ತೈಲ, ಅನಿಲ ಪೂರೈಕೆ ಸಹಜ ಸ್ಥಿತಿಗೆ ಮರಳುವ ಆಶಾಕಿರಣ

Published : Jun 16, 2026, 01:03 PM IST
 us iran peace deal

ಸಾರಾಂಶ

ಇರಾನ್ ಯುದ್ಧವನ್ನು ಕೊನೆಗೊಳಿಸಿ ಹೋರ್ಮುಜ್ ಜಲಸಂಧಿಯನ್ನು ತೆರೆಯಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ್ದಾರೆ. ಇದು ತೈಲ ಹಾಗೂ ಅನಿಲಕ್ಕೆ ಹೆಚ್ಚಾಗಿ ಮಧ್ಯಪ್ರಾಚ್ಯವನ್ನೇ ನಂಬಿರುವ ಭಾರತದ ಪಾಲಿಗೆ ಆಶಾಕಿರಣವಾಗಿದೆ

 ನ್ಯೂಯಾರ್ಕ್/ನವದೆಹಲಿ: ಇರಾನ್ ಯುದ್ಧವನ್ನು ಕೊನೆಗೊಳಿಸಿ ಹೋರ್ಮುಜ್ ಜಲಸಂಧಿಯನ್ನು ತೆರೆಯಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ್ದಾರೆ. ಇದು ತೈಲ ಹಾಗೂ ಅನಿಲಕ್ಕೆ ಹೆಚ್ಚಾಗಿ ಮಧ್ಯಪ್ರಾಚ್ಯವನ್ನೇ ನಂಬಿರುವ ಭಾರತದ ಪಾಲಿಗೆ ಆಶಾಕಿರಣವಾಗಿದೆ. ಆದಾಗ್ಯೂ ತೈಲ ಹಾಗೂ ಅನಿಲ ಪೂರೈಕೆ ಸಹಜ ಸ್ಥಿತಿಗೆ ಮರಳಲು ಕೆಲವು ತಿಂಗಳುಗಳೇ ಬೇಕಾಗಬಹುದು ಎಂದು ತಜ್ಞರು ಹೇಳಿದ್ದಾರೆ.

‘ಭಾರತಕ್ಕೆ, ಈ ಶಾಂತಿ ಒಪ್ಪಂದವು ಭವಿಷ್ಯದಲ್ಲಿ ಲಾಭದಾಯಕವಾಗಲಿದೆ. ಏಕೆಂದರೆ ಸಂಘರ್ಷವು ಭಾರತವು ಪಶ್ಚಿಮ ಏಷ್ಯಾದ ಮೇಲೆ ಎಷ್ಟು ಅವಲಂಬಿತವಾಗಿತ್ತು ಎಂಬುದನ್ನು ಬಹಿರಂಗಪಡಿಸಿದೆ. ಮಧ್ಯಪ್ರಾಚ್ಯದಿಂದ ಭಾರತ ತನ್ನ ಕಚ್ಚಾ ತೈಲ ಆಮದುಗಳಲ್ಲಿ ಸರಿಸುಮಾರು ಶೇ.50 ರಷ್ಟು, ಎಲ್‌ಪಿಜಿ ಪೂರೈಕೆಗಳಲ್ಲಿ ಶೇ.70 ರಷ್ಟು ಮತ್ತು ಎಲ್‌ಎನ್‌ಜಿ ಆಮದುಗಳಲ್ಲಿ ಸುಮಾರು ಶೇ.90 ರಷ್ಟು ಪಡೆಯುತ್ತದೆ’ ಎಂದು ಜಿಟಿಆರ್‌ಐ ಸಂಸ್ಥಾಪಕ ಅಜಯ್ ಶ್ರೀವಾಸ್ತವ ಹೇಳಿದರು.

‘ಆದರೆ ಯುದ್ಧದಿಂದ ಭಾರತಕ್ಕೆ ಇವುಗಳ ಪೂರೈಕೆ ಅಡಚಣೆ ಆಗಿತ್ತು. ಸುತ್ತಿಬಳಸಿ ಅನೇಕ ದೇಶಗಳಿಂದ ತೈಲ, ಅನಿಲ ತರಿಸಿಕೊಳ್ಳುತ್ತಿತ್ತು. ಇದರಿಂದ ಭಾರತದಲ್ಲಿ ಇಂಧನ ಬೆಲೆ ಏರಿಕೆ ಆಗಿತ್ತು. ಆದರೆ ಸದ್ಯ ಅಲ್ಲದಿದ್ದರೂ ಮುಂದಿನ ದಿನಗಳಲ್ಲಿ ಹೋರ್ಮುಜ್‌ ಮೂಲಕ ಇಂಧನ ಬರಲಿದೆ. ಇದು ಭಾರತದಲ್ಲಿ ಬೆಲೆ ಏರಿಕೆಗೆ ಕಡಿವಾಣ ಹಾಕಬಹುದು’ ಎಂದರು.

ರಾತ್ರೋರಾತ್ರಿ ಬಗೆಹರಿಯಲ್ಲ:

ಶಾಂತಿ ಒಪ್ಪಂದದ ಘೋಷಣೆ ಆಗಿದೆಯಾದರೂ ಹೆಚ್ಚಿನ ತೈಲ, ಅನಿಲ ಸೇರಿ ಇಂಧನ ಪೂರೈಕೆ ಸಮಸ್ಯೆಗಳು ರಾತ್ರೋರಾತ್ರಿ ಬಗೆಹರಿಯುವುದಿಲ್ಲ ಎಂದೂ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

 ತೈಲ ತುಂಬಿದ ಹಡಗುಗಳು 3 ತಿಂಗಳಿಗಿಂತ ಹೆಚ್ಚು ಕಾಲ ಪರ್ಷಿಯನ್ ಕೊಲ್ಲಿಯಲ್ಲಿ ಸಿಕ್ಕಿಹಾಕಿಕೊಂಡಿವೆ

‘ಇಂಧನ ಕಂಪನಿಗಳು ವಿಶ್ವದ ಬೇಡಿಕೆಯನ್ನು ಪೂರೈಸುವ ಹಂತಕ್ಕೆ ಕಾರ್ಯಾಚರಣೆಯನ್ನು ಪುನರಾರಂಭಿಸಲು ಹಲವು ತಿಂಗಳುಗಳು ಬೇಕಾಗಬಹುದು. ಏಕೆಂದರೆ ಕಚ್ಚಾ ತೈಲ ತುಂಬಿದ ಹಡಗುಗಳು 3 ತಿಂಗಳಿಗಿಂತ ಹೆಚ್ಚು ಕಾಲ ಪರ್ಷಿಯನ್ ಕೊಲ್ಲಿಯಲ್ಲಿ ಸಿಕ್ಕಿಹಾಕಿಕೊಂಡಿವೆ. ಹೋರ್ಮುಜ್‌ ಜಲಸಂಧಿ ಮೂಲಕ ವಿಶ್ವದ ಶೇ.20ರಷ್ಟು ತೈಲ/ಅನಿಲ ಪೂರೈಕೆ ಆಗುತ್ತದೆ. ಒಪ್ಪಂದ ಸಂಪೂರ್ಣ ಜಾರಿಗೆ ಬಂದ ನಂತರವಷ್ಟೇ ಇಲ್ಲಿಂದ ಸುರಳೀತ ಸಂಚಾರ ಆರಂಭವಾಗಬಹುದು’ ಎಂದು ಅಮೆರಿಕ ತಜ್ಞರೊಬ್ಬರು ಹೇಳಿದರು.

‘ಮೊದಲು, ಸಿಲುಕಿಕೊಂಡಿರುವ ಹಡಗುಗಳು ಜಲಸಂಧಿಯಿಂದ ನಿರ್ಗಮಿಸಬೇಕಾಗುತ್ತದೆ, ಮತ್ತು ನಂತರ ಹೊಸ ಟ್ಯಾಂಕರ್‌ಗಳನ್ನು ಲೋಡ್ ಮಾಡಬೇಕಾಗುತ್ತದೆ. ಮೇಲಾಗಿ ಯುದ್ಧದ ಕಾರಣ ಇರಾನ್‌ ಸೇರಿ ಹಲವು ದೇಶಗಳಲ್ಲಿನ ತೈಲ ಘಟಕಗಳು ಕಾರ್ಯಾಚರಣೆ ನಿಲ್ಲಿಸಿದ್ದವು. ಅವು ಇನ್ನು ಮೇಲಷ್ಟೇ ಕಾರ್ಯಾಚರಣೆ ಆರಂಭಿಸಲಿವೆ. ಹೀಗಾಗಿ ಸಹಜ ಸ್ಥಿತಿಗೆ ಬರಲು ಹಲವು ತಿಂಗಳು ಬೇಕಾಗುತ್ತದೆ’ ಎಂದು ಎಸ್‌ ಆ್ಯಂಡ್ ಪಿ ಗ್ಲೋಬಲ್‌ ಎನರ್ಜಿ ಮುಖ್ಯಸ್ಥ ಡೇನಿಯಲ್‌ ಇವಾನ್ಸ್ ಹೇಳಿದರು.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಅಮೆರಿಕ- ಇರಾನ್‌ ಕದನ ಅಂತ್ಯ - ವಿಶ್ವಕ್ಕೆ ತೈಲಘಾತ ನೀಡಿದ್ದ ಮಧ್ಯಪ್ರಾಚ್ಯ ಯುದ್ಧಕ್ಕೆ ಬಿತ್ತು ತೆರೆ
ಒಮಾನ್‌ ಬಳಿ ಭಾರತೀಯ ಹಡಗಿನ ಎಂಜಿನ್‌ ವಿಫಲ: ಎಲ್ಲ 14 ಸಿಬ್ಬಂದಿ ರಕ್ಷಣೆ