ಬಾಹ್ಯಾಕಾಶ ಪ್ರವಾಸಕ್ಕೆ ಭಾರತದ ಮೊದಲ ವ್ಯಕ್ತಿ

KannadaprabhaNewsNetwork |  
Published : Apr 14, 2024, 01:47 AM ISTUpdated : Apr 14, 2024, 05:05 AM IST
ಗೋಪಿ | Kannada Prabha

ಸಾರಾಂಶ

ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯತೆ ಪಡೆಯುತ್ತಿರುವ ಬಾಹ್ಯಾಕಾಶ ಪ್ರವಾಸಕ್ಕೆ ಇದೇ ಮೊದಲ ಬಾರಿ ಭಾರತೀಯ ಪ್ರವಾಸಿಯೊಬ್ಬರು ತೆರಳಲು ಆಯ್ಕೆಯಾಗಿದ್ದಾರೆ. 

  ವಾಷಿಂಗ್ಟನ್‌ :  ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯತೆ ಪಡೆಯುತ್ತಿರುವ ಬಾಹ್ಯಾಕಾಶ ಪ್ರವಾಸಕ್ಕೆ ಇದೇ ಮೊದಲ ಬಾರಿ ಭಾರತೀಯ ಪ್ರವಾಸಿಯೊಬ್ಬರು ತೆರಳಲು ಆಯ್ಕೆಯಾಗಿದ್ದಾರೆ. ಅಮೆಜಾನ್‌ ಕಂಪನಿಯ ಸಂಸ್ಥಾಪಕ ಜೆಫ್‌ ಬೆಜೋಸ್‌ ಆರಂಭಿಸಿರುವ ಬ್ಲೂ ಒರಿಜಿನ್‌ ಎನ್‌ಎಸ್‌-25 ಪ್ರವಾಸೋದ್ಯಮ ಮಿಷನ್‌ನಲ್ಲಿ ಆಂಧ್ರಪ್ರದೇಶದ ವಿಜಯವಾಡ ಮೂಲದ ಪೈಲಟ್‌ ಹಾಗೂ ಉದ್ಯಮಿ ಗೋಪಿ ತೋಟಕುರ ತೆರಳಲು ಸಜ್ಜಾಗಿದ್ದಾರೆ. ಪ್ರವಾಸದ ದಿನಾಂಕ ಇನ್ನೂ ಪ್ರಕಟವಾಗಿಲ್ಲ.

ಗೋಪಿ ತೋಟಕುರ ಅವರು ಬಾಹ್ಯಾಕಾಶ ಪ್ರವಾಸಕ್ಕೆ ತೆರಳುತ್ತಿರುವ ಮೊದಲ ಭಾರತೀಯನೆಂಬ ಖ್ಯಾತಿ ಪಡೆಯಲಿದ್ದಾರೆ. ಆದರೆ ಇವರು ಬಾಹ್ಯಾಕಾಶಕ್ಕೆ ತೆರಳಲಿರುವ 5ನೇ ಭಾರತೀಯ ಮೂಲದ ವ್ಯಕ್ತಿಯಾಗಲಿದ್ದಾರೆ. ಈ ಹಿಂದೆ ಭಾರತೀಯ ವಾಯುಪಡೆಯ ವಿಂಗ್‌ ಕಮಾಂಡರ್‌ ರಾಕೇಶ್‌ ಶರ್ಮಾ 1984ರಲ್ಲಿ ಬಾಹ್ಯಾಕಾಶ ಯಾನ ಕೈಗೊಂಡಿದ್ದರು. ನಂತರ ನಾಸಾ ವಿಜ್ಞಾನಿಗಳಾದ ಕಲ್ಪನಾ ಚಾವ್ಲಾ, ಸುನೀತಾ ವಿಲಿಯಮ್ಸ್‌ ಹಾಗೂ ರಾಜಾ ಚಾರಿ ಶಿರೀಷ ಬಂಡ್ಲ ಅವರೂ ಬಾಹ್ಯಾಕಾಶಕ್ಕೆ ತೆರಳಿದ್ದರು. ಇವರೆಲ್ಲರೂ ಬಾಹ್ಯಾಕಾಶ ವಿಜ್ಞಾನಿಗಳಾಗಿದ್ದಾರೆ ಮತ್ತು ಭಾರತೀಯ ಮೂಲದ ಅಮೆರಿಕದ ಪ್ರಜೆಗಳಾಗಿದ್ದಾರೆ.

6 ಜನ ಯಾತ್ರಿಕರಲ್ಲಿ ಒಬ್ಬರು ಗೋಪಿ:   ಬ್ಲೂ ಒರಿಜಿನ್‌ ಮಿಷನ್‌ನ ನ್ಯೂ ಶೆಫರ್ಡ್‌ ನೌಕೆ ಈಗಾಗಲೇ ಆರು ಬಾರಿ ಬಾಹ್ಯಾಕಾಶಕ್ಕೆ ಹೋಗಿ ಬಂದಿದ್ದು, 31 ಮಂದಿ ಬಾಹ್ಯಾಕಾಶ ಪ್ರವಾಸ ಕೈಗೊಂಡಿದ್ದಾರೆ. ಇದೀಗ ಏಳನೇ ಪ್ರವಾಸಕ್ಕೆ ಗೋಪಿ ಆಯ್ಕೆಯಾಗಿದ್ದಾರೆ. ಇವರ ಜೊತೆಗೆ ತೆರಳಲು ಇನ್ನೂ ಐದು ಮಂದಿ ಆಯ್ಕೆಯಾಗಿದ್ದಾರೆ. ಭೂಮಿಯ ವಾತಾವರಣ ಮತ್ತು ಬಾಹ್ಯಾಕಾಶದ ಗಡಿ ಪ್ರದೇಶ ಎಂದು ಗುರುತಿಸಲಾಗುವ ಕರ್ಮನ್‌ ಲೈನ್‌ವರೆಗೆ ಇವರ ನೌಕೆ ಹೋಗಿ ಬರಲಿದೆ. ನ್ಯೂ ಶೆಫರ್ಡ್‌ ಸಂಪೂರ್ಣ ಮರುಬಳಕೆಯಾಗುವ ನೌಕೆಯಾಗಿದ್ದು, ಬಾಹ್ಯಾಕಾಶ ಪ್ರವಾಸೋದ್ಯಮಕ್ಕೆಂದೇ ಇದನ್ನು ಬ್ಲೂ ಒರಿಜಿನ್‌ ಕಂಪನಿ ಅಭಿವೃದ್ಧಿಪಡಿಸಿದೆ.

‘ಹಾರಾಟ ಪ್ರೇಮಿ’ ಗೋಪಿ:

ಗೋಪಿ ತೋಟಕುರ ಪೈಲಟ್‌ ಹಾಗೂ ಉದ್ಯಮಿಯಾಗಿದ್ದಾರೆ. ಇವರಿಗೆ ಆಕಾಶದಲ್ಲಿ ಹಾರಾಡುವ ಖಯಾಲಿ. ಕಾರು ಓಡಿಸುವುದನ್ನು ಕಲಿಯುವುದಕ್ಕೂ ಮೊದಲೇ ವಿಮಾನ ಹಾರಿಸುವುದನ್ನು ಕಲಿತವರು. ಇವರ ಬಳಿ ಕಮರ್ಷಿಯಲ್‌ ವಿಮಾನ ಹಾರಿಸುವ ಲೈಸನ್ಸ್‌ ಇದೆ. ಜೊತೆಗೆ ಬುಷ್‌, ಏರೋಬ್ಯಾಟಿಕ್‌, ಸೀಪ್ಲೇನ್‌, ಗ್ಲೈಡರ್‌ಗಳು ಮತ್ತು ಬಿಸಿಗಾಳಿಯ ಬಲೂನ್‌ಗಳನ್ನೂ ಹಾರಿಸುತ್ತಾರೆ. ಅಂತಾರಾಷ್ಟ್ರೀಯ ಮೆಡಿಕಲ್‌ ಜೆಟ್‌ ಪೈಲಟ್‌ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ.

ಅಮೆರಿಕದಲ್ಲಿ ಇವರು ಹೋಲಿಸ್ಟಿಕ್‌ ವೆಲ್‌ನೆಸ್‌ಗೆ ಸಂಬಂಧಿಸಿದ ಪ್ರಿಸರ್ವ್‌ ಲೈಫ್‌ ಕಾರ್ಪ್‌ ಎಂಬ ಕಂಪನಿಯನ್ನು ನಡೆಸುತ್ತಿದ್ದಾರೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಉಗ್ರರಿಗೆ ಹೆದರಿ ಹೊಸ ವರ್ಷಾಚರಣೆಯೇ ರದ್ದು
ಬಾಂಗ್ಲಾ ಹಿಂದು ವ್ಯಕ್ತಿ ಹತ್ಯೆ : 7 ಮಂದಿ ಸೆರೆ