ಫ್ರಾನ್ಸ್‌ನಲ್ಲಿ ಗರ್ಭಪಾತ ಮಹಿಳೆಯರ ಹಕ್ಕು: ವಿಶ್ವದಲ್ಲೇ ಮೊದಲ ನಿರ್ಧಾರ

KannadaprabhaNewsNetwork | Published : Mar 6, 2024 2:17 AM

ಸಾರಾಂಶ

ಫ್ರಾನ್ಸ್‌ನಲ್ಲಿ ಗರ್ಭಪಾತ ಮೊದಲ ಹಕ್ಕು ಎಂದು ಮಸೂದೆಯನ್ನು ಅಂಗೀಕಾರ ಮಾಡಿದ ಬಳಿಕ ದೇಶಾದ್ಯಂತ ಹಲವೆಡೆ ಸಂಭ್ರಮಾಚರಣೆ, ಕೆಲವೆಡೆ ವಿರೋಧ ವ್ಯಕ್ತವಾಗಿದೆ.

ಪ್ಯಾರಿಸ್‌: ಗರ್ಭಪಾತದ ವಿಷಯವನ್ನು ಮಹಿಳೆಯರ ಸಾಂವಿಧಾನ ಹಕ್ಕಾಗಿ ಪರಿಗಣಿಸುವ ಮಸೂದೆಗೆ ಫ್ರಾನ್ಸ್‌ನ ಸಂಸತ್‌ ತನ್ನ ಅನುಮೋದನೆ ನೀಡಿದೆ. ಈ ಮೂಲಕ ಮಹಿಳೆಯರಿಗೆ ಇಂಥ ಹಕ್ಕು ನೀಡಿದ ವಿಶ್ವದ ಮೊದಲ ದೇಶವಾಗಿ ಹೊರಹೊಮ್ಮಿದೆ.

ಗರ್ಭಪಾತದ ಹಕ್ಕಿಗೆ ಫ್ರಾನ್ಸ್‌ 1975ರಲ್ಲೇ ಕಾನೂನಿನ ಮಾನ್ಯತೆ ನೀಡಿದ್ದರೂ ಒಂಭತ್ತು ಬಾರಿ ಅದನ್ನು ತಿದ್ದುಪಡಿ ಮಾಡಲಾಗಿತ್ತು. ಈಗ ಫ್ರಾನ್ಸ್‌ ಸಂವಿಧಾನದ 34ನೇ ವಿಧಿಯನ್ನು ತಿದ್ದುಪಡಿ ಮಾಡುವ ಮೂಲಕ ಗರ್ಭಪಾತಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಲು ಅಲ್ಲಿನ ನ್ಯಾಷನಲ್‌ ಅಸೆಂಬ್ಲಿ ಮತ್ತು ಸೆನೆಟ್‌ ಒಪ್ಪಿಗೆ ನೀಡಿದೆ. 780 ಮತಗಳನ್ನು ಪಡೆದು ಭಾರೀ ಬಹುಮತದೊಂದಿಗೆ ಜಂಟಿ ಸದನದಲ್ಲಿ ಮಸೂದೆ ಅಂಗೀಕಾರಗೊಂಡ ಬಳಿಕ ಸದಸ್ಯರು ಎದ್ದು ನಿಲ್ಲುವ ಮೂಲಕ ಗೌರವ ಸೂಚಿಸಿದರು. ಮಿಶ್ರ ಪ್ರತಿಕ್ರಿಯೆ: ಗರ್ಭಪಾತಕ್ಕೆ ಕಾನೂನು ಮಾನ್ಯತೆ ನೀಡುವ ಕಾನೂನು ಜಾರಿ ಮಾಡಿರುವುದಕ್ಕೆ ಸ್ಥಳೀಯರನ್ನೂ ಒಳಗೊಂಡಂತೆ ವಿಶ್ವಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವು ಮಹಿಳಾ ಪರ ಹೋರಾಟಗಾರರು ಮತ್ತು ವ್ಯಾಟಿಕನ್‌ನ ಕ್ರಿಶ್ಚಿಯನ್‌ ಬಿಷಪ್‌ಗಳು ಈ ಮೂಲಕ ಮತ್ತೊಂದು ಜೀವವನ್ನು ತೆಗೆಯಲು ಕಾನೂನು ಅವಕಾಶ ಮಾಡಿಕೊಟ್ಟಿದೆ ಎಂದು ವಾದಿಸುತ್ತಿದ್ದರೆ ಎಡಪಂಥೀಯರು ಈ ಮೂಲಕ ಮಹಿಳೆಯರ ಸ್ವಾತಂತ್ರ್ಯಕ್ಕೆ ಮಾನ್ಯತೆ ಲಭಿಸಿದೆ. ಈ ಮೂಲಕ ಆಕೆಯ ದೇಹದ ಹಕ್ಕನ್ನು ಆಕೆಗೇ ಕೊಡಲಾಗಿದೆ ಎಂಬುದಾಗಿ ವಾದಿಸುತ್ತಿದ್ದಾರೆ.

ಸಂಭ್ರಮ: ಗರ್ಭಪಾತಕ್ಕೆ ಸಾಂವಿಧಾನಿಕ ಮಾನ್ಯತೆ ನೀಡುವ ಕಾನೂನು ಅನುಮೋದನೆಗೊಂಡ ಹಿನ್ನೆಲೆಯಲ್ಲಿ ಫ್ರಾನ್ಸ್‌ನ ಜಗದ್ವಿಖ್ಯಾತ ಯುನೆಸ್ಕೋ ತಾಣ ಐಫೆಲ್‌ ಟವರ್‌ಗೆ ದೀಪಾಲಂಕಾರ ಮಾಡಿದ್ದು, ‘ಮೈ ಬಾಡಿ ಮೈ ಚಾಯ್ಸ್‌’ ಎಂದು ದೀಪದಲ್ಲಿ ಬರೆದು ಸರ್ಕಾರದ ವತಿಯಿಂದ ಸಂಭ್ರಮಾಚರಣೆ ಮಾಡಲಾಗಿದೆ. ಭಾರತದಲ್ಲಿ 24 ತಿಂಗಳ ಒಳಗಿನ ಗರ್ಭಿಣಿಯರಿಗಷ್ಟೇ ಗರ್ಭಪಾತಕ್ಕೆ ಅವಕಾಶವಿದೆ. ಅಮೆರಿಕದಲ್ಲಿ ಸುಪ್ರೀಂ ಕೋರ್ಟ್ 2022ರಲ್ಲಿ ಗರ್ಭಪಾತದ ಹಕ್ಕನ್ನು ಸುಪ್ರೀಂ ಕೋರ್ಟ್‌ ತೆರವುಮಾಡಿತ್ತು.

Share this article