ಪ್ರತಿ ಸೆಕೆಂಡ್‌ಗೆ 150 ಸಿನಿಮಾ: ಚೀನಾ ಹೈಸ್ಪೀಡ್‌ ಇಂಟರ್ನೆಟ್

KannadaprabhaNewsNetwork |  
Published : Nov 16, 2023, 01:16 AM IST
ಇಂಟರ್ನೆಟ್‌ | Kannada Prabha

ಸಾರಾಂಶ

1.2 ಟಿಬಿಪಿಎಸ್‌ ವೇಗದಲ್ಲಿ ಡಾಟಾ ರವಾನೆ. ಅಮೆರಿಕದ 400 ಜಿಬಿಪಿಎಸ್‌ ದಾಖಲೆ ಭಗ್ನ. ಜಗತ್ತಿನಲ್ಲಿ ಈಗ ಲಭ್ಯ ಇರುವ ಇಂಟರ್ನೆಟ್‌ ವೇಗ 100 ಜಿಬಿಪಿಎಸ್‌. ಇತ್ತೀಚೆಗಷ್ಟೇ ಅಮೆರಿಕ 400 ಜಿಬಿಪಿಎಸ್‌ ವೇಗ ಅನಾವರಣಗೊಳಿಸಿತ್ತು. ಚೀನಾದಿಂದ 1200 ಜಿಬಿಪಿಎಸ್‌ ವೇಗದ ಇಂಟರ್ನೆಟ್‌ ಸೌಲಭ್ಯ. ಜಾಗತಿಕ ಮಟ್ಟದಲ್ಲಿ ಲಭ್ಯವಿರುವ ವೇಗಕ್ಕಿಂತ 12 ಪಟ್ಟು ಅಧಿಕ. ಬೀಜಿಂಗ್‌, ವುಹಾನ್‌, ಗ್ವಾಂಗ್‌ಝೂ ನಗರಗಳಲ್ಲಿ ವೇಗದ ನೆಟ್‌.

ಬೀಜಿಂಗ್‌: ತಂತ್ರಜ್ಞಾನ ವಲಯದಲ್ಲಿ ಜಗತ್ತಿನ ವೇಗಕ್ಕಿಂತ ಒಂದು ಹೆಜ್ಜೆ ಮುಂದಿರುವ ಚೀನಾ, ಇದೀಗ ವಿಶ್ವದ ಅತ್ಯಂತ ವೇಗದ ಇಂಟರ್ನೆಟ್‌ ಅನ್ನು ಅನಾವರಣಗೊಳಿಸಿದೆ. ಹೊಸ ತಲೆಮಾರಿನ ವೇಗದ ಇಂಟರ್ನೆಟ್‌ ಎಂದೇ ಬಣ್ಣಿಸಲಾಗಿರುವ ಇದರಲ್ಲಿ 1 ಸೆಕೆಂಡ್‌ಗೆ 1.2 ಟೆರಾಬೈಟ್‌ ವೇಗದಲ್ಲಿ ಮಾಹಿತಿ ರವಾನಿಸಬಹುದಾಗಿದೆ. ಅಂದರೆ ಒಂದು ಸೆಕೆಂಡ್‌ಗೆ ಎಚ್‌ಡಿ ಗುಣಮಟ್ಟದ 156 ಚಲನಚಿತ್ರಗಳನ್ನು ಒಂದೆಡೆಯಿಂದ ಇನ್ನೊಂದೆಡೆಗೆ ರವಾನಿಸಬಲ್ಲದು.

ಹಾಲಿ, ಇಡೀ ವಿಶ್ವದ ಜೀವನಾಡಿಯಾಗಿರುವ ಇಂಟರ್ನೆಟ್‌ ಸೆಕೆಂಡ್‌ಗೆ 100 ಗಿಗಾಬೈಟ್‌ ವೇಗದಲ್ಲಿ ಮಾಹಿತಿ ರವಾನಿಸುತ್ತಿದೆ. ಇನ್ನು ಅಮೆರಿಕ ಇತ್ತೀಚೆಗಷ್ಟೇ ತನ್ನ 5ನೇ ತಲೆಮಾರಿನ ಅಂದರೆ ಸೆಕೆಂಡ್‌ಗೆ 400 ಗಿಗಾಬೈಟ್‌ ವೇಗದ ಇಂಟರ್ನೆಟ್‌ ಅನಾವರಣಗೊಳಿಸಿತ್ತು. ಆದರೆ ಚೀನಾ ಜಾಗತಿಕ ಮಟ್ಟದಲ್ಲಿ ಲಭ್ಯವಿರುವ ವೇಗಕ್ಕಿಂತ 12 ಪಟ್ಟು ವೇಗದ ಇಂಟರ್ನೆಟ್‌ ವೇಗ (1200 ಗಿಗಾಬೈಟ್‌) ಸಾಧಿಸುವ ಮೂಲಕ ಜಾಗತಿಕ ಕಂಪನಿಗಳಿಗೆ ಸವಾಲು ಎಸೆದಿದೆ.

ಚೀನಾದ ಹುವಾಯ್‌ ಟೆಕ್ನಾಲಜೀಸ್‌, ಸಿಂಗ್‌ಹ್ವಾ ವಿಶ್ವವಿದ್ಯಾಲಯ ಹಾಗೂ ಸೆರ್‌ನೆಟ್‌ ಎಂಬ ಶಿಕ್ಷಣ ಸಂಸ್ಥೆ ಜಂಟಿಯಾಗಿ ಬೀಜಿಂಗ್‌, ವುಹಾನ್‌ ಹಾಗೂ ಗ್ವಾಂಗ್‌ಝೂ ನಗರಗಳ 3000 ಕಿಲೋಮೀಟರ್‌ ನಡುವೆ ಆಪ್ಟಿಕಲ್‌ ಫೈಬರ್‌ ಜಾಲ ರೂಪಿಸಿವೆ. ಅದರಲ್ಲಿ ಈ ವೇಗದ ಇಂಟರ್ನೆಟ್‌ ದಾಖಲಾಗಿದೆ.ಈ ಕುರಿತು ಮಾತನಾಡಿದ ಯೋಜನೆ ಪ್ರಾಜೆಕ್ಟ್‌ ಮುಖ್ಯಸ್ಥ ವು ಜಿಯಾನ್‌ಪಿಂಗ್, ‘ಈ ಯೋಜನೆಯ ಯಶಸ್ಸು ಇದಕ್ಕಿಂತ ಹೆಚ್ಚಿನ ವೇಗದ ಸೇವೆ ಒದಗಿಸುವುದಕ್ಕೆ ಅಡಿಪಾಯವಾಗಲಿದೆ’ ಎಂದು ಹೇಳಿದರು. ಹೊಸ ವೇಗದ ಇಂಟರ್ನೆಟ್‌ನಲ್ಲಿ ರವಾನಿಸಬಹುದಾದ ಮಾಹಿತಿಯನ್ನು ಸಾಮಾನ್ಯ ವೇಗದ ಜಾಲದಲ್ಲಿ ರವಾನಿಸಲು 10 ಟ್ರ್ಯಾಕ್‌ಗಳು ಬೇಕಾಗಿತ್ತು. ಹೀಗಾಗಿ ಆ ನಿಟ್ಟಿನಲ್ಲಿ ನೋಡುವುದಾದರೆ ಹೊಸ ಇಂಟರ್ನೆಟ್‌ ಅತ್ಯಂತ ಮಿತವ್ಯಯಕಾರಿ ಎಂದು ಹೇಳಿದ್ದಾರೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಬಾಂಗ್ಲಾದ ಸಂಭಾವ್ಯ ಪ್ರಧಾನಿ ರಹಮಾನ್‌ ತವರಿಗೆ ವಾಪಸ್‌
ಚೀನಾದಲ್ಲಿ 1 ಮಗು ನೀತಿಯ ಜನನಿ ಪೆಂಗ್‌ ಪೆಯುನ್‌ ನಿಧನ