವ ಶಪಥಗೈದಿದ್ದ ಇರಾನ್‌, ಸಮರದ 16ನೇ ದಿನ ಅದರಂತೆ ಭಾರೀ ದಾಳಿಗಳನ್ನು ನಡೆಸಿದೆ. ಸೌದಿ ಅರೇಬಿಯಾದಲ್ಲಿರುವ ಅಮೆರಿಕದ ಅಲ್‌-ಖರ್ಜ್‌ ವಾಯುನೆಲೆಯ ಮೇಲೆ ಘನ ಮತ್ತು ದ್ರವ ಇಂಧನವನ್ನು ಬಳಸುವ ಕ್ಷಿಪಣಿಗಳ ಮಳೆಗರೆದಿದೆ. ಜತೆಗೆ ಇತರೆ ಗಲ್ಫ್‌ ರಾಷ್ಟ್ರಗಳ ಮೇಲಿನ ಆಕ್ರಮಣವನ್ನೂ ತೀವ್ರಗೊಳಿಸಿದೆ. ಅಲ್ಲದೆ ಇಸ್ರೇಲ್ ರಾಜಧಾನಿ ಟೆಲ್‌ ಅವೀವ್‌ ಮೇಲೆ ಭೀಕರ ದಾಳಿ ನಡೆಸಿ ಸೇಡು ತೀರಿಸಿಕೊಳ್ಳುವ ಯತ್ನ ನಡೆಸಿದೆ.

ಅಮೆರಿಕ ನೆಲೆಗಳು ಗುರಿ:

ಅಮೆರಿಕ ಸೇನೆಯ ಬಲವಾಗಿರುವ ಎಫ್‌-35 ಮತ್ತು ಎಫ್‌-16 ಯುದ್ಧವಿಮಾನ, ಇಂಧನ ಮರುಪೂರಣ ಹಾಗೂ ಕಣ್ಗಾವಲು ವಿಮಾನಗಳಿರುವ ಅಲ್‌-ಖರ್ಜ್‌ನಿಂದಲೇ ತಮ್ಮ ವಿರುದ್ಧದ ದಾಳಿ ಆರಂಭವಾಗಿದ್ದವು ಎಂದು ಆರೋಪಿಸಿದ ಇರಾನ್‌ ಅದರನ್ನು ಗುರಿಯಾಗಿಸಿ ದಾಳಿ ನಡೆಸಿದೆ. ಅತ್ತ ಜೋರ್ಡನ್‌ನ ಹಲವು ವಾಯುನೆಲೆಗಳ ಮೇಲೂ ವಾಯುದಾಳಿ ನಡೆಸಿದ್ದು, ‘ಅಮೆರಿಕದ ಸೈನಿಕರು ಎಲ್ಲೇ ಅಡಗಿದ್ದರೂ ನಮ್ಮ ಮಾರಕ ಅಸ್ತ್ರಗಳು ಅವರನ್ನು ಹುಡುಕಿ ಹೊಡೆಯುತ್ತವೆ’ ಎಂದು ಐಆರ್‌ಜಿಸಿ ಅಬ್ಬರಿಸಿದೆ.

ಖಾರ್ಗ್‌ ದಾಳಿಗೆ ಪ್ರತೀಕಾರ:

ತನ್ನ ಅತ್ಯಮೂಲ್ಯ ಖಾರ್ಗ್‌ ದ್ವೀಪದ ಮೇಲೆ ಅಮೆರಿಕ ನಡೆಸಿದ ದಾಳಿಗೆ ಯುಎಇಯ 2 ಪ್ರದೇಶಗಳನ್ನು ಬಳಸಲಾಗಿತ್ತು ಎಂದು ಆರೋಪಿಸಿರುವ ಇರಾನ್, ದುಬೈ ಕಡೆಗೂ ಕ್ಷಿಪಣಿಗಳನ್ನು ಹಾರಿಸಿದೆ. ಆದರೆ ಅಲ್ಲಿನ ವಾಯುರಕ್ಷಣಾ ವ್ಯವಸ್ಥೆಯು ಆಪತ್ತನ್ನು ತಡೆದುರುಳಿಸಿದೆ. ನೆರೆರಾಷ್ಟ್ರಗಳಾದ ಬಹ್ರೈನ್‌, ಯುಎಇ, ಸೌದಿ, ಕತಾರ್‌, ಒಮಾನ್‌ ಮೇಲೂ ಕ್ಷಿಪಣಿ ಮತ್ತು ಡ್ರೋನ್‌ಗಳ ದಾಳಿಯಾಗಿದೆ.

ಇಸ್ರೇಲ್‌ ಮೇಲೆ ದಾಳಿ:

ಇಸ್ರೇಲ್‌ನ ಮಧ್ಯಭಾಗ ಮತ್ತು ರಾಜಧಾನಿ ಟೆಲ್‌ ಅವೀವ್‌ ಮೇಲಿನ ಇರಾನ್‌ ದಾಳಿಯಿಂದ ತುರ್ತು ಸೈರನ್‌ಗಳು ಬಿಡುವಿಲ್ಲದೆ ಮೊಳಗಿದ್ದು, ಹಲವು ಕಡೆ ಹಾನಿಗಳು ವರದಿಯಾಗಿವೆ. ರಕ್ಷಣಾ ವ್ಯವಸ್ಥೆಗಳು ತಮ್ಮ ಕೆಲಸ ಮಾಡಿದ್ದರಿಂದ ಕೆಲವರಿಗೆ ಗಾಯಗಳ ಹೊರತು ಪ್ರಾಣಹಾನಿಗಳು ಆಗಿಲ್ಲ.

ಬಗ್ದಾದ್‌ನಲ್ಲೂ ಅಟ್ಯಾಕ್‌:

ಇರಾಕ್‌ ರಾಜಧಾನಿ ಬಗ್ದಾದ್‌ನಲ್ಲಿರುವ ಅಮೆರಿಕದ ಬೃಹತ್‌ ದೂತಾವಾಸದ ಹೆಲಿಪ್ಯಾಡ್‌ ಗುರಿಯಾಗಿಸಿಕೊಂಡು ಇರಾನ್‌ ಕ್ಷಿಪಣಿ ದಾಳಿ ಮಾಡಿದೆ.ಇರಾನ್‌ ಮೇಲೂ ದಾಳಿ:

ಈ ನಡುವೆ ಇಸ್ರೇಲ್‌ ಕೂಡಾ ಭಾನುವಾರ ಇರಾನ್‌ ರಾಜಧಾನಿ ಟೆಹ್ರಾನ್‌ ಸೇರಿದಂತೆ ಹಲವು ನಗರಗಳ ಮೇಲೆ ಕ್ಷಿಪಣಿ ಮತ್ತು ಬಾಂಬ್‌ ದಾಳಿ ನಡೆಸಿ ಭಾರೀ ಪ್ರಮಾಣದ ಹಾನಿಗೈದಿದೆ ಎನ್ನಲಾಗಿದೆ.