ಅಬಕಾರಿ ಹಗರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಬಂಧನಕ್ಕೆ ಜರ್ಮನಿ ಹಾಗೂ ಅಮೆರಿಕ ಸರ್ಕಾರಗಳು ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ವಿಶ್ವಸಂಸ್ಥೆ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದೆ.
ಪಿಟಿಐ
ವಿಶ್ವಸಂಸ್ಥೆಅಬಕಾರಿ ಹಗರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಬಂಧನಕ್ಕೆ ಜರ್ಮನಿ ಹಾಗೂ ಅಮೆರಿಕ ಸರ್ಕಾರಗಳು ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ವಿಶ್ವಸಂಸ್ಥೆ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದೆ.
‘ಭಾರತದಲ್ಲಿ ಎಲ್ಲರ ರಾಜಕೀಯ ಹಾಗೂ ನಾಗರಿಕ ಹಕ್ಕುಗಳ ರಕ್ಷಣೆಯಾಗುತ್ತದೆ ಎಂದು ನಿರೀಕ್ಷಿಸುತ್ತೇವೆ. ಚುನಾವಣೆಯಲ್ಲಿ ಎಲ್ಲರೂ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಮತದಾನ ಮಾಡುವ ವಾತಾವರಣವಿರುತ್ತದೆ ಎಂದು ಆಶಿಸುತ್ತೇವೆ’ ಎಂದು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿಯ ವಕ್ತಾರರು ಹೇಳಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ವಕ್ತಾರ ಸ್ಟೆಫಾನಿ ಡುಜರಿಕ್ ಅವರಿಗೆ ಅರವಿಂದ ಕೇಜ್ರಿವಾಲ್ ಅವರ ಬಂಧನ ಹಾಗೂ ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳ ಜಪ್ತಿಯ ಬಗ್ಗೆ ಪ್ರಶ್ನೆ ಕೇಳಲಾಯಿತು.
ಅದಕ್ಕೆ ಉತ್ತರಿಸಿದ ಅವರು, ‘ಭಾರತ ಹಾಗೂ ಚುನಾವಣೆ ನಡೆಯುವ ಯಾವುದೇ ದೇಶದಲ್ಲಿ ಎಲ್ಲಾ ರಾಜಕೀಯ ಹಾಗೂ ನಾಗರಿಕ ಹಕ್ಕುಗಳ ರಕ್ಷಣೆಯಾಗುತ್ತದೆ ಮತ್ತು ಚುನಾವಣೆ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಯುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ’ ಎಂದು ಹೇಳಿದರು.
ಕೇಜ್ರಿವಾಲ್ ಅವರ ಬಂಧನ ಹಾಗೂ ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳ ಜಪ್ತಿಗೆ ಜರ್ಮನಿ ಹಾಗೂ ಅಮೆರಿಕದ ಆಕ್ಷೇಪ ಮತ್ತು ಅದಕ್ಕೆ ಭಾರತ ರಾಜತಾಂತ್ರಿಕವಾಗಿ ಪ್ರತಿಭಟನೆ ಸಲ್ಲಿಸಿದ ಬೆನ್ನಲ್ಲೇ ವಿಶ್ವಸಂಸ್ಥೆಯಿಂದ ಈ ಪ್ರತಿಕ್ರಿಯೆ ಬಂದಿರುವುದು ಮಹತ್ವ ಪಡೆದಿದೆ.