ಢಾಕಾ: ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಪಕ್ಷ, ಸತತ 4ನೇ ಬಾರಿ ಅಧಿಕಾರಕ್ಕೆ ಏರಿದ ಬೆನ್ನಲ್ಲೇ ಬಾಂಗ್ಲಾದೇಶದಲ್ಲಿ ಬಾಯ್ಕಾಟ್ ಇಂಡಿಯಾ ಅಭಿಯಾನ ಆರಂಭವಾಗಿದೆ. ಭಾರತದಿಂದ ಎಲ್ಲಾ ರೀತಿಯ ವಸ್ತುಗಳ ಆಮದು ನಿಷೇಧಿಸಬೇಕು ಎಂಬುದು ಈ ಅಭಿಯಾನದ ವಾದ.
ಭಾರತ ವಿರೋಧಿ ನಿಲುವು ಹೊಂದಿರುವ ಮಾಜಿ ಪ್ರಧಾನಿ ಖಲೀದಾ ಜಿಯಾ ನೇತೃತ್ವ ಬಿಎನ್‌ಪಿ ಸೇರಿದಂತೆ ವಿಪಕ್ಷಗಳು ಕಳೆದ ಜನವರಿಯಲ್ಲಿ ಆರಂಭಿಸಿದ್ದ ಅಭಿಯಾನ ಇದೀಗ ತೀವ್ರತೆ ಪಡೆದುಕೊಂಡಿದೆ.
ಶೇಖ್ ಹಸೀನಾ ಭಾರತ ಸ್ನೇಹಿ ನಿಲುವು ಹೊಂದಿದ್ದಾರೆ. ಕಳೆದ ಚುನಾವಣೆಯಲ್ಲಿ ಅವರ ಗೆಲುವಿಗೆ ಭಾರತ ಕೂಡಾ ನೆರವಾಗಿದೆ ಎಂಬುದು ವಿಪಕ್ಷಗಳ ಆರೋಪ. ಇದೇ ಕಾರಣಕ್ಕಾಗಿ ಕಳೆದ ಜನವರಿಯಲ್ಲಿ ನಡೆದ ಚುನಾವಣೆ ವೇಳೆಯೇ ವಿಪಕ್ಷಗಳು ಇಂಥದ್ದೊಂದು ಅಭಿಯಾನ ಆರಂಭಿಸಿದ್ದವು. ಈ ಅಭಿಯಾನ ಕಳೆದ ಕೆಲ ದಿನಗಳಿಂದ ಮತ್ತಷ್ಟು ತೀವ್ರತೆ ಪಡೆದುಕೊಂಡಿದ್ದು, ಭಾರತದ ಸೀರೆ ಆಮದು ನಿಷೇಧಿಸಬೇಕೆಂದು ವಿಪಕ್ಷಗಳು ಬೊಬ್ಬೆ ಹೊಡೆಯುತ್ತಿವೆ.
ಈ ನಡುವೆ ವಿಪಕ್ಷಗಳ ಅಭಿಯಾನದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಬಾಂಗ್ಲಾ ಪ್ರಧಾನಿ ಹಸೀನಾ, ಇಂಥದ್ದೊಂದು ಅಭಿಯಾನದ ಮೂಲಕ ವಿಪಕ್ಷ ನಾಯಕರು ಜನರಲ್ಲಿ ಭಾರತ ವಿರೋಧಿ ಭಾವನೆ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ವಾಸ್ತವವಾಗಿ ಬಹುತೇಕ ವಿಪಕ್ಷ ನಾಯಕರೇ ಭಾರತದಿಂದ ಸೀರೆ ಆಮದು ಮಾಡಿಕೊಂಡು ಅದನ್ನು ಬಾಂಗ್ಲಾದಲ್ಲಿ ಮಾರಾಟ ಮಾಡುತ್ತಿದ್ದಾರೆ. ಇಂಥ ಅಭಿಯಾನ ನಡೆಸುವ ಮೊದಲು ವಿಪಕ್ಷ ನಾಯಕರು ತಮ್ಮ ತಮ್ಮ ಪತ್ನಿಯರು ಖರೀದಿಸಿರುವ ಭಾರತೀಯ ಸೀರೆ ಸುಟ್ಟು ಇತರರಿಗೆ ಮಾದರಿಯಾಗಲಿ ಎಂದು ಸವಾಲು ಹಾಕಿದ್ದಾರೆ.
ಪ್ರತಿಭಟನೆಗೆ ಚೀನಾ ಕುಮ್ಮಕ್ಕು?
ಪಾಕಿಸ್ತಾನ, ನೇಪಾಳ, ಮಾಲ್ಡೀವ್ಸ್ ಮೊದಲಾದ ದೇಶಗಳನ್ನು ಈಗಾಗಲೇ ಭಾರತದ ವಿರುದ್ಧ ಎತ್ತಿಕಟ್ಟಿರುವ ಚೀನಾ, ಬಾಂಗ್ಲಾದೇಶದಲ್ಲಿ ಆರಂಭವಾಗಿರುವ ಭಾರತ ವಿರೋಧಿ ಹೋರಾಟಕ್ಕೂ ಕುಮ್ಮಕ್ಕು ನೀಡಿದೆ ಎನ್ನಲಾಗಿದೆ. ವಿಪಕ್ಷಗಳಿಗೆ ಹಣಕಾಸಿನ ನೆರವು ನೀಡಿ ಅವುಗಳನ್ನು ಭಾರತದ ವಿರುದ್ಧ ಎತ್ತಿಕಟ್ಟುತ್ತಿದೆ ಎಂದು ರಾಜಕೀಯ ವಿಶ್ಲೇಷಕರು ಅಂದಾಜಿಸಿದ್ದಾರೆ.