ಟೆಹ್ರಾನ್: ಹೋರ್ಮುಜ್ ಜಲಸಂಧಿ ಮೇಲಿನ ನಿಯಂತ್ರಣಕ್ಕಾಗಿ, ಅಮೆರಿಕ ಮತ್ತು ಇರಾನ್ ನಡುವೆ ತಿಕ್ಕಾಟ ಮುಂದುವರಿದಿರುವ ನಡುವೆಯೇ, ಜಲಸಂಧಿಯ ಸಮೀಪ ಇರಾನ್‌ನ ಕರಾವಳಿ ಕಾವಲು ಪಡೆಯು ಶನಿವಾರ ಹಡಗುಗಳ ಸಮೂಹದ ಮೇಲೆ ಎಚ್ಚರಿಕೆಯ ಗುಂಡಿನ ದಾಳಿ ನಡೆಸಿದೆ. ಆ ಗುಂಪಿನಲ್ಲಿ ಟೋಗೋ ಧ್ವಜ ಹೊತ್ತ ರಾಸಾಯನಿಕ ಹಡಗು ಚಿರೋನ್ 7 ಸಹ ಇತ್ತು. ಆ ಹಡಗಿನಲ್ಲಿ 17 ಭಾರತೀಯ ನಾವಿಕರಿದ್ದರು. ಆದರೆ ಅವರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಕೇಂದ್ರ ಬಂದರು ಸಚಿವಾಲಯದ ನಿರ್ದೇಶಕ ಮನ್‌ದೀಪ್ ಸಿಂಗ್ ರಾಂಧಾವಾ ಮಾಹಿತಿ ನೀಡಿದ್ದಾರೆ.
‘17 ಭಾರತೀಯ ನಾವಿಕರನ್ನು ಹೊತ್ತಿದ್ದ ಈ ವಾಣಿಜ್ಯ ಹಡಗು, ಇತರ ಹಡಗುಗಳ ಗುಂಪಿನೊಂದಿಗೆ ಹೋರ್ಮುಜ್ ಸಮೀಪ ಪ್ರಯಾಣಿಸುತ್ತಿತ್ತು. ಇರಾನ್ ಕರಾವಳಿ ಕಾವಲು ಪಡೆ ಈ ಹಡಗುಗಳನ್ನು ನಿಲ್ಲಿಸುವಂತೆ ತಿಳಿಸಿತ್ತು. ಅದಕ್ಕಾಗಿ ಕೆಲವು ಎಚ್ಚರಿಕೆ ಗುಂಡುಗಳನ್ನು ಹಾರಿಸಿತು. ಈ ಘಟನೆ ಒಮಾನ್‌ನ ಶಿನಾಸ್ ಬಂದರಿನ ಹತ್ತಿರ ನಡೆದಿದೆ. ಎಲ್ಲಾ ಭಾರತೀಯ ನಾವಿಕರು ಸುರಕ್ಷಿತರಾಗಿದ್ದಾರೆ. ನಮ್ಮ ಸಚಿವಾಲಯವು ವಿದೇಶಾಂಗ ಸಚಿವಾಲಯ, ಭಾರತೀಯ ದೂತಾವಾಸಗಳು ಮತ್ತು ಸಂಬಂಧಿತ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ’ ಎಂದು ರಾಂಧಾವಾ ತಿಳಿಸಿದ್ದಾರೆ.
ಹಡಗಿನ ಟ್ರ್ಯಾಕಿಂಗ್ ಮಾಹಿತಿ ಪ್ರಕಾರ, ಚಿರೋನ್ 7 ಹಡಗು ಕಳೆದ ಸುಮಾರು 10 ದಿನಗಳಿಂದ ತನ್ನ ಸ್ಥಳವನ್ನು ತೋರಿಸುವ ಟ್ರಾನ್ಸ್‌ಪಾಂಡರ್ ಅನ್ನು ಆನ್ ಮಾಡಿಲ್ಲ. ಕಳೆದ ವಾರ ಇದು ಪರ್ಷಿಯನ್ ಕೊಲ್ಲಿಯಿಂದ (ಹೋರ್ಮುಜ್ ಜಲಸಂಧಿಯ ಪೂರ್ವ ಭಾಗ) ಹೊರಗೆ ಬರಲು ಪ್ರಯತ್ನಿಸುತ್ತಿತ್ತು. ಶಿನಾಸ್ ಬಂದರು ಜಲಸಂಧಿಯ ಇನ್ನೊಂದು ಬದಿಯಲ್ಲಿರುವುದರಿಂದ, ಈ ಹಡಗು ಹೋರ್ಮುಜ್ ಅನ್ನು ದಾಟಿರಬಹುದು ಎಂದು ಅಂದಾಜಿಸಲಾಗಿದೆ. ಈಗ ಹಡಗು ಎಲ್ಲಿದೆ ಮತ್ತು ಅದರ ಸ್ಥಿತಿ ಏನು ಎಂಬುದರ ಬಗ್ಗೆ ಮಾಹಿತಿ ದೊರೆತಿಲ್ಲ. ಗ್ಲೋಬಲ್ ಶಿಪ್ಪಿಂಗ್ ದತ್ತಾಂಶಗಳ ಪ್ರಕಾರ, ಈ ಹಡಗನ್ನು ಹೊಂಡೂರಸ್ ದೇಶದ ಒಂದು ಶಿಪ್ಪಿಂಗ್ ಕಂಪನಿ ನಿರ್ವಹಿಸುತ್ತಿದೆ.