ರೋಗಕಾರಕ, ಅಸಾಮಾನ್ಯ ವೈರಸ್ ಸೃಷ್ಟಿಯಾಗಿಲ್ಲ: ಕ್ಸಿ ಸರ್ಕಾರ
ರೋಗದ ಬಗ್ಗೆ ಸ್ಪಷ್ಟನೆ ಕೇಳಿದ್ದ ವಿಶ್ವ ಆರೋಗ್ಯ ಸಂಸ್ಥೆಗೆ ಮಾಹಿತಿ ನೀಡಿರುವ ಚೀನಾ ಸರ್ಕಾರ, ‘ಶ್ವಾಸಕೋಶದ ಕಾಯಿಲೆಯಲ್ಲಿ ಯಾವುದೇ ರೀತಿಯ ರೋಗಕಾರಕ ಅಥವಾ ವಿಚಿತ್ರ ಸೂಕ್ಷ್ಮಜೀವಿಗಳು ಕಂಡುಬಂದಿಲ್ಲ. ಆದರೆ ವಿವಿಧ ರೋಗಾಣುಗಳಿಂದ ಒಟ್ಟಿಗೆ ಸೋಂಕು ಉಂಟಾಗಿರುವುದರಿಂದ ಆಸ್ಪತ್ರೆಗೆ ದಾಖಲಾಗುತ್ತಿರುವ ಮಕ್ಕಳ ಪ್ರಮಾಣ ಹೆಚ್ಚಾಗಿದೆ. ರೋಗನಿರೋಧಕ ಶಕ್ತಿಯ ಕೊರತೆಯೂ ಇದಕ್ಕೆ ಕಾರಣ’ ಎಂದಿದೆ. ಚೀನಾದ ರಾಜಧಾನಿ ಬೀಜಿಂಗ್ ಹಾಗೂ ಇತರ ನಗರಗಳಲ್ಲಿನ ಮಕ್ಕಳಲ್ಲಿ ನಿಗೂಢ ರೀತಿಯ ನ್ಯುಮೋನಿಯಾ ಸೋಂಕು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಾಗುತ್ತಿರುವ ಮಕ್ಕಳ ಪ್ರಮಾಣ ಆತಂಕಕಾರಿ ರೀತಿಯಲ್ಲಿ ಹೆಚ್ಚಾಗಿದೆ ಎಂದು ವರದಿಗಳು ತಿಳಿಸಿದ್ದವು. ಇದರ ಬೆನ್ನಲ್ಲೇ ಈ ಸೋಂಕಿನ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ವಿಶ್ವ ಆರೋಗ್ಯ ಸಂಸ್ಥೆ ಚೀನಾ ಸರ್ಕಾರಕ್ಕೆ ಸೂಚಿಸಿತ್ತು.