ಕೆಎಸ್ಡಿಎಲ್‌ ಚಾರಿತ್ರಿಕ ಮೈಲುಗಲ್ಲು: ಈಗ ₹2000 ಕೋಟಿ ವಹಿವಾಟು!

Published : Apr 29, 2026, 06:18 AM IST
KSDL Business Achievement

ಸಾರಾಂಶ

ದಶಕಗಳ ವರ್ಷಗಳ ಇತಿಹಾಸ ಹೊಂದಿರುವ ಹಾಗೂ ಜನಪ್ರಿಯ ಮೈಸೂರು ಸ್ಯಾಂಡಲ್‌ ಸೇರಿ ವಿವಿಧ ಉತ್ಪನ್ನಗಳನ್ನು ಉತ್ಪಾದಿಸುವ ರಾಜ್ಯ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (ಕೆಎಸ್‌ಡಿಎಲ್‌) ಇದೇ ಮೊದಲ ಬಾರಿಗೆ 2 ಸಾವಿರ ಕೋಟಿ ರು. ವಹಿವಾಟು ನಡೆಸಿದ್ದು, 507 ಕೋಟಿ ರು. ಲಾಭ ಕಂಡಿದೆ.

 ಬೆಂಗಳೂರು : ದಶಕಗಳ ವರ್ಷಗಳ ಇತಿಹಾಸ ಹೊಂದಿರುವ ಹಾಗೂ ಜನಪ್ರಿಯ ಮೈಸೂರು ಸ್ಯಾಂಡಲ್‌ ಸೇರಿ ವಿವಿಧ ಉತ್ಪನ್ನಗಳನ್ನು ಉತ್ಪಾದಿಸುವ ರಾಜ್ಯ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (ಕೆಎಸ್‌ಡಿಎಲ್‌) ಇದೇ ಮೊದಲ ಬಾರಿಗೆ 2 ಸಾವಿರ ಕೋಟಿ ರು. ವಹಿವಾಟು ನಡೆಸಿದ್ದು, 507 ಕೋಟಿ ರು. ಲಾಭ ಕಂಡಿದೆ.

ಮೂರ್ನಾಲ್ಕು ವರ್ಷಗಳ ಹಿಂದೆ ನಷ್ಟದಲ್ಲಿದ್ದ ಕೆಎಸ್‌ಡಿಎಲ್‌

ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ನಷ್ಟದಲ್ಲಿದ್ದ ಕೆಎಸ್‌ಡಿಎಲ್‌ ಇದೀಗ ಲಾಭದಾಯಕ ಸರ್ಕಾರಿ ಸಂಸ್ಥೆಯಾಗಿ ಮಾರ್ಪಟ್ಟಿದೆ. 110 ವರ್ಷಗಳಲ್ಲಿ ಇದೇ ಮೊದಲ ಬಾರಿ 2025-26ನೇ ಆರ್ಥಿಕ ವರ್ಷದಲ್ಲಿ 2016 ಕೋಟಿ ರು. ವಹಿವಾಟು ನಡೆಸಿದೆ. ಅಲ್ಲದೆ, 507 ಕೋಟಿ ರು. ಲಾಭ ಗಳಿಸಿದ್ದು, 48,496 ಮೆಟ್ರಿಕ್‌ ಟನ್‌ ಉತ್ಪಾದನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಖಾಸಗಿ ಹೋಟೆಲ್‌ನಲ್ಲಿ ಕೆಎಸ್‌ಡಿಎಲ್‌ ಸಾಧನೆಗಾಗಿ ಶ್ರಮಿಸಿದ ಅಧಿಕಾರಿಗಳು ಮತ್ತು ನೌಕರರಿಗೆ ನಿಗಮದಿಂದ ಸನ್ಮಾನ ಮತ್ತು ಮೈಸೂರು ಸ್ಯಾಂಡಲ್‌ನ ಸಾಧನೆಯ ಶಿಖರ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ಹಾಗೂ ಕೆಎಸ್‌ಡಿಎಲ್‌ ಅಧ್ಯಕ್ಷ ಅಪ್ಪಾಜಿ ಸಿ.ಎಸ್‌.ನಾಡಗೌಡ ಅವರು ನೌಕರರನ್ನು ಸನ್ಮಾನಿಸಿದರು.

ಈ ವೇಳೆ ಮಾತನಾಡಿದ ಎಂ.ಬಿ.ಪಾಟೀಲ್‌, ಕೆಎಸ್‌ಡಿಎಲ್‌ ಚಾರಿತ್ರಿಕ ಮೈಲುಗಲ್ಲು ಸಾಧಿಸಿದ್ದು, ಸಾರ್ವಜನಿಕ ಉದ್ದಿಮೆಗಳಲ್ಲೇ ವಿಶಿಷ್ಟ ಸಾಧನೆ ಮಾಡಿದೆ. 2022-23ರಲ್ಲಿ 1,375 ಕೋಟಿ ರು. ವಹಿವಾಟು ನಡೆಸಿದ್ದ ಸಂಸ್ಥೆ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೂರು ವರ್ಷಗಳಲ್ಲಿ 2016 ಕೋಟಿ ರು. ವಹಿವಾಟು ನಡೆಸಿದೆ. ಈ ಅಲ್ಪಾವಧಿಯಲ್ಲೇ ಕೆಎಸ್‌ಡಿಎಲ್‌ ವಹಿವಾಟು 641 ಕೋಟಿ ರು. ನಷ್ಟು ಹೆಚ್ಚಳವಾಗಿದೆ. ಈ ಹಿಂದೆ ಕೇವಲ 34 ಉತ್ಪನ್ನಗಳಿದ್ದವು. ಮೂರು ವರ್ಷಗಳಲ್ಲಿ ಹೊಸದಾಗಿ 57 ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಈಗ ಒಟ್ಟು 94 ಉತ್ಪನ್ನಗಳನ್ನು ಹೊಂದಿದೆ. ಯಾವುದೇ ಹೊಸ ನೇಮಕಾತಿ ಇಲ್ಲದೆ, ಯಂತ್ರೋಪಕರಣಗಳ ಖರೀದಿ ಇಲ್ಲದೆ ಈ ಸಾಧನೆ ಮಾಡಲಾಗಿದೆ ಎಂದರು.

2025-26ನೇ ಸಾಲಿನಲ್ಲಿ 47 ಸಾವಿರ ಮೆಟ್ರಿಕ್‌ ಟನ್‌ ಉತ್ಪನ್ನಗಳನ್ನು ಉತ್ಪಾದಿಸಲಾಗಿದೆ. ಅಲ್ಲದೆ, ವಹಿವಾಟಿನಿಂದ ಬಂದಿರುವ 507 ಕೋಟಿ ರು. ಲಾಭದಲ್ಲಿ ಸರ್ಕಾರಕ್ಕೆ 157 ಕೋಟಿ ರು. ಲಾಭಾಂಶ ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 5 ಕೋಟಿ ರು. ಹಸ್ತಾಂತರಿಸಲಾಗುವುದು. ಕಳೆದ ವರ್ಷ 135 ಕೋಟಿ ರು. ಲಾಭಾಂಶ ನೀಡಲಾಗಿತ್ತು. ಈಗ 22 ಕೋಟಿ ರು. ಹೆಚ್ಚಳವಾಗಿದೆ ಎಂದು ವಿವರಿಸಿದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೂ ಮುನ್ನ ಆಧುನಿಕ ವ್ಯಾಪಾರ ಮತ್ತು ಇ-ಕಾಮರ್ಸ್‌ ವಹಿವಾಟು ನಡೆಸಿರಲಿಲ್ಲ. ಅದಕ್ಕೆ ಸಂಬಂಧಿಸಿ ನಿರಂತರ ಕೆಲಸ ಮಾಡಿ ಆಧುನಿಕ ವ್ಯಾಪಾರ ಮತ್ತು ಇ-ಕಾಮರ್ಸ್‌ ವಹಿವಾಟು ಆರಂಭಿಸಲಾಯಿತು. 2025-26ನೇ ಸಾಲಿನಲ್ಲಿ ಆಧುನಿಕ ವ್ಯಾಪಾರದ ಮೂಲಕ 420 ಕೋಟಿ ರು. ಮತ್ತು ಇ-ಕಾಮರ್ಸ್‌ನಿಂದ 120 ಕೋಟಿ ರು. ವಹಿವಾಟು ದಾಖಲಿಸಲಾಗಿದೆ. ಇನ್ನು, ಸಂಸ್ಥೆ ಮುಂದಿನ 2 ವರ್ಷಗಳಲ್ಲಿ ಅಂದರೆ 2028ರ ವೇಳೆಗೆ ಒಟ್ಟಾರೆ ವಹಿವಾಟನ್ನು 3 ಸಾವಿರ ಕೋಟಿ ರು. ಮತ್ತು 2030ರ ವೇಳೆಗೆ 5 ಸಾವಿರ ಕೋಟಿ ರು.ಗೆ ತಲುಪಿಸುವ ಗುರಿ ಹೊಂದಲಾಗಿದೆ. ಅದಕ್ಕೆ ಪೂರಕವಾಗಿ ವಿಜಯಪುರದಲ್ಲಿ 50 ಎಕರೆಯಲ್ಲಿ ನೂತನ ಉತ್ಪಾದನಾ ಘಟಕ ಆರಂಭಿಸಲಾಗುತ್ತಿದ್ದು, ಅದಕ್ಕಾಗಿ 229 ಕೋಟಿ ರು. ಮಂಜೂರು ಮಾಡಲಾಗಿದೆ ಎಂದರು.

ಗ್ರೋ ಮೋರ್‌ ಸ್ಯಾಂಡಲ್‌ ಕಾರ್ಯಕ್ರಮ:

ಸಂಸ್ಥೆಯ ಹೆಮ್ಮೆಯ ಉತ್ಪನ್ನವಾದ ಮೈಸೂರು ಸ್ಯಾಂಡಲ್‌ ಸೋಪ್‌ ತಯಾರಿಕೆಗೆ ಅಗತ್ಯವಿರುವ ಉತ್ತಮ ಗುಣಮಟ್ಟದ ಗಂಧದ ಎಣ್ಣೆಗಾಗಿ ರೈತರೊಂದಿಗೆ ಗ್ರೋ ಮೋರ್‌ ಸ್ಯಾಂಡಲ್‌ ಕಾರ್ಯಕ್ರಮ ರೂಪಿಸಿದೆ. ಅದರ ಅಡಿ 10 ವರ್ಷಗಳಲ್ಲಿ 10 ಸಾವಿರ ಎಕರೆಯಲ್ಲಿ ಗಂಧದ ನೆಡುತೋಪು ಬೆಳೆಸಲಾಗುವುದು. ಅದಕ್ಕಾಗಿ ರೈತರಿಗೆ ಪ್ರತಿ ಗಂಧದ ಗಿಡಕ್ಕೆ 3 ವರ್ಷಗಳಿಗೆ 500 ರು. ಪ್ರೋತ್ಸಾಹಧನ ನೀಡಲಾಗುವುದು. ಕಳೆದ ಮೂರು ವರ್ಷಗಳಲ್ಲಿ ಸಂಸ್ಥೆ ರೈತರಿಂದಲೇ ನೇರವಾಗಿ 174 ಟನ್‌ ಗಂಧ ಖರೀದಿಸಿದೆ. ಜಿಕೆವಿಕೆ ಮತ್ತು ವಿಜಯಪುರದ ಕೃಷಿ ವಿದ್ಯಾಲಯಗಳ ಸಹಯೋಗದಲ್ಲಿ ಶ್ರೀಗಂಧದ ಅಧ್ಯಯನ ಪೀಠ ತೆರೆಯಲಾಗುವುದು ಎಂದು ಘೋಷಿಸಿದರು.

ಕೆಎಸ್‌ಡಿಎಲ್‌ ಅಧ್ಯಕ್ಷ ಅಪ್ಪಾಜಿ ಸಿ.ಎಸ್‌.ನಾಡಗೌಡ ಮಾತನಾಡಿ, ಕೆಎಸ್‌ಡಿಎಲ್‌ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆ ಸೃಷ್ಟಿಸಲಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಕೆಎಸ್‌ಡಿಎಲ್‌ ಉತ್ಪನ್ನ ಮಾರಾಟಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಆಸ್ಟ್ರೇಲಿಯಾ ಸೇರಿ ದೇಶ-ವಿದೇಶಗಳಿಗೆ ಹೋಗಿ ಸಾಬೂನು ಮಾರಾಟ ವಿಸ್ತರಣೆಗೆ ಪ್ರಯತ್ನಿಸಲಾಗುತ್ತಿದೆ. ಆಧುನಿಕ ಮಾರಾಟ ಮತ್ತು ಇ-ಕಾಮರ್ಸ್‌ ಬೇಡಿಕೆಗನುಗುಣವಾಗಿ ನಮ್ಮ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಯುನೈಟೆಡ್‌ ಎಮಿರೇಟ್ಸ್‌ ದೇಶಗಳಲ್ಲೂ ಮಾರುಕಟ್ಟೆ ವಿಸ್ತರಿಸಲಾಗುವುದು. ಸೋಪು ಮಾತ್ರವಲ್ಲದೆ ಕಾಸ್ಮೆಟಿಕ್‌, ಸುಗಂಧ ದ್ರವ್ಯ ವಿಭಾಗದಲ್ಲೂ ಉತ್ಪನ್ನಗಳನ್ನು ಮಾರುಕಟ್ಟೆ ವಿಸ್ತರಣೆ ಮಾಡುತ್ತೇವೆ ಎಂದು ತಿಳಿಸಿದರು.

ಕೆಎಸ್‌ಡಿಎಲ್‌ ಸಾಧನೆಗೆ ನೌಕರರ ಮತ್ತು ಅಧಿಕಾರಿಗಳ ಶ್ರಮ ಸಾಕಷ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಸರ್ಕಾರದ ನೆರವಿನಿಂದ ಕೆಎಸ್‌ಡಿಎಲ್‌ ಉತ್ತಮ ಸಾಧನೆ ಮಾಡಿದೆ. ಅವರಿಗೆ ಸೂಕ್ತ ರೀತಿಯ ಪ್ರೋತ್ಸಾಹ ಭತ್ಯೆ ಮತ್ತು ಉಡುಗೊರೆ ನೀಡಲು ನಿರ್ಧರಿಸಲಾಗಿದೆ. ಅದನ್ನು ಶೀಘ್ರ ಕೊಡಲಾಗುವುದು ಎಂದು ಘೋಷಿಸಿದರು.

ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್‌, ಕೆಎಸ್‌ಡಿಎಲ್‌ ವ್ಯವಸ್ಥಾಪಕ ನಿರ್ದೇಶಕ ಡಾ. ಪಿಕೆಎಂ ಪ್ರಶಾಂತ್‌ ಇತರರಿದ್ದರು.

ಕೆಎಸ್‌ಡಿಎಲ್‌ ಲಾಭದ ಹಾದಿ

- ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ನಷ್ಟದಲ್ಲಿದ್ದ ಕೆಎಸ್‌ಡಿಎಲ್‌. ಇದೀಗ ಲಾಭದ ಹಾದಿ

- 110 ವರ್ಷಗಳಲ್ಲಿ ಮೊದಲ ಸಲ 25-26ನೇ ಆರ್ಥಿಕ ವರ್ಷದಲ್ಲಿ ₹2016 ಕೋಟಿ ವಹಿವಾಟು

- 48,496 ಮೆಟ್ರಿಕ್‌ ಟನ್‌ನಷ್ಟು ವಿವಿಧ ಉತ್ಪನ್ನಗಳ ಉತ್ಪಾದನೆ. 507 ಕೋಟಿ ರು. ಲಾಭ

- 2022-23ರಲ್ಲಿ ₹1,375 ಕೋಟಿ ರು. ವಹಿವಾಟು ನಡೆಸಿದ್ದ ಸಂಸ್ಥೆ, 3 ವರ್ಷದಲ್ಲಿ ದುಪ್ಪಟ್ಟು

- ಯಾವುದೇ ಹೊಸ ನೇಮಕಾತಿ ಇಲ್ಲದೆ ಈ ಸಾಧನೆ: ಸಚಿವ ಎಂ.ಬಿ. ಪಾಟೀಲ್ ಹರ್ಷ

- ಸಾಧನೆ ಮಾಡಿದ್ದಕ್ಕೆ ನೌಕರರನ್ನು ಸನ್ಮಾನಿಸಿದ ಎಂ.ಬಿ. ಪಾಟೀಲ್‌, ಸಿ.ಎಸ್‌. ನಾಡಗೌಡ

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಇರಾನ್‌ ವಿರುದ್ಧ ಅಮೆರಿಕದಿಂದ ‘ಡಾರ್ಕ್‌ ಈಗಲ್‌’ ಪರಮಾಸ್ತ್ರ?
ಅಮೆರಿಕ, ಇಸ್ರೇಲ್‌ಗೆ ಇರಾನ್‌ ಹಾರ್ಟ್‌ ಅಟ್ಯಾಕ್‌ ಅಸ್ತ್ರ ಧಮಕಿ