ಕುಖ್ಯಾತ ಜಾಗತಿಕ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ನಂ.2 ನಾಯಕ ಅಬು ಖದೀಜಾ ಇರಾಕ್‌ನಲ್ಲಿ ಹತ್ಯೆ

KannadaprabhaNewsNetwork |  
Published : Mar 16, 2025, 01:48 AM ISTUpdated : Mar 16, 2025, 04:03 AM IST
ISIS

ಸಾರಾಂಶ

ಕುಖ್ಯಾತ ಜಾಗತಿಕ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ನಂ.2 ನಾಯಕ ಅಬು ಖದೀಜಾನನ್ನು ಇರಾಕ್‌ ಗುಪ್ತಚರ ಮತ್ತು ಭದ್ರತಾ ಪಡೆಗಳ ಸಮನ್ವಯದೊಂದಿಗೆ ಅಮೆರಿಕವು ನಿಖರ ವೈಮಾನಿಕ ದಾಳಿ ನಡೆಸಿ ಹತ್ಯೆ ಮಾಡಿದೆ.

ಬಾಗ್ದಾದ್ : ಕುಖ್ಯಾತ ಜಾಗತಿಕ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ನಂ.2 ನಾಯಕ ಅಬು ಖದೀಜಾನನ್ನು ಇರಾಕ್‌ ಗುಪ್ತಚರ ಮತ್ತು ಭದ್ರತಾ ಪಡೆಗಳ ಸಮನ್ವಯದೊಂದಿಗೆ ಅಮೆರಿಕವು ನಿಖರ ವೈಮಾನಿಕ ದಾಳಿ ನಡೆಸಿ ಹತ್ಯೆ ಮಾಡಿದೆ.

ಇದರ ಬೆನ್ನಲ್ಲೇ ‘ಇದು ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ದೊಡ್ಡ ಜಯ. ಬಲಪ್ರಯೋಗದಿಂದ ಶಾಂತಿ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬಣ್ಣಿಸಿದ್ದಾರೆ.

ಇರಾಕಿನ ಅಲ್ ಅನ್ಬರ್ ಪ್ರಾಂತ್ಯದಲ್ಲಿ ನಡೆದ ನಿಖರ ವೈಮಾನಿಕ ದಾಳಿಯಲ್ಲಿ ‘ಅಬು ಖದೀಜಾ’ ಎಂದೂ ಕರೆಯಲ್ಪಡುತ್ತಿದ್ದ ಅಬ್ದುಲ್ಲಾ ಮಕ್ಕಿ ಮುಸ್ಲಿಹ್ ಅಲ್-ರಿಫಾಯಿಯನ್ನು ಮಾರ್ಚ್ 13ರಂದು ಹತ್ಯೆ ಮಾಡಲಾಗಿದೆ. ಕಾರಿನಲ್ಲಿ ಈತ ತೆರಳುತ್ತಿದ್ದಾಗ ವೈಮಾನಿಕ ದಾಳಿ ಮಾಡಿ ಕೊಲ್ಲಲಾಗಿದೆ. ಈತನ ಜತೆ ಇನ್ನೊಬ್ಬ ಉಗ್ರ ಕೂಡ ಸತ್ತಿದ್ದಾನೆ. ಹತ್ಯೆಗೆ ಸಂಬಂಧಿಸಿದಂತೆ ಶ್ವೇತಭವನವು ದಾಳಿಯ ವಿಡಿಯೋ ಬಿಡುಗಡೆ ಮಾಡಿದೆ. ಇನ್ನೊಂದೆಡೆ ಇರಾಕ್‌ ಪ್ರಧಾನಿ ಮೊಹಮ್ಮದ್‌ ಶಿಯಾ ಅಲ್‌ ಸೂಡಾನಿ ಅವರು ಅಬು ಖದೀಜಾನ ಹತ್ಯೆಯನ್ನು ದೃಢಪಡಿಸಿದ್ದಾರೆ.

ನಂ.2 ನಾಯಕನಾಗಿದ್ದ:

ಅಬು ಖದೀಜಾ ಇಸ್ಲಾಮಿಕ್ ಸ್ಟೇಟ್ (ಐಸಿಸ್‌) ಭಯೋತ್ಪಾದಕ ಗುಂಪಿನ ಜಾಗತಿಕ ಕಾರ್ಯಾಚರಣೆಗಳ ಮುಖ್ಯಸ್ಥನಾಗಿದ್ದ ಮತ್ತು ಜಾಗತಿಕವಾಗಿ ಈ ಗುಂಪಿನ 2ನೇ ಕಮಾಂಡರ್ ಸ್ಥಾನವನ್ನು ಹೊಂದಿದ್ದ. ವಿಶ್ವಾದ್ಯಂತ ಐಸಿಸ್‌ನ ಲಾಜಿಸ್ಟಿಕ್ಸ್, ಯೋಜನೆ ಮತ್ತು ಹಣಕಾಸು ನಿರ್ವಹಣೆ ನೋಡಿಕೊಳ್ಳುತ್ತಿದ್ದ.ದಾಳಿಗೀಡಾದ ವೇಳೆ ಅಬು ಖದೀಜಾ ಹಾಗೂ ಆತ ಸಹಚರ ಆತ್ಮಹತ್ಯಾ ಜಾಕೆಟ್‌ಗಳನ್ನು ಧರಿಸಿದ್ದರು ಮತ್ತು ಬಹು ಶಸ್ತ್ರಾಸ್ತ್ರಗಳನ್ನು ಹೊಂದಿದ್ದರು. ಖದೀಜಾನ ಗುರುತನ್ನು ಡಿಎನ್‌ಎ ಹೊಂದಾಣಿಕೆಯ ಮೂಲಕ ದೃಢಪಡಿಸಲಾಗಿದೆ. ಈ ಹಿಂದೆ ಆತ ಬಂಧನದಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದ.

2023ರಲ್ಲಿ ಅಮೆರಿಕವು ಅಬು ಖದೀಜಾ ಮೇಲೆ ನಿರ್ಬಂಧ ಹೇರಿತ್ತು. ಈತ ಇರಾಕ್ ಮತ್ತು ಸಿರಿಯಾದಲ್ಲಿ ಐಸಿಸ್ ನಿಯಂತ್ರಿತ ಪ್ರದೇಶಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದ. 2017ರಲ್ಲಿ ಇರಾಕ್‌ನಲ್ಲಿ ಐಸಿಸ್ ಹೆಚ್ಚೂ ಕಡಿಮೆ ಇರಾಕ್‌ನಿಂದ ನಿರ್ಮೂಲನೆಗೊಂಡಿದ್ದರೂ ಅಲ್ಲಿಲ್ಲಿ ಸಕ್ರಿಯವಾಗಿದೆ.

ಯುದ್ಧದ ಬಳಿಕ ಇರಾಕ್‌ನಿಂದ ಅಮೆರಿಕ ಹಿಂದೆ ಸರಿದಿದ್ದರೂ, ಇರಾಕಿ ಪಡೆಗಳಿಗೆ ತರಬೇತಿ ನೀಡಲು ಸುಮಾರು 2,500 ಅಮೆರಿಕದ ಸೈನಿಕರು ಅಲ್ಲೇ ನೆಲೆಸಿದ್ದಾರೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಆಸ್ಟ್ರೇಲಿಯಾದಲ್ಲಿ ಯಹೂದಿಗಳ ನರಮೇಧ!
ಜನಸಂಖ್ಯೆ ಹೆಚ್ಚಳಕ್ಕೆ ಚೀನಾದಲ್ಲಿ ಕಾಂಡೋಮ್‌ ಟ್ಯಾಕ್ಸ್‌