;Resize=(412,232))
ವಾಷಿಂಗ್ಟನ್: ಕಳೆದೊಂದು ತಿಂಗಳಿನಿಂದ ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸಿರುವ ಮಧ್ಯಪ್ರಾಚ್ಯ ಯುದ್ಧದ ಕೇಂದ್ರ ಸ್ಥಾನವಾಗಿರುವ ಇರಾನ್‌ನಿಂದ ನಾವು ಬಹುಬೇಗ ಹೊರಬರಲಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಯುದ್ಧದ ಪರಿಣಾಮಗಳ ಕುರಿತು ಜಾಗತಿಕ ಮಟ್ಟದಲ್ಲಿ ಭಾರೀ ಆಕ್ರೋಶ ಮತ್ತು ಯುದ್ಧದ ಕುರಿತು ಸ್ವತಃ ಅಮೆರಿಕನ್ನರಿಂದಲೇ ವಿರೋಧ ವ್ಯಕ್ತವಾಗಿರುವ ಹೊತ್ತಿನಲ್ಲೇ ಟ್ರಂಪ್ ಈ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ‘ನಾವು ಬಹುಬೇಗ ಇರಾನ್‌ನಿಂದ ಹೊರ ನಡೆಯಲಿದ್ದೇವೆ ಹಾಗೂ ಅಗತ್ಯ ಬಿದ್ದರೆ ಮತ್ತೆ ನುಗ್ಗಿ ನಿರ್ದಿಷ್ಟ ದಾಳಿ (ಸ್ಪಾಟ್ ಹಿಟ್) ನಡೆಸುತ್ತೇವೆ’ ಎಂದು ಹೇಳಿದ್ದಾರೆ. ಇದೇ ವೇಳೆ ಯುದ್ಧ ಮುಗಿಯಿತು ಎಂದು ಅಮೆರಿಕ ಯಾವಾಗ ಪರಿಗಣಿಸುತ್ತದೆ ಎಂಬ ಸುದ್ದಿಗಾರರ ಪ್ರಶ್ನೆಗೆ, ಅದನ್ನು ನಾನು ಖಚಿತವಾಗಿ ಹೇಳಲಾರೆ. ಆದರೆ ನಾವು ನಾವು ಬಹುಬೇಗ ಯುದ್ಧದಿಂದ ಹೊರನಡೆಯಲಿದ್ದೇವೆ ಎಂದಷ್ಟೇ ಪ್ರತಿಕ್ರಿಯಿಸಿದ್ದಾರೆ.
ಇದಕ್ಕೂ ಮೊದಲು ಶ್ವೇತಭವನದ ಬಳಿ ಇದೇ ವಿಷಯವಾಗಿ ಪ್ರತಿಕ್ರಿಯಿಸಿದ್ದ ಟ್ರಂಪ್, ‘ನಮ್ಮ ಗುರಿ ಸಾಧನೆಯಾದ ಕೂಡಲೇ ನಾವು ಇರಾನ್ ಯುದ್ಧದಿಂದ ನಿರ್ಗಮಿಸಲಿದ್ದೇವೆ. ಇರಾನ್ ಮೇಲಿನ ದಾಳಿ ನಿಲ್ಲಿಸಲು ನಮಗೆ ರಾಜತಾಂತ್ರಿಕ ಒಪ್ಪಂದದ ಅಗತ್ಯವಿಲ್ಲ. ಇರಾನ್ ಅಣ್ವಸ್ತ್ರ ಹೊಂದುವ ಸಾಮರ್ಥ್ಯ ಕಳೆದುಕೊಂಡಿರುವುದು ಖಚಿತವಾದ ಬಳಿಕ ಹಾಗೂ ಅವರನ್ನು ಶಿಲಾಯುಗಕ್ಕೆ ಕೊಂಡೊಯ್ದ ಬಳಿಕ ಮಾತುಕತೆ ಇಲ್ಲದೆಯೂ ನಾವು ಇರಾನ್ ಯುದ್ಧದಿಂದ ಹಿಂದೆ ಸರಿಯಲಿದ್ದೇವೆ’ ಎಂದು ಹೇಳಿದ್ದರು.
ಇನ್ನು ಹೋರ್ಮುಜ್ ಜಲಸಂಧಿ ಕುರಿತು ಪ್ರತಿಕ್ರಿಯಿಸಿದ ಅವರು, ಆ ಜಲಮಾರ್ಗದ ಸುರಕ್ಷತೆಯ ಜವಾಬ್ದಾರಿಯನ್ನು ಅಮೆರಿಕ ವಹಿಸಿಕೊಳ್ಳುವುದಿಲ್ಲ. ಆ ಜವಾಬ್ದಾರಿ ಜಲಸಂಧಿಯನ್ನು ಬಳಸುತ್ತಿರುವ ಫ್ರಾನ್ಸ್‌ನಂಥ ದೇಶಗಳಿಗೇ ಹೊರತು ನಮ್ಮದಲ್ಲ. ನಾವು ಆ ಜಲಸಂಧಿಯ ರಕ್ಷಣೆ ಮಾಡಲು ಯಾವ ಸಕಾರಣವೂ ಇಲ್ಲ ಎಂದು ಅವರು ತಿಳಿಸಿದ್ದಾರೆ.
ಈ ನಡುವೆ ‘ಇರಾನ್‌ನ ಹೊಸ ಆಡಳಿತದ ಅಧ್ಯಕ್ಷರು ಕದನವಿರಾಮಕ್ಕಾಗಿ ಆಗ್ರಹಿಸುತ್ತಿದ್ದಾರೆ’ ಎಂದು ಟ್ರಂಪ್ ಹೇಳಿದ್ದಾರೆ. ಆದರೆ ಟ್ರಂಪ್ ಹೇಳಿಕೆಯನ್ನು ಇರಾನ್‌ನ ವಿದೇಶಾಂಗ ಸಚಿವಾಲಯ ಸ್ಪಷ್ಟವಾಗಿ ಅಲ್ಲಗಳೆದಿದೆ.
ಲಂಡನ್: ಕೊಲ್ಲಿ ಯುದ್ಧದಲ್ಲಿ ತಮ್ಮ ಕೈಜೋಡಿಸದ ನ್ಯಾಟೋ ದೇಶಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅದರಿಂದ ಹೊರಬರುವ ಕುರಿತು ಪರಿಶೀಲನೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ನ್ಯಾಟೋ ಒಂದು ಕಾಗದದ ಹುಲಿ ಎಂಬುದು ನನಗೆ ಮೊದಲಿನಿಂದಲೂ ಗೊತ್ತಿತ್ತು. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ಗೂ ಈ ವಿಚಾರ ಗೊತ್ತಿತ್ತು. ನನಗೆ ನ್ಯಾಟೋ ವಿಶ್ವಾಸಾರ್ಹತೆ ಕುರಿತು ಹಿಂದಿನಿಂದಲೂ ಅನುಮಾನ ಇತ್ತು’ ಎಂದು ಹೇಳಿದ್ದಾರೆ. ನ್ಯಾಟೋದ ಶೇ.62ರಷ್ಟು ವೆಚ್ಚವನ್ನು ಅಮೆರಿಕವೇ ಭರಿಸುತ್ತದೆ ಎಂಬುದು ಗಮನಾರ್ಹ.
ಇಂದು ಟ್ರಂಪ್‌ಭಾಷಣ: ಕದನ ವಿರಾಮ ಪ್ರಕಟ?
ವಾಷಿಂಗ್ಟನ್: ಕೊಲ್ಲಿ ಯುದ್ಧಕ್ಕೆ ತೆರೆ ಎಳೆಯಲು ಅಮೆರಿಕ ಸಿದ್ಧತೆ ನಡೆಸುತ್ತಿದೆ ಎಂಬ ವರದಿಗಳ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಭಾರತೀಯ ಕಾಲಮಾನ ಗುರುವಾರ ಬೆಳಗ್ಗೆ 6.30ಕ್ಕೆ ಈ ಕಾರ್ಯಕ್ರಮ ನಿಗದಿಯಾಗಿದೆ. ಟ್ರಂಪ್ ತಮ್ಮ ಭಾಷಣದಲ್ಲಿ ಕದನ ವಿರಾಮದ ಕುರಿತು ಘೋಷಣೆ ಮಾಡುತ್ತಾರೋ ಅಥವಾ ಇರಾನ್ ಮೇಲಿನ ದಾಳಿ ತೀವ್ರತೆಯ ಬಗ್ಗೆ ಮಾಹಿತಿ ನೀಡುತ್ತಾರೋ ಎಂಬ ಭಾರೀ ಕುತೂಹಲ ಮೂಡಿದೆ.
ಹೋರ್ಮುಜ್ ಓಪನ್ ಮಾಡಿಸಲು 35 ದೇಶ ಜತೆ ಬ್ರಿಟನ್ ಸಮ್ಮೇಳನ
ಲಂಡನ್: ಹೋರ್ಮುಜ್ ಜಲಸಂಧಿ ನಿರ್ಬಂಧದಿಂದ ವಿಶ್ವಾದ್ಯಂತ ತೈಲ ಮತ್ತು ಅನಿಲ ಪೂರೈಕೆಯಲ್ಲಿ ಭಾರೀ ವ್ಯತ್ಯಯವಾಗಿರುವ ನಡುವೆಯೇ, ಹೋರ್ಮುಜ್ ಅನ್ನು ಮತ್ತೆ ತೆರೆಯುವ ಮಾರ್ಗಗಳ ಕುರಿತು ಚರ್ಚಿಸಲು ಈ ವಾರ 35 ದೇಶಗಳ ಜತೆಗೂಡಿ ಬ್ರಿಟನ್ ಅಂತಾರಾಷ್ಟ್ರೀಯ ರಾಜತಾಂತ್ರಿಕ ಸಮ್ಮೇಳನವನ್ನು ಆಯೋಜಿಸಲಿದೆ ಎಂದು ಅಲ್ಲಿನ ಪ್ರಧಾನಿ ಕೀರ್ ಸ್ಟಾರ್ಮರ್ ಬುಧವಾರ ಹೇಳಿದ್ದಾರೆ.