ಇಸ್ರೇಲ್‌ ಮೇಲೆ ಇರಾನ್‌ ದಾಳಿ: ಭಾರತ ಖಂಡನೆ

KannadaprabhaNewsNetwork |  
Published : Apr 15, 2024, 01:24 AM ISTUpdated : Apr 15, 2024, 04:04 AM IST
ಇರಾನ್‌ | Kannada Prabha

ಸಾರಾಂಶ

ಇರಾನ್ ದೇಶವು ಇಸ್ರೇಲ್‌ ಮೇಲೆ ಭಾನುವಾರ ವಾಯುದಾಳಿ ಮಾಡಿದ್ದನ್ನು ಭಾರತ ಖಂಡಿಸಿದೆ ಹಾಗೂ ಕೂಡಲೇ ಪರಿಸ್ಥಿತಿ ತಿಳಿಗೊಳಿಸಬೇಕು ಎಂದು ಮನವಿ ಮಾಡಿದೆ.

ನವದೆಹಲಿ: ಇರಾನ್ ದೇಶವು ಇಸ್ರೇಲ್‌ ಮೇಲೆ ಭಾನುವಾರ ವಾಯುದಾಳಿ ಮಾಡಿದ್ದನ್ನು ಭಾರತ ಖಂಡಿಸಿದೆ ಹಾಗೂ ಕೂಡಲೇ ಪರಿಸ್ಥಿತಿ ತಿಳಿಗೊಳಿಸಬೇಕು ಎಂದು ಮನವಿ ಮಾಡಿದೆ.

ಭಾರತದ ವಿದೇಶಾಂಗ ಸಚಿವಾಲಯ ಈ ಬಗ್ಗೆ ಹೇಳಿಕೆ ನೀಡಿ, ‘ಈ ಪರಿಸ್ಥಿತಿಯನ್ನು ತಿಳಿಗೊಳಿಸಲು ಕರೆ ನೀಡುತ್ತೇವೆ. ಹಿಂಸಾಚಾರದ ಮಾರ್ಗದಲ್ಲಿ ಹೋಗುವ ಬದಲು ರಾಜತಾಂತ್ರಿಕ ಮಾರ್ಗದಲ್ಲಿ ಸಮಸ್ಯೆಯನ್ನು ಬಗೆ ಹರಿಸಿಕೊಳ್ಳಿ. ಈ ಘಟನೆಯನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ’ ಎಂದಿದೆ.

ಅಲ್ಲದೆ, ‘ನಮ್ಮ ರಾಯಭಾರಿಗಳು ಅಲ್ಲಿರುವ ಭಾರತೀಯರ ಜೊತೆ ನಿಕಟ ಸಂಪರ್ಕದಲ್ಲಿದ್ದಾರೆ. ಈ ಸಂದರ್ಭದಲ್ಲಿ ಇದರ ಅವಶ್ಯಕತೆಯಿದೆ. ಈ ಪ್ರದೇಶದಲ್ಲಿ ಜನರ ಸ್ಥಿರತೆ ಮತ್ತು ಭದ್ರತೆಯನ್ನು ಕಾಯ್ದುಕೊಳ್ಳಲಾಗಿದೆ’ ಎಂದು ಇಲಾಖೆ ಹೇಳಿದೆ.

ತಾಳ್ಮೆ ವಹಿಸಿ, ಸುರಕ್ಷತಾ ನಿಯಮ ಪಾಲಿಸಿ: ಭಾರತ ಸೂಚನೆ

ನವದೆಹಲಿ: ಇಸ್ರೇಲ್ ಮೇಲೆ ಇರಾನ್ ಡ್ರೋನ್ ಕ್ಷಿಪಣಿ ದಾಳಿ ನಡೆಸುತ್ತಿದ್ದಂತೆ ಎರಡೂ ದೇಶಗಳ ನಡುವೆ ಸೃಷ್ಟಿಯಾಗಿದ್ದ ಯುದ್ಧ ಭೀತಿ ಮತ್ತಷ್ಟು ಹೆಚ್ಚಾಗಿದೆ. ಇಸ್ರೇಲ್ ನೆಲದಲ್ಲಿ ಹಲವಾರು ಭಾರತೀಯರು ನೆಲೆಸಿದ್ದಾರೆ. ಈ ದಾಳಿಯಿಂದ ಅವರೆಲ್ಲರೂ ಆತಂಕಕ್ಕೆ ಒಳಗಾಗಿದ್ದಾರೆ.

ಈ ಸಂದರ್ಭದಲ್ಲಿ ಕೇಂದ್ರ ವಿದೇಶಾಂಗ ಸಚಿವಾಲಯ ಅವರಿಗೆ ದೈರ್ಯ ತುಂಬುವ ಕೆಲಸವನ್ನು ಮಾಡಿದ್ದು, ಕೆಲವು ಸೂಚನೆಗಳನ್ನು ನೀಡಿದೆ.‘ಶಾಂತವಾಗಿರಿ , ಅಲ್ಲಿನ ಸ್ಥಳೀಯಾಡಳಿತ ನೀಡುವ ಸುರಕ್ಷತೆಯ ನಿಯಮಗಳನ್ನು ಪಾಲಿಸಿ ’ಎಂದಿದೆ. ಇಸ್ರೇಲ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ದೂರವಾಣಿ ಸಂಖ್ಯೆಯನ್ನು ನೀಡಿದ್ದು, ಎಲ್ಲರೂ ರಾಯಭಾರಿ ಕಛೇರಿಗಳಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳುವಂತೆ ಸೂಚಿಸಿದೆ.

ಇಸ್ರೇಲ್‌ಗೆ ಏರ್‌ ಇಂಡಿಯಾ ವಿಮಾನ ಹಾರಾಟ ಸ್ಥಗಿತನವದೆಹಲಿ: ಇರಾನ್‌-ಇರಾನ್‌ ಯುದ್ಧದ ಕಾರಣ ಇಸ್ರೇಲ್‌-ಭಾರತದ ನಡುವೆ ವಿಮಾನ ಹಾರಾಟವನ್ನ ತಾತ್ಕಾಲಿಕವಾಗಿ ಸ್ಥಗಿತ ಮಾಡುತ್ತೇವೆ ಏರ್‌ ಇಂಡಿಯಾ ಭಾನುವಾರ ತಿಳಿಸಿದೆ.

ದೆಹಲಿ ಹಾಗೂ ಇಸ್ರೇಲ್‌ನ ಟೆಲ್ ಅವೀವ್ ನಡುವಿನ ನೇರ ವಿಮಾನ ಸಂಚಾರವನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗುವುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇಸ್ರೇಲ್‌ ಮೇಲೆ ಹಮಾಸ್ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಕಳೆದ ಅಕ್ಟೋಬರ್‌ನಲ್ಲಿ ಟೆಲ್ ಅವೀವ್‌ಗೆ ಹೋಗುವ ಹಾಗೂ ಅಲ್ಲಿಂದ ಬರುವ ವಿಮಾನಗಳನ್ನು ಸ್ಥಗಿತಗೊಳಿಸಿತ್ತು. ಇದಾದ ನಂತರ ಕಳೆದ ಮಾರ್ಚ್‌ ತಿಂಗಳಲ್ಲಿ ಅವಿವ್‌ಗೆ ವಿಮಾನ ಹಾರಾಟ ಪುನಾರಂಭಿಸಿತ್ತು.

ಇರಾನ್ ವಶದಲ್ಲಿರುವ ಹಡಗಲ್ಲಿ ಕೇರಳದ ಯುವಕಕಲ್ಲಿಕೋಟೆ ( ಕೇರಳ): ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆಯ ವಾತಾವರಣದ ನಡುವೆಯೇ ಇರಾನ್ ಮಿಲಿಟರಿ ಪಡೆ ಶನಿವಾರ 17 ಭಾರತೀಯ ಸಿಬ್ಬಂದಿ ಇದ್ದ ‘ಎಂಎಸ್ ಸಿ ಆರೀಸ್ ’ ಹೆಸರಿನ ಇಸ್ರೇಲಿ ಹಡಗನ್ನು ತನ್ನ ವಶದಲ್ಲಿ ಇರಿಸಿಕೊಂಡಿದೆ, ಹೀಗಾಗಿ ಈ 17 ಭಾರತೀಯರ ಕುಟುಂಬಗಳಲ್ಲಿ ಆತಂಕ ಸೃಷ್ಟಿಯಾಗಿದೆ. ಕೇರಳದ ಶ್ಯಾಮನಾಥ್ ಎನ್ನುವ ಯುವಕ ಇಸ್ರೇಲ್ ನಲ್ಲಿ ‘ಎಂಎಸ್ ಸಿ ಆರೀಸ್ ’ ಶಿಪ್ಪಿಂಗ್ ಕಂಪೆನಿಯಲ್ಲಿ 10 ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಶನಿವಾರವಷ್ಟೇ ಪೋಷಕರಾದ ವಿಶ್ವನಾಥ್ ,ಶ್ಯಾಮಲಾರ ಜೊತೆ ಫೋನ್ ನಲ್ಲಿ ಮಾತನಾಡಿದ್ದ. ಆದರೆ ಬಳಿಕ ಶಿಪ್ ಕಂಪೆನಿಯ ಅಧಿಕಾರಿಗಳು ಕರೆ ಮಾಡಿ , ಶ್ಯಾಮನಾಥ್‌ನನ್ನು ಇರಾನ್ ಮಿಲಿಟರಿ ಪಡೆ ತನ್ನ ವಶಕ್ಕೆ ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.ಈ ವಿಚಾರ ಗೊತ್ತಾಗುತ್ತಿದ್ದಂತೆ ಯುವಕನ ಹೆತ್ತವರು ಆತಂಕಕ್ಕೆ ಒಳಗಾಗಿದ್ದು , ಮಗ ಸುರಕ್ಷಿತವಾಗಿ ಮನೆ ಸೇರಲಿಯೆಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಇನ್ನು ಸೆರೆಯಾದ ಹಡಗಿನಲ್ಲಿ ಕೇರಳದ ಪಾಲಕ್ಕಡ್ ಮತ್ತು ವಯನಾಡ್ ಇಬ್ಬರು ಯುವಕರು ಕೂಡ ಸೇರಿದ್ದಾರೆ.

PREV

Recommended Stories

ಪಿಒಕೆನಲ್ಲಿ ಪಹಲ್ಗಾಂ ಉಗ್ರನ ಸಾಂಕೇತಿಕ ಅಂತ್ಯಕ್ರಿಯೆ!
ಶ್ವೇತಭವನ ವಕ್ತಾರೆಯ ತುಟಿ, ಸೌಂದರ್ಯ ಹೊಗಳಿದ ಟ್ರಂಪ್!