ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ಹಿನ್ನೆಲೆ ಕೆಲ ಕಾಲ ರಷ್ಯಾ ತೈಲ ಖರೀದಿ ಕಡಿತಗೊಳಿಸಿದ್ದ ಭಾರತದ ತೈಲ ಕಂಪನಿಗಳು ಮತ್ತೆ ರಷ್ಯಾದಿಂದ ತೈಲ ಖರೀದಿ ಪುನಾರಂಭ ಮಾಡಿವೆ. ಈ ಬಾರಿ ರಷ್ಯಾ ಕಂಪನಿಗಳು ಭಾರತಕ್ಕೆ ಹೆಚ್ಚುವರಿಯಾಗಿ ಶೇ.5ರಷ್ಟು ರಿಯಾಯ್ತಿ ಘೋಷಿಸಿವೆ ಎನ್ನಲಾಗಿದೆ.
ಕಳೆದ ವರ್ಷ ಭಾರತ, ತನ್ನ ಒಟ್ಟು ಬೇಡಿಕೆಯ ಪೈಕಿ ಶೇ.40ರಷ್ಟು ಕಚ್ಚಾತೈಲವನ್ನು ರಷ್ಯಾದಿಂದಲೇ ಖರೀದಿ ಮಾಡಿತ್ತು. ಯುರೋಪ್ ಮತ್ತು ಅಮೆರಿಕದ ನಿರ್ಬಂಧಗಳ ಹಿನ್ನೆಲೆಯಲ್ಲಿ ರಷ್ಯಾ ರಿಯಾಯ್ತಿ ದರದಲ್ಲಿ ಪೂರೈಕೆಯ ಆಫರ್ ನೀಡಿದ್ದು ಇದಕ್ಕೆ ಕಾರಣವಾಗಿತ್ತು.
ಆದರೆ ಭಾರತ ಹೀಗೆ ತೈಲ ಖರೀದಿ ಮೂಲಕ ಉಕ್ರೇನ್ ಮೇಲಿನ ರಷ್ಯಾ ದಾಳಿಗೆ ಪರೋಕ್ಷವಾಗಿ ಹಣ ಪೂರೈಸುತ್ತಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ಇದೇ ಕಾರಣಕ್ಕೆ ಆ.27ರಿಂದ ಜಾರಿಗೆ ಬರುವಂತೆ ಭಾರತದ ಉತ್ಪನ್ನಗಳಿಗೆ ಶೇ.25ರಷ್ಟು ಹೆಚ್ಚುವರಿ ತೆರಿಗೆ ಘೋಷಣೆ ಮಾಡಿದ್ದರು.
ಹೀಗಾಗಿ ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ ಮತ್ತು ಭಾರತ್ ಪೆಟ್ರೋಲಿಯಂ ಕಂಪನಿಗಳು ರಷ್ಯಾ ತೈಲ ಖರೀದಿಗೆ ಕೊಂಚ ಬ್ರೇಕ್ ಹಾಕಿದ್ದವು.
ಆದರೆ ಇದೀಗ ಮತ್ತೆ ಈ ಕಂಪನಿಗಳು ಮುಂಬರುವ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ತೈಲ ಖರೀದಿಗೆ ಬೇಡಿಕೆ ಸಲ್ಲಿಸಿರುವುದು ದಾಖಲೆಗಳಿಂದ ಬಹಿರಂಗವಾಗಿದೆ.
ರಷ್ಯಾ-ಉಕ್ರೇನ್ ಯುದ್ಧ ಸ್ಥಗಿತಕ್ಕೆ ಭಾರತಕ್ಕೆ ತೈಲ ತೆರಿಗೆ: ಅಮೆರಿಕಅಚ್ಚರಿಯ ಹೇಳಿಕೆ ನೀಡಿದ ಶ್ವೇತಭವನದ ಅಧಿಕಾರಿನ್ಯೂಯಾರ್ಕ್: ರಷ್ಯಾದೊಂದಿಗೆ ತೈಲ ಖರೀದಿ ಮಾಡಿದ್ದಕ್ಕೆ ಭಾರತದ ಮೇಲೆ ಹೆಚ್ಚುವರಿ ಶೇ.25ರಷ್ಟು ತೆರಿಗೆ ಹೇರಿದ್ದಾಗಿ ಹೇಳುತ್ತಿದ್ದ ಅಮೆರಿಕ ಇದೀಗ ಅದಕ್ಕೆ ಬೇರೆಯದೇ ಕಾರಣ ನೀಡಿದೆ. ‘ರಷ್ಯಾ-ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸುವ ಸಲುವಾಗಿ ಭಾರತದ ಮೇಲೆ ಸುಂಕ ಹೇರಿದೆವು’ ಎಂದು ಅಮೆರಿಕ ಅಧ್ಯಕ್ಷರ ಗೃಹ ಕಚೇರಿ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೊಲಿನ್ ಲೆವಿಟ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲೆವಿಟ್, ‘ಈ ಯುದ್ಧವನ್ನು ನಿಲ್ಲಿಸಲು ಟ್ರಂಪ್ ಅನೇಕ ರೀತಿಗಳಲ್ಲಿ ಒತ್ತಡ ಹಾಕುತ್ತಿದ್ದಾರೆ. ಭಾರತದ ಮೇಲೆ ಸುಂಕ ಹೇರಿಕೆ ಸೇರಿದಂತೆ ಅನೇಕ ಕ್ರಮಗಳನ್ನು ಕೈಗೊಂಡಿದ್ದಾರೆ. ಕದನ ನಿಲ್ಲಿಸಿಯೇ ಸಿದ್ಧ ಎಂದು ಟ್ರಂಪ್ ನಿಶ್ಚಯಿಸಿಕೊಂಡಿದ್ದಾರೆ’ ಎಂದರು. ಸುಮಾರು 3 ವರ್ಷಗಳಿಂದ ನಡೆಯುತ್ತಿರುವ ಸಮರವನ್ನು ನಿಲ್ಲಿಸುವ ಸಲುವಾಗಿ ಎರಡೂ ರಾಷ್ಟ್ರದ ನಾಯಕರೊಂದಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತ್ಯೇಕ ಸಭೆ ನಡೆಸಿದ ಬೆನ್ನಲ್ಲೇ ಈ ಹೇಳಿಕೆ ಬಂದಿದೆ.