ಇಸ್ರೇಲ್‌ ರಕ್ಷಣೆಗೆ ಅಮೆರಿಕದಿಂದ ‘ಥಾಡ್‌’, ಸೈನಿಕರ ನಿಯೋಜನೆ - ಇರಾನ್‌ ಮೇಲೆ ಶೀಘ್ರವೇ ಇಸ್ರೇಲ್ ಪ್ರತೀಕಾರ?

Published : Oct 15, 2024, 09:37 AM IST
iran military power

ಸಾರಾಂಶ

180ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಬಳಸಿ ತನ್ನ ಮೇಲೆ ಅ.1ರಂದು ಮುಗಿಬಿದ್ದ ಇರಾನ್‌ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಇಸ್ರೇಲ್‌ ಸಿದ್ಧತೆ ನಡೆಸಿದೆ

ನ್ಯೂಯಾರ್ಕ್: 180ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಬಳಸಿ ತನ್ನ ಮೇಲೆ ಅ.1ರಂದು ಮುಗಿಬಿದ್ದ ಇರಾನ್‌ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಇಸ್ರೇಲ್‌ ಸಿದ್ಧತೆ ನಡೆಸಿದೆ ಎನ್ನುತ್ತಿರುವಾಗಲೇ, ಇರಾನ್‌ ಪ್ರತಿದಾಳಿ ಎದುರಿಸುವ ಸಲುವಾಗಿ ಇಸ್ರೇಲ್‌ ರಕ್ಷಣೆಗೆ ಅಮೆರಿಕ ಧಾವಿಸಿದೆ. ಅತ್ಯಾಧುನಿಕ ಕ್ಷಿಪಣಿ ಹೊಡೆದುರುಳಿಸುವ ವ್ಯವಸ್ಥೆ ‘ಥಾಡ್‌’ (ಟರ್ಮಿನಲ್‌ ಹೈ ಆ್ಯಟಿಟ್ಯೂಡ್‌ ಏರಿಯಾ ಡಿಫೆನ್ಸ್‌) ವ್ಯವಸ್ಥೆಯನ್ನು ಇಸ್ರೇಲ್‌ನಲ್ಲಿ ನಿಯೋಜಿಸುವುದಾಗಿ, ಅದನ್ನು ಬಳಸಲು ಅಮೆರಿಕ ಸೈನಿಕರನ್ನು ಕಳುಹಿಸುವುದಾಗಿ ಅಧ್ಯಕ್ಷ ಜೋ ಬೈಡೆನ್‌ ಪ್ರಕಟಿಸಿದ್ದಾರೆ.

ಏನಿದು ಥಾಡ್‌?:  ಅಮೆರಿಕ ಹೊಂದಿರುವ ಅತ್ಯಾಧುನಿಕ, ಬಿಗಿ ಭದ್ರತೆಯ ವಾಯು ರಕ್ಷಣಾ ವ್ಯವಸ್ಥೆ. ಇದನ್ನು ಬಳಸಲು 100 ತುಕಡಿಗಳು ಬೇಕಾಗುತ್ತವೆ. ಆರು ಲಾರಿಗಳಲ್ಲಿ ಉಡ್ಡಯಕಗಳನ್ನು ಇಟ್ಟಿರಲಾಗಿರುತ್ತದೆ. ಪ್ರತಿ ಉಡ್ಡಯಕದಲ್ಲೂ 8 ಛೇದಕ ಕ್ಷಿಪಣಿಗಳು ಇರುತ್ತವೆ. ಶಕ್ತಿಶಾಲಿ ರಾಡಾರ್‌ ಅನ್ನೂ ಇದು ಹೊಂದಿರುತ್ತದೆ. ಅಮೆರಿಕದ ಲಾಕ್‌ಹೀಡ್‌ ಮಾರ್ಟಿನ್‌ ಕಂಪನಿ ಇದನ್ನು ಅಭಿವೃದ್ಧಿಪಡಿಸಿದೆ.

ಅಲ್ಪ, ಮಧ್ಯಮ ದೂರದ ಬ್ಯಾಲಿಸ್ಟಿಕ್‌ ಕ್ಷಿಪಣಿಗಳನ್ನು ಇದು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ. ಭೂ ವಾತಾವರಣದಿಂದ ಹೊರಗಿರುವ ಹಾಗೂ ಒಳಗಿರುವ ಎರಡೂ ಬಗೆಯ ಎದುರಾಳಿಗಳ ಕ್ಷಿಪಣಿಯನ್ನು ಹೊಡೆದುರುಳಿಸಬಲ್ಲದು. ಇಸ್ರೇಲ್‌ ಈಗಾಗಲೇ ವಾಯು ರಕ್ಷಣಾ ವ್ಯವಸ್ಥೆಯನ್ನು ಹೊಂದಿದ್ದು, ಥಾಡ್ ನಿಯೋಜನೆಯಿಂದ ಅದಕ್ಕೆ ಮತ್ತಷ್ಟು ಬಲ ಸಿಕ್ಕಂತಾಗುತ್ತದೆ.

ಈಗಾಗಲೇ ಇಸ್ರೇಲ್‌ ಬಳಿ ಕ್ಷಿಪಣಿ, ರಾಕೆಟ್‌ ದಾಳಿ ತಡೆಯುವ ಐರನ್‌ ಡೋಂ ವ್ಯವಸ್ಥೆ ಇದೆಯಾದರೂ, ಇತ್ತೀಚೆಗೆ ಇರಾನ್‌, ಲೆಬನಾನ್‌, ಹೌತಿ ಉಗ್ರರು, ಇರಾಕ್‌ನಲ್ಲಿರುವ ಹಮಾಸ್‌ ಬೆಂಬಲಿಗರು ಏಕಕಾಲಕ್ಕೆ ದಾಳಿ ನಡೆಸಿದ ವೇಳೆ ಒಂದಿಷ್ಟು ಕ್ಷಿಪಣಿ, ರಾಕೆಟ್‌ಗಳು ಐರನ್‌ ಡೋಂ ವ್ಯವಸ್ಥೆ ದಾಟುವಲ್ಲಿ ಯಶಸ್ವಿಯಾಗಿದ್ದ ಕಾರಣ ಅಮೆರಿಕ ಹೆಚ್ಚುವರಿಯಾಗಿ ಥಾಡ್‌ ವ್ಯವಸ್ಥೆ ಕಳುಹಿಸಿಕೊಡುತ್ತಿದೆ.

PREV

Recommended Stories

ಪಿಒಕೆನಲ್ಲಿ ಪಹಲ್ಗಾಂ ಉಗ್ರನ ಸಾಂಕೇತಿಕ ಅಂತ್ಯಕ್ರಿಯೆ!
ಶ್ವೇತಭವನ ವಕ್ತಾರೆಯ ತುಟಿ, ಸೌಂದರ್ಯ ಹೊಗಳಿದ ಟ್ರಂಪ್!