ನವದೆಹಲಿ: ಆಪರೇಷನ್ ಸಿಂದೂರದಿಂದ ಬಿದ್ದ ಪೆಟ್ಟಿನಿಂದ ಚೇತರಿಸಿಕೊಳ್ಳಲು ಹೆಣಗಾಡುತ್ತಿರುವ ಪಾಕಿಸ್ತಾನದ ಅಧ್ಯಕ್ಷರು ಸೇರಿದಂತೆ ನಾಯಕರೆಲ್ಲಾ ಭಾರತದ ಮೇಲೆ ಪ್ರತೀಕಾರದ ಮಾತನ್ನಾಡುತ್ತಿದ್ದಾರೆ. ಆದರೆ ಅವರ ನುಡಿಗೂ ನಡೆಗೂ ಸಂಬಂಧವೇ ಇಲ್ಲ ಎಂಬುದು ಉಪಗ್ರಹ ಚಿತ್ರಗಳು ಹೇಳಿವೆ.
ಸಿಂದೂರದ ವೇಳೆ ಎರಡೂ ದೇಶಗಳ ವಾಯುಪಡೆ ಮತ್ತು ಸೇನೆ ಮಾತ್ರ ಕದನ ಕಣದಲ್ಲಿದ್ದವು. ಆದರೆ ಭಾರತದ ನೌಕಾಪಡೆಯೂ ದಾಳಿಗೆ ಸನ್ನದ್ಧವಾಗಿತ್ತು. ಆದರೆ ಸಮರ ಉತ್ತುಂಗದಲ್ಲಿದ್ದ ವೇಳೆಯಲ್ಲಿ ಕರಾಚಿಯಲ್ಲಿದ್ದ ಯುದ್ಧನೌಕೆಗಳನ್ನು ವಾಣಿಜ್ಯ ಟರ್ಮಿನಲ್‌ಗಳತ್ತ ಸಾಗಿದ್ದವು. ಕೆಲವು ಭಾರತದಿಂದ ಆದಷ್ಟು ದೂರ, ಪಶ್ಚಿಮದಲ್ಲಿರುವ ಗ್ವಾದರ್ ನೆಲೆಯಲ್ಲಿ ಆಶ್ರಯ ಪಡೆದಿದ್ದುದು ಚಿತ್ರದಲ್ಲಿ ಕಂಡುಬಂದಿದೆ.
ಭಾರತ ವ್ಯಂಗ್ಯ:
1971ರ ಬಾಂಗ್ಲಾ ವಿಮೋಚನಾ ಯುದ್ಧದ ವೇಳೆ ಕರಾಚಿ ಬಂದರಿನ ಮೇಲೆ ನಡೆದ ದಾಳಿಯಲ್ಲಿ ಭಾಗವಹಿಸಿದ್ದ ನಿವೃತ್ತ ವೈಸ್ ಅಡ್ಮಿರಲ್ ಎಸ್.ಸಿ. ಸುರೇಶ ಬಂಗೇರ ಮಾತನಾಡಿ, ‘ಮೇ 7ರಂದು ಪಾಕಿಸ್ತಾನದ ಉಗ್ರನೆಲೆಗಳ ಮೇಲೆ ನಾವು ಆಕ್ರಮಣ ಮಾಡಿದಾಗ ಅವರ ಮೂರೂ ಪಡೆಗಳು ದಾಳಿಯನ್ನು ಎದುರಿಸಲು ಸಿದ್ಧವಾಗಿ ಇರಬೇಕಿತ್ತು. ಆದರೆ ಅವರ ಯುದ್ಧನೌಕೆಗಳು ಬಂದರಿನಲ್ಲೇ ಇದ್ದದ್ದನ್ನು ನೋಡಿದರೆ, ಅವರ ಸೇನಾ ಸಿದ್ಧತೆಗಳ ಬಗ್ಗೆ ಪ್ರಶ್ನೆ ಉದ್ಭವಿಸುವಂತಿದೆ’ ಎಂದು ಅಣಕಿಸಿದ್ದಾರೆ.
‘ದಾಳಿಯಿಂದ ತಪ್ಪಿಸಿಕೊಳ್ಳಲು ವಾಯುಪಡೆ ನಾಗರಿಕ ವಿಮಾನಗಳನ್ನು ಗುರಾಣಿಯ ರೀತಿ ಬಳಸಿದಂತೆ, ನೌಕೆಗಳ ಮೇಲಿನ ದಾಳಿಯನ್ನು ತಪ್ಪಿಸಲು ಅವುಗಳನ್ನು ವಾಣಿಜ್ಯ ಬಂದರಿನಲ್ಲಿ ನಿಲ್ಲಿಸಿದ್ದರು’ ಎಂದು ಟೀಕಿಸಿದ್ದಾರೆ.