ನಮ್ಮ ಮೇಲೆ ದಾಳಿಗೆ ಇರಾನ್‌ನಿಂದ ಹಮಾಸ್‌ಗೆ ತರಬೇತಿ, ಹಣ ಟೆಲ್ ಅವಿವ್: ಕಳೆದ ಅ.7 ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ಏಕಾಏಕಿ ದಾಳಿ ಮಾಡುವ ಮುನ್ನವೇ ಇರಾನ್ ನೇರವಾಗಿ ಹಮಾಸ್ ಉಗ್ರರಿಗೆ ಶಸ್ತ್ರಾಸ್ತ್ರ, ಹಣ, ತರಬೇತಿ ಮತ್ತು ತಾಂತ್ರಿಕ ಜ್ಞಾನ ನೀಡುವ ಮೂಲಕ ಸಹಾಯ ಮಾಡಿದೆ ಎಂದು ಇಸ್ರೇಲ್ ಆರೋಪಿಸಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಸ್ರೇಲ್ ಸೇನೆಯ ಉನ್ನತ ಅಧಿಕಾರಿಗಳು ‘ಯುದ್ಧದ ಮೊದಲೇ ಹಮಾಸ್‌ಗೆ ಇರಾನ್ ಎಲ್ಲ ರೀತಿಯ ಸಹಾಯ ಮಾಡಿದೆ. ಈಗಲೂ ಇಸ್ರೇಲ್ ವಿರುದ್ಧ ಗುಪ್ತಚರ ಮತ್ತು ಆನ್‌ಲೈನ್‌ನಲ್ಲಿ ಪ್ರಚೋದನೆ ನೀಡುವ ಮೂಲಕ ಹಮಾಸ್‌ಗೆ ಇರಾನ್ ನೆರವು ಮುಂದುವರೆದಿದೆ’ ಎಂದು ಆರೋಪಿಸಿದರು. ಆದರೆ, ಹಮಾಸ್‌ಗೆ ತಾನು ಹಣ, ಶಸ್ತ್ರಾಸ್ತ್ರ ನೀಡಿರುವುದು ನಿಜವಾದರೂ ಇಸ್ರೇಲ್ ಮೇಲಿನ ದಾಳಿಯಲ್ಲಿ ತನ್ನ ಪಾತ್ರವನ್ನು ಸಂಪೂರ್ಣವಾಗಿ ಅಲ್ಲಗಳೆದಿದೆ ಎನ್ನಲಾಗುತ್ತಿದೆ. ಮೊದಲಿನಿಂದಲೂ ಇಸ್ರೇಲ್ ಮತ್ತು ಇರಾನ್ ಬದ್ಧವೈರಿಗಳಾಗಿದ್ದು, ಪ್ಯಾಲೆಸ್ತೀನ್ ಮತ್ತು ಇಸ್ರೇಲ್ ಯುದ್ಧದಲ್ಲಿ ಇರಾನ್, ಪ್ಯಾಲೆಸ್ತೀನ್‌ಗೆ ಬೆಂಬಲ ಸೂಚಿಸಿದೆ.