ಅಮೆರಿಕ- ಇರಾನ್‌ ಕದನ ಅಂತ್ಯ - ವಿಶ್ವಕ್ಕೆ ತೈಲಘಾತ ನೀಡಿದ್ದ ಮಧ್ಯಪ್ರಾಚ್ಯ ಯುದ್ಧಕ್ಕೆ ಬಿತ್ತು ತೆರೆ

Published : Jun 16, 2026, 08:21 AM IST
America Iran

ಸಾರಾಂಶ

ಕಳೆದ 107 ದಿನಗಳಿಂದ ಮಧ್ಯಪ್ರಾಚ್ಯ ಸೇರಿದಂತೆ ಇಡೀ ಜಗತ್ತಿನಲ್ಲಿ ತೈಲ ಅಭಾವ, ಬೆಲೆ ಏರಿಕೆ ಸೇರಿದಂತೆ ನಾನಾ ರೀತಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದ ಅಮೆರಿಕ-ಇರಾನ್‌ ನಡುವಿನ ಭೀಕರ ಸಮರ ಕೊನೆಗೂ ಭಾರತೀಯ ಕಾಲಮಾನ ಸೋಮವಾರ ಬೆಳಗ್ಗೆ ಅಂತ್ಯ ಕಂಡಿದೆ.

  ವಾಷಿಂಗ್ಟನ್‌/ಟೆಹ್ರಾನ್‌ ":  ಕಳೆದ 107 ದಿನಗಳಿಂದ ಮಧ್ಯಪ್ರಾಚ್ಯ ಸೇರಿದಂತೆ ಇಡೀ ಜಗತ್ತಿನಲ್ಲಿ ತೈಲ ಅಭಾವ, ಬೆಲೆ ಏರಿಕೆ ಸೇರಿದಂತೆ ನಾನಾ ರೀತಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದ ಅಮೆರಿಕ-ಇರಾನ್‌ ನಡುವಿನ ಭೀಕರ ಸಮರ ಕೊನೆಗೂ ಭಾರತೀಯ ಕಾಲಮಾನ ಸೋಮವಾರ ಬೆಳಗ್ಗೆ ಅಂತ್ಯ ಕಂಡಿದೆ. ಕದನವನ್ನು ಕೊನೆಗೊಳಿಸಿದ್ದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ್ದಾರೆ. ಇದನ್ನು ಇರಾನ್ ಕೂಡ ಖಚಿತಪಡಿಸಿದೆ.

ಉಭಯ ದೇಶಗಳ ನಾಯಕರಾದ ಟ್ರಂಪ್‌, ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ ಹಾಗೂ ಇರಾನ್‌ ಸ್ಪೀಕರ್‌ ಮೊಹಮ್ಮದ್‌ ಘಾಲಿಬಾಫ್‌ ವರ್ಚುವಲ್‌ ವಿಧಾನದಲ್ಲಿ ಮೊದಲು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇನ್ನು ಅಧಿಕೃತವಾಗಿ ಒಪ್ಪಂದಕ್ಕೆ ಜೂ.19ರಂದು ಸ್ವಿಜರ್ಲೆಂಡ್‌ನ ಜಿನೇವಾದಲ್ಲಿ ಸಹಿ ಬೀಳಲಿದೆ. ಆ ಬಳಿಕ ಹೋರ್ಮುಜ್‌ ಜಲಸಂಧಿ ಪುನಃ ಸಂಚಾರಕ್ಕೆ ಮುಕ್ತವಾಗಲಿದೆ.

ಯುದ್ಧ ಸ್ಥಗಿತದ ಬಗ್ಗೆ ಸೋಮವಾರ ಬೆಳಗ್ಗೆ ಟ್ರುತ್‌ ಸೋಶಿಯಲ್‌ನಲ್ಲಿ ಘೋಷಣೆ ಮಾಡಿದ ಟ್ರಂಪ್‌, ‘ಇರಾನ್ ಇಸ್ಲಾಮಿಕ್ ಗಣರಾಜ್ಯದೊಂದಿಗಿನ ಒಪ್ಪಂದವು ಈಗ ಪೂರ್ಣಗೊಂಡಿದೆ. ಎಲ್ಲರಿಗೂ ಅಭಿನಂದನೆಗಳು. ನಾನು ಹೋರ್ಮುಜ್ ಜಲಸಂಧಿಯನ್ನು ಶುಲ್ಕಮುಕ್ತವಾಗಿ ತೆರೆಯಲು ಸಂಪೂರ್ಣವಾಗಿ ಅಧಿಕಾರ ನೀಡುತ್ತಿದ್ದೇನೆ. ಇದೇ ಸಮಯದಲ್ಲಿ, ಅಮೆರಿಕ ಹೇರಿದ್ದ ನೌಕಾ ದಿಗ್ಬಂಧನವನ್ನು ತಕ್ಷಣ ತೆಗೆದುಹಾಕಲು ಅಧಿಕಾರ ನೀಡುತ್ತೇನೆ. ವಿಶ್ವದ ಹಡಗುಗಳೇ, ನಿಮ್ಮ ಎಂಜಿನ್‌ಗಳನ್ನು ಪ್ರಾರಂಭಿಸಿ, ತೈಲ ಹರಿಯಲು ಬಿಡಿ!’ ಎಂದು ಬರೆದುಕೊಂಡಿದ್ದಾರೆ.

ನಂತರದ ಪೋಸ್ಟ್‌ನಲ್ಲಿ, ಜೂ.19ರಂದು ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಬಿದ್ದ ನಂತರ ಹೋರ್ಮುಜ್ ಜಲಸಂಧಿ ಪುನಃ ತೆರೆಯುತ್ತದೆ ಎಂದು ಟ್ರಂಪ್‌ ಮಾಹಿತಿ ನೀಡಿದ್ದಾರೆ. ಈ ನಡುವೆ, ಮಧ್ಯಸ್ಥಿಕೆ ವಹಿಸಿದ್ದ ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌, ‘19ರಂದು ಜಿನೇವಾದಲ್ಲಿ ಪಾಕ್‌ ಆತಿಥ್ಯದಲ್ಲಿ ಒಪ್ಪಂದಕ್ಕೆ ಸಹಿ ಬೀಳಲಿದೆ’ಎಂದಿದ್ದಾರೆ.

ಯಾರೂ ಮಾಡದ್ದನ್ನು ನಾನು ಮಾಡಿದೆ- ಟ್ರಂಪ್ ಸ್ವಪ್ರಶಂಸೆ:

ಸರಿಸುಮಾರು 3.5 ತಿಂಗಳ ಸಮರಕ್ಕೆ ಅಂತ್ಯ ಹಾಡಿದ ಬೆನ್ನಲ್ಲೇ, ತಮ್ಮನ್ನು ತಾವೇ ಹಾಡಿ ಹೊಗಳಿಕೊಂಡಿರುವ ಟ್ರಂಪ್‌, ‘ಈ ಮಹಾನ್ ಒಪ್ಪಂದವು ಇಡೀ ಪ್ರದೇಶಕ್ಕೆ ಶಾಂತಿ ಮತ್ತು ಭದ್ರತೆಯನ್ನು ತರುತ್ತದೆ. ಅನೇಕ ಅಧ್ಯಕ್ಷರು ಇರಾನ್‌ನೊಂದಿಗೆ ಶಾಂತಿ ಸ್ಥಾಪಿಸಲು ಪ್ರಯತ್ನಿಸಿದರು. ಆದರೆ ಎಲ್ಲರೂ ನನ್ನ ಮುಂದೆ ವಿಫಲರಾಗಿದ್ದಾರೆ. ಈ ಪ್ರದೇಶದ (ಮಧ್ಯಪ್ರಾಚ್ಯ) ನಾಯಕರು ಮೊದಲ ಬಾರಿಗೆ ನಿಜವಾದ ಶಾಂತಿಯನ್ನು ಸಾಧಿಸಲು ನೆರವಾಗುವ ಅಧ್ಯಕ್ಷರನ್ನು ಕಂಡುಕೊಂಡಿದ್ದಾರೆ. ಶುಕ್ರವಾರ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಜಲಸಂಧಿ ಪುನಃ ತೆರೆಯಲಿದೆ. ಜಲಸ್ಫೋಟಕಗಳನ್ನು ತೆಗೆಯುವ ಉದ್ದೇಶಕ್ಕಾಗಿ, ಈ ಪ್ರದೇಶ ಮತ್ತು ಪ್ರಪಂಚಕ್ಕೆ ಎರಡೂ ತುದಿಗಳಿಂದ ತೈಲ ಮತ್ತೆ ಹರಿಯಲಿದೆ’ ಎಂದಿದ್ದಾರೆ.

ಇರಾನ್‌ನಿಂದಲೂ ಒಪ್ಪಂದ ದೃಢ:

ಇರಾನ್‌ನ ಉಪ ವಿದೇಶಾಂಗ ಸಚಿವ ಕಜೆಮ್ ಘರಿಬಬಾದಿ ಸರ್ಕಾರಿ ಟೀವಿ ವಾಹಿನಿಯ ಮೂಲಕ ಅಮೆರಿಕ ಜತೆಗಿನ ಒಪ್ಪಂದವನ್ನು ದೃಢಪಡಿಸಿದ್ದಾರೆ. ಆದರೆ ಶುಕ್ರವಾರ ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಹಾಕುವವರೆಗೂ ಇರಾನ್ ಇದನ್ನು ಜಾರಿಗೆ ತರುವುದಿಲ್ಲ. ಏಕೆಂದರೆ ಅಮೆರಿಕವನ್ನು ನಂಬುವ ಹಾಗಿಲ್ಲ. ಒಪ್ಪಂದದಲ್ಲಿ ಲೆಬನಾನ್‌ ಕೂಡ ಸೇರಬೇಕು ಎಂದು ತಿಳಿಸಿದ್ದಾರೆ.

ಪಾಕಿಸ್ತಾನದ ಮಧ್ಯಸ್ಥಿಕೆ:

ಅಮೆರಿಕ-ಇರಾನ್‌ ನಡುವೆ ಶಾಂತಿ ಸ್ಥಾಪನೆ ಮಾಡಿಸಲು ಪಾಕಿಸ್ತಾನ ಮತ್ತು ಕತಾರ್‌ ಪ್ರಮುಖ ಮಧ್ಯವರ್ತಿ ಪಾತ್ರ ವಹಿಸಿದ್ದವು. ಪಾಕಿಸ್ತಾನ 2 ಸಲ ಎರಡೂ ದೇಶಗಳ ನಾಯಕರ ನಿಯೋಗವನ್ನು ತನ್ನ ದೇಶಕ್ಕೆ ಕರೆಸಿ ಮುಖಾಮುಖಿ ಮಾತುಕತೆಗೆ ವೇದಿಕೆ ಸಿದ್ಧಪಡಿಸಿತ್ತು. ಆದರೆ ಉಭಯ ದೇಶಗಳು ಒಮ್ಮತದ ನಿರ್ಣಯಕ್ಕೆ ಬರಲು ವಿಫಲರಾಗಿದ್ದರಿಂದ, ಉದ್ವಿಗ್ನತೆ ಮುಂದುವರಿದಿತ್ತು. ಆದರೆ ಈ ಬಾರಿ ಅದರ ಪ್ರಯತ್ನ ಯಶಸ್ವಿಯಾಗಿದೆ.

ಒಪ್ಪಂದ ಅಂತಿಮವಾದ ಬೆನ್ನಲ್ಲೇ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌, ‘ದೀರ್ಘ ಮಾತುಕತೆಗಳ ನಂತರ, ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಒಪ್ಪಂದ ಏರ್ಪಟ್ಟಿದೆ ಎಂದು ಘೋಷಿಸಲು ಸಂತೋಷವಾಗುತ್ತಿದೆ. ಎರಡೂ ಕಡೆಯವರು ಲೆಬನಾನ್ ಸೇರಿದಂತೆ ಎಲ್ಲಾ ಪ್ರದೇಶಗಳಲ್ಲಿನ ಮಿಲಿಟರಿ ಕಾರ್ಯಾಚರಣೆಗಳ ತಕ್ಷಣದ ಮತ್ತು ಶಾಶ್ವತವಾದ ಅಂತ್ಯಕ್ಕೆ ಒಪ್ಪಿಕೊಂಡಿದ್ದಾರೆ’ ಎಂದು ತಿಳಿಸಿದ್ದಾರೆ.

ಇದೇ ವೇಳೆ, ಶಾಂತಿ ಸಂಧಾನಕ್ಕೆ ಕೈಜೋಡಿಸಿದ ಇತರ ದೇಶಗಳಿಗೂ ಧನ್ಯವಾದ ತಿಳಿಸಿದ ಅವರು, ‘ಈ ಮಧ್ಯಸ್ಥಿಕೆ ಪ್ರಯತ್ನದಲ್ಲಿ ನೆರವು ನೀಡಿದ ಕತಾರ್, ಸೌದಿ ಅರೇಬಿಯಾ ಹಾಗೂ ಟರ್ಕಿ ಸಹೋದರರ ಅಪಾರ ಕೊಡುಗೆಗೆ ಧನ್ಯವಾದ ಸಮರ್ಪಿಸುತ್ತೇನೆ’ ಎಂದಿದ್ದಾರೆ.

ವಿಶ್ವವನ್ನೇ ತಲ್ಲಣಗೊಳಿಸಿದ್ದ 107 ದಿನಗಳ ಕದನ:

ಇರಾನ್‌ ಅಣ್ವಸ್ತ್ರ ಸಿದ್ಧಪಡಿಸುತ್ತಿದೆ ಎಂದು ಆರೋಪಿಸುತ್ತಾ ಬಂದಿದ್ದ ಅಮೆರಿಕ, ಫೆ.18ರಂದು ತನ್ನ ಮಿತ್ರ ಇಸ್ರೇಲ್‌ನ ಜತೆಗೂಡಿ ಇರಾನ್‌ ಮೇಲೆ ಭೀಕರ ವಾಯುದಾಳಿ ನಡೆಸಿತ್ತು. ಆ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಆಯತೋಲ್ಲ ಅಲಿ ಖಮೇನಿ, ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿ ಅಲಿ ಲಾರಿಜಾನಿ, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕೋರ್‌ನ (ಐಆರ್‌ಜಿಸಿ) ಕಮಾಂಡರ್ ಮೊಹಮ್ಮದ್ ಪಕ್ಪೋರ್, ರಕ್ಷಣಾ ಸಚಿವ ಅಜೀಜ್ ನಾಸಿರ್ಜಾದೆ ಸೇರಿದಂತೆ ಇತರ ಉನ್ನತ ನಾಯಕರು ಸಾವನ್ನಪ್ಪಿದ್ದರು. ಆ ಬಳಿಕ ಇರಾನ್‌ ಅಮೆರಿಕದ ಕೊಲ್ಲಿ ಮಿತ್ರರಾಷ್ಟ್ರಗಳಾದ ಯುಎಇ, ಕತಾರ್‌, ಬೆಹ್ರೈನ್‌ ಮೊದಲಾದವುಗಳ ಮೇಲೆ ಪ್ರತಿದಾಳಿ ಆರಂಭಿಸಿತ್ತು. ಹೀಗೆ ಆರಂಭವಾದ ಯುದ್ಧ 107 ದಿನಗಳ ಬಳಿಕ ಕೊನೆಗೂ ಅಂತ್ಯ ಕಂಡಿದೆ.

ಶಾಂತಿ, ಸ್ಥಿರತೆಗೆ ನಾಂದಿ

ಅಮೆರಿಕ ಮತ್ತು ಇರಾನ್ ಒಪ್ಪಂದ ಸ್ವಾಗತಾರ್ಹ. ಕದನವು ಪ್ರಪಂಚದಾದ್ಯಂತ ಗಂಭೀರ ಆರ್ಥಿಕ ಅಡ್ಡಿ ಉಂಟುಮಾಡಿದೆ ಮತ್ತು ಅನೇಕ ದೇಶಗಳಲ್ಲಿ ಜೀವಹಾನಿಗೆ ಕಾರಣವಾಗಿದೆ. ಈ ಒಪ್ಪಂದದವು ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಪುನಃಸ್ಥಾಪಿಸಲು ಮತ್ತು ವಾಣಿಜ್ಯದ ಸ್ವಾತಂತ್ರ್ಯ ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಭಾರತ ಆಶಿಸುತ್ತದೆ.

- ನರೇಂದ್ರ ಮೋದಿ, ಪ್ರಧಾನಿ

ಡೀಲ್‌ನ ಪ್ರಮುಖ ಅಂಶ

- ಹೋರ್ಮುಜ್ ಜಲಸಂಧಿ ವಾಣಿಜ್ಯ ಸಂಚಾರಕ್ಕೆ ಮುಕ್ತ

- ಇರಾನ್‌ ಬಂದರು ಮೇಲಿನ ಅಮೆರಿಕ ನಿರ್ಬಂಧ ತೆರವು

- ನಿರ್ಬಂಧಕ್ಕೆ ಒಳಗಾದ ಇರಾನ್ ತೈಲ ರಫ್ತಿಗೆ ವಿನಾಯಿತಿ

- ಜಪ್ತಾಗಿರುವ ಇರಾನ್‌ನ 2.3 ಲಕ್ಷ ಕೋಟಿ ಹಣ ಬಿಡುಗಡೆ

- ಪರಮಾಣು ಶಸ್ತ್ರಾಸ್ತ್ರ ಬಳಸಲ್ಲ ಎಂದು ಇರಾನ್‌ ಭರವಸೆ

- ಮತ್ತಷ್ಟು ಯುರೇನಿಯಂ ಸಂಸ್ಕರಣೆಗೆ ಇರಾನ್‌ ಬ್ರೇಕ್‌

- ಇರಾನ್‌ ಮರುನಿರ್ಮಾಣಕ್ಕೆ ₹30 ಲಕ್ಷ ಕೋಟಿ ಪ್ಯಾಕೇಜ್‌

- ಇತ್ಯರ್ಥವಾಗದ ವಿಷಯಗಳ ಬಗ್ಗೆ 60 ದಿನಗಳ ಮಾತುಕತೆ

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಒಮಾನ್‌ ಬಳಿ ಭಾರತೀಯ ಹಡಗಿನ ಎಂಜಿನ್‌ ವಿಫಲ: ಎಲ್ಲ 14 ಸಿಬ್ಬಂದಿ ರಕ್ಷಣೆ
ಶಾಂತಿ ಒಪ್ಪಂದ ಸಾಧ್ಯತೆ ನಡುವೆ ಸಂಧಾನ ಯತ್ನ ಚುರುಕು