ಒಟ್ಟಾವಾ: ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಬಹಿರಂಗ ಆರೋಪ ಮಾಡಿ ಸ್ವದೇಶ ಮತ್ತು ವಿದೇಶಗಳಲ್ಲೂ ಭಾರೀ ಮುಖಭಂಗ ಅನುಭವಿಸಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ನವರಾತ್ರಿ ಹಿನ್ನೆಲೆಯಲ್ಲಿ ಅವರು ಭಾರತೀಯರಿಗೆ ಶುಭ ಕೋರಿದ್ದಾರೆ. ಈ ಮೂಲಕ ಮತ್ತೆ ಭಾರತದ ಕಡೆಗೆ ಸ್ನೇಹದ ಹಸ್ತ ಚಾಚಿದ್ದಾರೆ. ನಿಜ್ಜರ್ ಹತ್ಯೆಯಲ್ಲಿ ಭಾರತದ ಏಜೆಂಟ್‌ಗಳ ಕೈವಾಡವಿದೆ ಎಂದು ಟ್ರಡೋ ಬಹಿರಂಗ ಆರೋಪ ಮಾಡಿದ್ದರು. ಜೊತೆಗೆ ಜಗತ್ತಿನ ಹಲವು ದೇಶಗಳ ಬಳಿ ಭಾರತದ ಬಗ್ಗೆ ದೂರಿ ನಗೆಪಾಟಲಿಗೀಡಾಗಿದ್ದರು. ಆದರೆ ಈ ಬಗ್ಗೆ ಭಾರತ ಎಷ್ಟೇ ಕೇಳಿದರೂ ಸಾಕ್ಷ್ಯ ನೀಡಲು ವಿಫಲರಾಗಿದ್ದರು. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ, ಕೆನಡಾಕ್ಕೆ ವೀಸಾ ನೀಡಿಕೆ ಸ್ಥಗಿತಗೊಳಿಸಿತ್ತು. ಜೊತೆಗೆ ಭಾರತದಲ್ಲಿನ ಕೆನಡಾ ರಾಯಭಾರ ಸಿಬ್ಬಂದಿ ಕಡಿತಕ್ಕೆ ಸೂಚಿಸಿತ್ತು. ಆದರೆ ಇನ್ನಷ್ಟು ಕಠಿಣ ರಾಜತಾಂತ್ರಿಕ ಕ್ರಮದ ಸುಳಿವು ನೀಡಿತ್ತು. ಹೀಗಾಗಿ ಈ ವಿಷಯದಲ್ಲಿ ಟ್ರುಡೋ ಸ್ವತಃ ತಮ್ಮ ದೇಶ ಮತ್ತು ವಿದೇಶಗಳಲ್ಲಿ ದೃಷ್ಟಿಯಾಗಿ ಏಕಾಂಗಿಯಾಗಿ ಪೇಚಿಗೀಡಾಗಿದ್ದರು. ಜೊತೆಗೆ ಭಾರತದ ಕ್ರಮಗಳು ಕೆನಡಾ ಅರ್ಥವ್ಯವಸ್ಥೆ ಮೇಲೂ ಗಂಭೀರ ಪರಿಣಾಮ ಬೀರುವ ಸುಳಿವು ಕಂಡುಬಂದಿತ್ತು. ಅದರ ಬೆನ್ನಲ್ಲೇ ಟ್ರುಡೋ ಭಾರತೀಯರಿಗೆ ಹಬ್ಬದ ಶುಭ ಕೋರಿ ಸ್ನೇಹದ ಹಸ್ತ ಚಾಚಿದ್ದಾರೆ.