ಡೀಲ್‌ ಆಗ್ದಿದ್ರೆ ಇರಾನ್‌ ಧ್ವಂಸ ಎಂದಿದ್ದ ಎಂದಿದ್ದ ಟ್ರಂಪ್‌ ದಿಢೀರ್‌ ಥಂಡಾ!

Published : Apr 23, 2026, 06:29 AM IST
 Donald Trump

ಸಾರಾಂಶ

ಅಮೆರಿಕ-ಇರಾನ್‌ ಕದನ ವಿರಾಮವನ್ನು ಮತ್ತಷ್ಟು ದಿನ ವಿಸ್ತರಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಘೋಷಿಸಿದ್ದಾರೆ. ‘ಇರಾನ್‌ನಿಂದ ಏಕೀಕೃತ ಶಾಂತಿ ಪ್ರಸ್ತಾಪದ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮನವಿ ಮೇರೆಗೆ ಕದನ ವಿರಾಮ ವಿಸ್ತರಿಸಲು ನಿರ್ಧರಿದ್ದೇನೆ’ ಎಂದು ಅವರು ತಿಳಿಸಿದ್ದಾರೆ.

  ಇಸ್ಲಾಮಾಬಾದ್‌/ವಾಷಿಂಗ್ಟನ್‌ :  ಅಮೆರಿಕ-ಇರಾನ್‌ ಕದನ ವಿರಾಮವನ್ನು ಮತ್ತಷ್ಟು ದಿನ ವಿಸ್ತರಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಘೋಷಿಸಿದ್ದಾರೆ. ‘ಇರಾನ್‌ನಿಂದ ಏಕೀಕೃತ ಶಾಂತಿ ಪ್ರಸ್ತಾಪದ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮನವಿ ಮೇರೆಗೆ ಕದನ ವಿರಾಮ ವಿಸ್ತರಿಸಲು ನಿರ್ಧರಿದ್ದೇನೆ’ ಎಂದು ಅವರು ತಿಳಿಸಿದ್ದಾರೆ.

ಆದರೆ, ‘ವಿಶ್ವದ ಶೇ.20ರಷ್ಟು ತೈಲ ಸಾಗಣೆ ಆಗುವ ಇರಾನ್‌ನ ಹೋರ್ಮುಜ್‌ ಬಂದರಿನ ಮೇಲಿನ ಅಮೆರಿಕ ಸೇನೆಯ ದಿಗ್ಬಂಧನ ಮುಂದುವರಿಸಲಿದೆ’ ಎಂದು ಅವರು ತಿಳಿಸಿದ್ದಾರೆ.

ಈ ಹಿಂದೆ ಫೆ.28ರಿಂದ ಆರಂಭವಾಗಿದ್ದ ಇರಾನ್‌ ಜತೆಗಿನ ಸಂಘರ್ಷಕ್ಕೆ ಮಾತುಕತೆ ಮೂಲಕ ಇತಿಶ್ರೀ ಹಾಡುವ ನಿಟ್ಟಿನಲ್ಲಿ 2 ವಾರಗಳ ಕದನ ವಿರಾಮ ಘೋಷಣೆಯಾಗಿತ್ತು. ಈ ನಡುವೆ ಅಂದುಕೊಂಡಂತೆ ಮಂಗಳವಾರ ಇಸ್ಲಾಮಾಬಾದ್‌ನಲ್ಲಿ ಪಾಕ್‌-ಅಮೆರಿಕ ಸಂಧಾನ ಸಭೆ ನಡೆಯಲಿಲ್ಲ. ಇದಾದ ಬಳಿಕ ಕದನವಿರಾಮ ಗಡುವು ಬುಧವಾರ ಬೆಳಗ್ಗೆ 5.30ಕ್ಕೆ ಅಂತ್ಯವಾಗಿದೆ. ಆದರೆ ಅದಕ್ಕೂ ಕೆಲ ಗಂಟೆ ಮುನ್ನ ಟ್ರಂಪ್‍ ಕದನವಿರಾಮ ವಿಸ್ತರಣೆ ಘೋಷಣೆ ಮಾಡಿದ್ದಾರೆ. ಈ ಮೂಲಕ ‘ಕದನವಿರಾಮ ವಿಸ್ತರಿಸಲ್ಲ. ಇರಾನ್‌ ಒಪ್ಪಂದಕ್ಕೆ ಬಾರದೇ ಹೋದರೆ ಬಾಂಬ್‌ ಮಳೆಗರೆವೆ’ ಎಂಬ ಹೇಳಿಕೆಯಿಂದ ಉಲ್ಟಾ ಹೊಡೆದಿದ್ದಾರೆ.

ಟ್ರಂಪ್‌ ಹೇಳಿದ್ದೇನು?:

‘ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ ಹಾಗೂ ಸೇನಾ ಮುಖ್ಯಸ್ಥ ಆಸೀಂ ಮುನೀರ್ ಅವರ ಕೋರಿಕೆಯ ಮೇರೆಗೆ ಇರಾನ್‌ ಜತೆಗಿನ ಕದನವಿರಾಮ ಮುಂದುವರಿಸುತ್ತೇವೆ. ಇರಾನ್‌ನಿಂದ ಏಕೀಕೃತ ಸಂಧಾನ ಪ್ರಸ್ತಾವ ಬರುವರೆಗೆ ಇದು ಮುಂದುವರಿಯಲಿದೆ, ಆದರೆ ಇರಾನ್‌ ಬಂದರು ಮೇಲಿನ ದಿಗ್ಬಂಧನ ಮುಂದುವರಿಸಲಾಗುತ್ತದೆ. ಎಲ್ಲಾ ರೀತಿಯಿಂದಲೂ ಸನ್ನದ್ಧವಾಗಿರುವಂತೆ ಸೇನೆಗೆ ಸೂಚಿಸಿದ್ದೇನೆ’ ಎಂದು ಟ್ರಂಪ್‌ ಹೇಳಿದ್ದಾರೆ.

ಟ್ರಂಪ್‌ ಹೇಳಿಕೆಯನ್ನು ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್ ಸ್ವಾಗತಿಸಿದ್ದಾರೆ.

  ಅಚ್ಚರಿಯ ದಾಳಿಗೆ ಪೂರ್ವ ಸಿದ್ಧತೆ ಇದು: ಇರಾನ್‌ ತೀಕ್ಷ್ಮ ಪ್ರತಿಕ್ರಿಯೆ 

ಟೆಹ್ರಾನ್‌: ಅಮೆರಿಕದ ಕದನ ವಿರಾಮ ವಿಸ್ತರಣೆಗೆ ಇರಾನ್ ತೀಕ್ಷ್ಮವಾಗಿ ಪ್ರತಿಕ್ರಿಯಿಸಿದೆ. ಯುದ್ಧದಲ್ಲಿ ಸೋತವರು ಷರತ್ತುಗಳನ್ನು ವಿಧಿಸಲು ಸಾಧ್ಯವಿಲ್ಲ ಎಂದು ಹೇಳಿರುವ ಇರಾನ್‌, ಕದನ ವಿರಾಮ ವಿಸ್ತರಣೆಯು ಅಚ್ಚರಿಯ ದಾಳಿಗೆ ಪೂರ್ವ ಸಿದ್ಧತೆ ನಡೆಸುವ ತಂತ್ರಗಾರಿಕೆಯ ಭಾಗ ಅಷ್ಟೆ ಎಂದು ತಿಳಿಸಿದೆ. ‘ಟ್ರಂಪ್‌ ಅವರ ಕದನ ವಿರಾಮ ವಿಸ್ತರಣೆ ಕ್ರಮವು ಬಾಂಬ್‌ ದಾಳಿಗಿಂತ ಭಿನ್ನವೇನಲ್ಲ. ಅಮೆರಿಕದ ಯಾವುದೇ ದುಸ್ಸಾಹಸಕ್ಕೆ ಸೇನೆ ಮೂಲಕ ಪ್ರತಿಕ್ರಿಯೆ ಸಲ್ಲಿಸಲಾಗುವುದು. ಇರಾನ್‌ ಈ ವಿಚಾರದಲ್ಲಿ ಮುಂದಾಳತ್ವ ತೆಗೆದುಕೊಳ್ಳುವ ಸಮಯ ಬಂದಿದೆ’ ಎಂದು ಇರಾನ್‌ ಸಂಸತ್ತಿನ ಸ್ಪೀಕರ್‌ ಮೊಹಮ್ಮದ್‌ ಬಘಾರ್‌ ಘಲಿಬಾಫ್‌ ಅವರ ಹಿರಿಯ ಸಲಹೆಗಾರ ಮಹ್ದಿ ಮೊಹಮ್ಮದಿ ತಿಳಿಸಿದ್ದಾರೆ.

 ಮುನೀರ್ ಡಬಲ್‌ ಗೇಮ್‌ ಕಾರಣ ಸಂಧಾನಕ್ಕೆ ಇರಾನ್ ಸರ್ಕಾರ ಗೈರು? 

ಇಸ್ಲಾಮಾಬಾದ್: ಇರಾನ್-ಅಮೆರಿಕ ನಡುವಿನ 2ನೇ ಸುತ್ತಿನ ಸಂಧಾನ ಸಭೆ ನಡೆಯದೇ ಇರಲು ಪಾಕ್ ಸೇನಾ ಮುಖ್ಯಸ್ಥ ಫೀ। ಮಾ। ಅಸೀಂ ಮುನೀರ್ ಅವರ ಡಬಲ್‌ ಗೇಮ್‌ ಕಾರಣ. ಅವರು ಅತ್ತ ಇರಾನ್ ಜತೆ ಚೆನ್ನಾಗಿದ್ದುಕೊಂಡೂ ಅಮೆರಿಕ ಪರ ವಾಲಿದ್ದರು. ಇದು ಇರಾನ್‌ ಕೋಪಕ್ಕೆ ಕಾರಣವಾಗಿ, ಆ ದೇಶ ಸಂಧಾನಕ್ಕೆ ಬರಲಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿದೆ. ಇರಾನ್‌ನ ಸರ್ಕಾರದ ಪ್ರಮುಖರನ್ನು ಇತ್ತೀಚೆಗೆ ಭೇಟಿ ಮಾಡಿದ್ದ ಮುನೀರ್‌, ‘ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆ ನಿಮ್ಮ ಬೇಡಿಕೆಗಳ ಬಗ್ಗೆ ಮಾತನಾಡುವೆ. ಇರಾನ್‌ಗೆ ಅನುಕೂಲಕರ ಆಗುವ ನಿರ್ಣಯಕ್ಕೆ ಯತ್ನಿಸುವೆ’ ಎಂದು ಭರವಸೆ ನೀಡಿದ್ದರು. ಆ ಪ್ರಕಾರ ಮುನೀರ್ ಅವರಿಗೆ ಇರಾನ್‌ ತನ್ನ ಬೇಡಿಕೆಗಳ ಪಟ್ಟಿ ನೀಡಿತ್ತು.

ಆದರೆ, ಈ ಬೇಡಿಕೆಯ ಪಟ್ಟಿಯನ್ನು ಮುನೀರ್‌ ಅಮೆರಿಕಕ್ಕೆ ರವಾನಿಸಲೇ ಇಲ್ಲ ಎಂದು ಗೊತ್ತಾಗಿದೆ. ಹೀಗಾಗಿಯೇ ಮುನೀರ್‌ ಮೇಲೆ ಇರಾನ್‌ಗೆ ನಂಬಿಕೆಯೇ ಹೊರಟು ಹೋಗಿದೆ ಎಂದು ಉನ್ನತ ಮೂಲಗಳು ಹೇಳಿವೆ ಎಂದು ಮಾಧ್ಯಮ ವರದಿ ಹೇಳಿದೆ.

 ನಾಳೆಯೊಳಗೆ ಶುಭ ಸುದ್ದಿ: ಚರ್ಚೆ ಬಗ್ಗೆ ಟ್ರಂಪ್‌ ಸುಳಿವು 

ವಾಷಿಂಗ್ಟನ್: ಇರಾನ್ ಜೊತೆಗಿನ 2ನೇ ಸುತ್ತಿನ ಶಾಂತಿ ಮಾತುಕತೆಗೆ ಸಂಬಂಧಿಸಿದ ‘ಒಳ್ಳೆಯ ಸುದ್ದಿ’ ಶುಕ್ರವಾರದೊಳಗೆ ಬರಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅಲ್ಲದೆ, ‘ಮುಂದಿನ 36 ರಿಂದ 72 ಗಂಟೆಗಳಲ್ಲಿ ಶಾಂತಿ ಮಾತುಕತೆ ಪುನರಾರಂಭವಾಗಬಹುದು’ ಎಂದೂ ಹೇಳಿದ್ದಾರೆ.

ಬುಧವಾರ ನ್ಯೂಯಾರ್ಕ್ ಪೋಸ್ಟ್ ಜತೆ ಮಾತನಾಡಿದ ಟ್ರಂಪ್‍, ‘ನನೆಗುದಿಗೆ ಬಿದ್ದಿರುವ ಮಾತುಕತೆಗಳಿಗೆ ಚಾಲನೆ ಸಿಗುವ ನಿರೀಕ್ಷೆ ಇದೆ. ಇದು ಸಾಧ್ಯವಿದೆ’ ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಮಂಗಳವಾರ ರಾತ್ರಿ ಹೇಳಿಕೆ ನೀಡಿದ್ದ ಟ್ರಂಪ್‌, ‘ಇರಾನ್‌ನಿಂದ ಏಕೀಕೃತ ಶಾಂತಿ ಪ್ರಸ್ತಾಪದ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮನವಿ ಮೇರೆಗೆ ಕದನ ವಿರಾಮ ವಿಸ್ತರಿಸಲು ನಿರ್ಧರಿದ್ದೇನೆ. ಆದರೆ ಹೋರ್ಮುಜ್‌ ಮೇಲಿನ ಅಮೆರಿಕದ ದಿಗ್ಬಂಧನ ಮುಂದುವರಿಯಲಿದೆ’ ಎಂದಿದ್ದರು.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಸಂಧಾನ ಇಲ್ದೆ ಇರಾನ್‌-ಅಮೆರಿಕ ಕದನವಿರಾಮ ಅಂತ್ಯ
ಇರಾನ್‌ ಹಡಗಲ್ಲಿ ಚೀನಾ ಕ್ಷಿಪಣಿ ರಾಸಾಯನಿಕ : ನಿಕ್ಕಿ ಹ್ಯಾಲೆ