ಬಲೂಚಿಸ್ತಾನ ಬಂಡುಕೋರರಿಂದ ಪಾಕ್‌ ಸೇನಾ ವಾಹನ ಗುರಿಯಾಗಿಸಿ ಆತ್ಮಾಹುತಿ ದಾಳಿ : 90 ಯೋಧರ ಸಾವು

KannadaprabhaNewsNetwork |  
Published : Mar 17, 2025, 01:32 AM ISTUpdated : Mar 17, 2025, 04:11 AM IST
ಬಸ್‌ ಸ್ಫೋಟ | Kannada Prabha

ಸಾರಾಂಶ

 ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಸೇನೆ ವಾಹನ ಗುರಿಯಾಗಿಸಿ ಪಾಕಿಸ್ತಾನಿ ಉಗ್ರರು 40 ಯೋಧರನ್ನು ಕೊಂದು ಹಾಕಿದ್ದರು. ಈಗ   ಪುಲ್ವಾಮಾ ದಾಳಿ ಮಾದರಿಯಲ್ಲೇ ಬಲೂಚಿಸ್ತಾನ ಬಂಡುಕೋರರು, ಪಾಕ್‌ ಸೇನಾ ವಾಹನ ಗುರಿಯಾಗಿಸಿ ಆತ್ಮಾಹುತಿ ದಾಳಿ ನಡೆಸಿದ್ದು, 90 ಪಾಕ್‌ ಯೋಧರು ಸಾವನ್ನಪ್ಪಿದ್ದಾರೆ.

 ಕರಾಚಿ: 2019ರ ಫೆ.14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಸೇನೆ ವಾಹನ ಗುರಿಯಾಗಿಸಿ ಪಾಕಿಸ್ತಾನಿ ಉಗ್ರರು 40 ಯೋಧರನ್ನು ಕೊಂದು ಹಾಕಿದ್ದರು. ಈಗ ತನ್ನದೇ ಕೃತ್ಯದ ರೀತಿಯ ರುಚಿಯನ್ನು ಪಾಕ್‌ ಉಂಡಿದೆ. ಪುಲ್ವಾಮಾ ದಾಳಿ ಮಾದರಿಯಲ್ಲೇ ಬಲೂಚಿಸ್ತಾನ ಬಂಡುಕೋರರು, ಪಾಕ್‌ ಸೇನಾ ವಾಹನ ಗುರಿಯಾಗಿಸಿ ಆತ್ಮಾಹುತಿ ದಾಳಿ ನಡೆಸಿದ್ದು, 90 ಪಾಕ್‌ ಯೋಧರು ಸಾವನ್ನಪ್ಪಿದ್ದಾರೆ.

ಆದರೆ ಪಾಕ್‌ ಸರ್ಕಾರ ಮಾತ್ರ ಸಾವಿನ ಸಂಖ್ಯೆ ಮುಚ್ಚಿಡಲು ಯತ್ನಿಸಿದ್ದು, ಈ ದಾಳಿಯಲ್ಲಿ 5 ಜನರು ಮಾತ್ರ ಸಾವನ್ನಪ್ಪಿದ್ದಾರೆ ಎಂದು ಹೇಳಿಕೊಂಡಿದೆ.

500ಕ್ಕೂ ಹೆಚ್ಚು ಜನರಿದ್ದ ರೈಲನ್ನು ಬಲೂಚಿ ಬಂಡುಕೋರರು ಅಪಹರಣದ ಭೀಕರ ಘಟನೆ ಬೆನ್ನಲ್ಲೇ, ಈ ಘಟನೆ ನಡೆದಿದೆ. ಜೊತೆಗೆ ಶನಿವಾರ ರಾತ್ರಿಯಿಂದೀಚೆಗೆ ಬಲೂಚ್‌ ಪ್ರಾಂತ್ಯದಲ್ಲಿ ಸೇನೆಯನ್ನು ಗುರಿಯಾಗಿಸಿ ಕೇವಲ 12 ಗಂಟೆಗಳ ಅವಧಿಯಲ್ಲಿ 19 ದಾಳಿ ನಡೆಸಲಾಗಿದೆ ಎಂದು ವರದಿಗಳು ಹೇಳಿವೆ.

ಏನಾಯ್ತು?:

ಬಲೂಚಿಸ್ತಾನದ ನೋಶ್ಕಿ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯೊಂದರಲ್ಲಿ ‘ಪ್ಯಾರಾಮಿಲಿಟರಿ ಫ್ರಂಟಿಯರ್ ಕಾರ್ಪ್‌’ ಗುರಿಯಾಗಿಸಿ ಬಲೂಚ್‌ ಲಿಬರೇಷನ್‌ ಆರ್ಮಿಯ (ಬಿಎಲ್‌ಎ) ಬಂಡುಕೋರರು, ಸ್ಫೋಟಕ ತುಂಬಿದ ವಾಹನವನ್ನು ಸೇನಾ ಬಸ್‌ಗೆ ಅಪ್ಪಳಿಸಿ ಆತ್ಮಾಹುತಿ ದಾಳಿ ನಡೆಸಿದ್ದಾರೆ.

‘ಇದೊಂದು ಆತ್ಮಾಹುತಿ ದಾಳಿ. ದಾಳಿಯಲ್ಲಿ ಕನಿಷ್ಠ ಮೂವರು ಯೋಧರು, ಇಬ್ಬರು ನಾಗರಿಕರು ಸೇರಿ 5 ಜನರು ಸಾವನ್ನಪ್ಪಿದ್ದಾರೆ. ಆದರೆ ಸಾವಿನ ಸಂಖ್ಯೆ ಏರಬಹುದು’ ಎಂದು ನೋಶ್ಕಿ ಪೊಲೀಸ್‌ ಠಾಣೆಯ ಮುಖ್ಯಸ್ಥ ಝಫ್ರುಲ್ಲಾ ಸುಮ್ಲಾನಿ ಹೇಳಿದ್ದಾರೆ.

90 ಸಾವು:

ಆದರೆ ಘಟನೆಯಲ್ಲಿ 90ಕ್ಕೂ ಹೆಚ್ಚು ಯೋಧರು ಸಾವನ್ನಪ್ಪಿದ್ದಾರೆ ಎಂದು ಬಲೂಚಿ ಲಿಬರೇಷನ್‌ ಆರ್ಮಿ ಹೇಳಿಕೆ ನೀಡಿದೆ. ಹೆದ್ದಾರಿಯಲ್ಲಿ ಸಾಗುತ್ತಿದ್ದ 6 ಬಸ್‌ ಮತ್ತು ಇನ್ನು ಎರಡು ಸೇನಾ ವಾಹನ ಬಸ್‌ಗಳನ್ನು ಗುರಿಯಾಗಿಸಿ ನಮ್ಮ ಹೋರಾಟಗಾರರು ಆತ್ಮಾಹುತಿ ದಾಳಿ ನಡೆಸಿದ್ದಾರೆ. ದಾಳಿಗೆ ಒಂದು ಬಸ್‌ ಸಂಪೂರ್ಣ ಛಿದ್ರವಾಗಿದ್ದರೆ, ಉಳಿದ ಬಸ್‌ಗಳಿಗೆ ಹಾನಿಯಾಗಿದೆ ಎಂದು ತಿಳಿಸಿದೆ.

ಪುಲ್ವಾಮಾದಲ್ಲಿ ಏನಾಗಿತ್ತು?:

2019ರ ಫೆ.14ರಂದು ಪಾಕಿಸ್ತಾನ ಬೆಂಬಲಿತ ಉಗ್ರರು, ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸೇನಾ ವಾಹನವನ್ನು ಗುರಿಯಾಗಿಸಿ ಭೀಕರ ಆತ್ಮಾಹುತಿ ದಾಳಿ ನಡೆಸಿದ್ದರು. ಅದರಲ್ಲಿ 40 ಯೋಧರು ಸಾವನ್ನಪ್ಪಿದ್ದರು.

- 2019ರ ಫೆ.14ರಂದು ಪಾಕ್‌ ಉಗ್ರರಿಂದ ಕಾಶ್ಮೀರದ ಪುಲ್ವಾಮಾದಲ್ಲಿ ದಾಳಿ

- ಸೇನಾ ವಾಹನ ಗುರಿಯಾಗಿಸಿ ನಡೆದ ದಾಳಿಯಲ್ಲಿ 40 ಭಾರತ ಸೈನಿಕರು ಹುತಾತ್ಮ

- ಈಗ ಅದೇ ರೀತಿ ಬಲೂಚಿ ಬಂಡುಕೋರರಿಂದ ಪಾಕ್‌ನಲ್ಲಿ ಆತ್ಮಾಹುತಿ ದಾಳಿ

- ಸ್ಫೋಟಕ ತುಂಬಿದ್ದ ವಾಹನವನ್ನು ಸೇನಾ ವಾಹನಕ್ಕೆ ಡಿಕ್ಕಿ ಹೊಡೆಸಿ ಕೃತ್ಯ

- ದಾಳಿಯಲ್ಲಿ 6 ಪಾಕ್‌ ಸೇನಾ ಬಸ್‌ ಹಾಗೂ 2 ಸೇನಾ ವಾಹನ ಸಂಪೂರ್ಣ ಛಿದ್ರ

- ದಾಳಿಯಲ್ಲಿ 90 ಪಾಕಿಸ್ತಾನಿ ಸೈನಿಕರು ಬಲಿ: ತನ್ನದೇ ಕೃತ್ಯದ ರುಚಿ ಉಂಡ ಪಾಕ್‌

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಆಸ್ಟ್ರೇಲಿಯಾದಲ್ಲಿ ಯಹೂದಿಗಳ ನರಮೇಧ!
ಜನಸಂಖ್ಯೆ ಹೆಚ್ಚಳಕ್ಕೆ ಚೀನಾದಲ್ಲಿ ಕಾಂಡೋಮ್‌ ಟ್ಯಾಕ್ಸ್‌