;Resize=(412,232))
ಟೆಹ್ರಾನ್: ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಎರಡನೇ ಹಂತದ ಸಂಧಾನ ಮಾತುಕತೆ ವಿಫಲವಾದ ಬೆನ್ನಲ್ಲೇ, ಅಮೆರಿಕದ ಜೊತೆಗಿನ ಯುದ್ಧ ಸ್ಥಗಿತಕ್ಕೆ ಇರಾನ್ ಮೂರು ಹಂತದ ಮಾತುಕತೆಯ ಪ್ರಸ್ತಾಪವನ್ನು ಮುಂದಿಟ್ಟಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಆದರೆ ಇಂಥದ್ದೊಂದು ಪ್ರಸ್ತಾಪಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪುವುದು ಅನುಮಾನ ಎನ್ನಲಾಗಿದೆ.
-ಸಂಪೂರ್ಣ ಯುದ್ಧ ಸ್ಥಗಿತ. ಹೋರ್ಮುಜ್‌ನಲ್ಲಿ ಅಮೆರಿಕ ಹೇರಿರುವ ನಿರ್ಬಂಧ ಪೂರ್ಣ ತೆರವು ಮಾಡಬೇಕು. ಇರಾನ್ ಮತ್ತು ಲೆಬನಾನ್ ಮೇಲೆ ಮತ್ತೆ ದಾಳಿ ಮಾಡಲ್ಲ ಎಂದು ಗ್ಯಾರಂಟಿ ನೀಡಬೇಕು. ಮೊದಲ ಹಂತದ ಎರಡೂ ಅಂಶಗಳಿಗೆ ಒಪ್ಪಿದರೆ, ಎರಡನೇ ಹಂತದಲ್ಲಿ ಉಭಯ ದೇಶಗಳು ಹೋರ್ಮುಜ್ ಜಲಸಂಧಿ ನಿರ್ವಹಣೆ ಮತ್ತು ಆಡಳಿತದ ಬಗ್ಗೆ ಮಾತುಕತೆ ಆರಂಭಿಸಬಹುದು. ಮೊದಲ ಎರಡೂ ಅಂಶಗಳಿಗೆ ಅಮೆರಿಕ ಒಪ್ಪಿದರೆ ಮಾತ್ರ, ಇರಾನ್‌ನ ಪರಮಾಣು ವಿಷಯಗಳ ಬಗ್ಗೆ ಚರ್ಚೆ ಆರಂಭಿಸಬಹುದು- ಎಂಬುವೇ ಈ 3 ಪ್ರಸ್ತಾವಗಳು.
ಆದರೆ ಅಮೆರಿಕದ ಪ್ರಜೆಗಳ ರಕ್ಷಣೆ ನಮ್ಮ ಮೊದಲ ಆದ್ಯತೆ. ಅದು ಸಾಧ್ಯವಾದರೆ ಮಾತ್ರವೇ ನಾವು ಒಪ್ಪಂದಕ್ಕೆ ಮುಂದಾಗುತ್ತೇವೆ. ಇರಾನ್ ಯಾವುದೇ ಕಾರಣಕ್ಕೂ ಅಣ್ವಸ್ತ್ರ ಹೊಂದಲು ನಾವು ಬಿಡಲ್ಲ ಎಂದು ಟ್ರಂಪ್ ಪದೇ ಪದೇ ಹೇಳುತ್ತಲೇ ಇದ್ದಾರೆ. ಹೀಗಾಗಿ ಇರಾನ್ ಮುಂದಿಟ್ಟಿರುವ ಪ್ರಸ್ತಾಪಕ್ಕೆ ಟ್ರಂಪ್ ಒಪ್ಪುವುದು ಅನುಮಾನ ಎನ್ನಲಾಗಿದೆ.
3 ಇರಾನ್ ಬೇಡಿಕೆ
1. ಇರಾನ್, ಲೆಬನಾನ್ ಮೇಲಿನ ಸಮರ ಸ್ಥಗಿತ. ಹೋರ್ಮುಜ್ ಮೇಲೆ ಅಮೆರಿಕದ ನಿರ್ಬಂಧ ಪೂರ್ಣ ತೆರವು
2. ಮೊದಲ ಹಂತದ ಪ್ರಸ್ತಾವಕ್ಕೆ ಒಪ್ಪಿಗೆ ಆದರೆ ಹೋರ್ಮುಜ್ ಜಲಸಂಧಿ ನಿರ್ವಹಣೆ ಬಗ್ಗೆ ಮಾತುಕತೆ ಆರಂಭ
3: ಮೊದಲ ಎರಡೂ ಅಂಶಗಳಿಗೆ ಅಮೆರಿಕ ಒಪ್ಪಿದರೆ ಮಾತ್ರ, ಇರಾನ್‌ನ ಪರಮಾಣು ವಿಷಯಗಳ ಬಗ್ಗೆ ಚರ್ಚೆ