ಇಸ್ರೇಲ್‌-ಹಮಾಸ್‌ಗೆ ಸೌದಿ ರಾಜಕುವರನ ತರಾಟೆ

KannadaprabhaNewsNetwork | Published : Oct 23, 2023 12:15 AM

ಸಾರಾಂಶ

ಇಸ್ರೇಲ್‌-ಹಮಾಸ್‌ ಸಂಘರ್ಷ ತಾರಕಕ್ಕೇರುತ್ತಿರುವ ನಡುವೆಯೇ ಪ್ರಮುಖ ಕೊಲ್ಲಿ ರಾಷ್ಟ್ರ ಸೌದಿ ಅರೇಬಿಯಾದ ರಾಜಕುಮಾರ ತುರ್ಕಿ ಆಲ್‌ ಫೈಜ಼ಲ್‌ ಅವರು ಈ ಯುದ್ಧದಲ್ಲಿ ಯಾರೂ ವಿಜಯಶಾಲಿಗಳಲ್ಲ. ಎಲ್ಲರೂ ಕೇವಲ ಸಂತ್ರಸ್ತರು ಎಂದು ಯುದ್ಧದಲ್ಲಿ ತೊಡಗಿರುವ ಉಭಯ ಬಣಗಳ ಬಗ್ಗೆ ಕಿಡಿಕಾರಿದ್ದಾರೆ.
ಇಸ್ರೇಲ್‌-ಹಮಾಸ್‌ಗೆ ಸೌದಿ ರಾಜಕುವರನ ತರಾಟೆ ಇಲ್ಲಿ ಯಾರೂ ವಿಜಯಶಾಲಿಯಲ್ಲ, ಕೇವಲ ಸಂತ್ರಸ್ತರು ಮಾತ್ರ ಹಮಾಸ್‌ ತನ್ನ ಉದ್ದೇಶ ಈಡೇರಿಕೆಗೆ ಭಾರತದಂತೆ ಸ್ವಾತಂತ್ರ್ಯ ಚಳವಳಿ ನಡೆಸಬೇಕು ರಕ್ತಪಾತ ಮಾರ್ಗ ನಿಲ್ಲಿಸುವಂತೆ ರಾಜಕುವರ ಫೈಜಲ್‌ ಆಗ್ರಹ ನವದೆಹಲಿ: ಇಸ್ರೇಲ್‌-ಹಮಾಸ್‌ ಸಂಘರ್ಷ ತಾರಕಕ್ಕೇರುತ್ತಿರುವ ನಡುವೆಯೇ ಪ್ರಮುಖ ಕೊಲ್ಲಿ ರಾಷ್ಟ್ರ ಸೌದಿ ಅರೇಬಿಯಾದ ರಾಜಕುಮಾರ ತುರ್ಕಿ ಆಲ್‌ ಫೈಜ಼ಲ್‌ ಅವರು ಈ ಯುದ್ಧದಲ್ಲಿ ಯಾರೂ ವಿಜಯಶಾಲಿಗಳಲ್ಲ. ಎಲ್ಲರೂ ಕೇವಲ ಸಂತ್ರಸ್ತರು ಎಂದು ಯುದ್ಧದಲ್ಲಿ ತೊಡಗಿರುವ ಉಭಯ ಬಣಗಳ ಬಗ್ಗೆ ಕಿಡಿಕಾರಿದ್ದಾರೆ. ಅಮೆರಿಕದ ವಿಶ್ವವಿದ್ಯಾನಿಲಯವೊಂದರಲ್ಲಿ ಮಾತನಾಡುತ್ತಾ, ‘ವಿದೇಶಿ ಆಕ್ರಮಣವನ್ನು ನಿಗ್ರಹಿಸಲು ರಕ್ತಪಾತವೊಂದೇ ಮಾರ್ಗವಲ್ಲ. ಭಾರತದಲ್ಲಿ ಸ್ವಾತಂತ್ರ್ಯ ಚಳವಳಿಯಲ್ಲಿ ಅಸಹಕಾರ ಚಳುವಳಿಯನ್ನು ವ್ಯವಸ್ಥಿತವಾಗಿ ಮತ್ತು ಶಾಂತಿಯುತವಾಗಿ ಆಯೋಜಿಸುವ ಮೂಲಕ ವಿದೇಶೀ ಆಕ್ರಮಣಕಾರರು ದೇಶ ತ್ಯಜಿಸುವಂತೆ ಮಾಡಿದರು. ಈ ಮಾರ್ಗ ಭಾರತವಲ್ಲದೇ ಯುರೋಪಿಯನ್‌ ದೇಶಗಳಲ್ಲೂ ಯಶಸ್ವಿಯಾಗಿ ಪ್ರಯೋಗವಾಗಿದೆ ಇದೇ ಮಾರ್ಗವನ್ನು ಇಸ್ರೇಲ್‌-ಹಮಾಸ್‌ ಆಡಳಿತಗಳೂ ಅನುಸರಿಸುವುದು ಸಮಾಜದ ದೃಷ್ಟಿಯಿಂದ ಆರೋಗ್ಯಕರ. ಇಲ್ಲದಿದ್ದರೆ ಸಾವಿರಾರು ಜನರ ರಕ್ತಪಾತ ಹಾಗೂ ಸಾಮಾಜಿಕ ಅಶಾಂತಿಯನ್ನು ಕಾಣಬೇಕಾಗುತ್ತದೆ’ ಎಂದರು. ಇದೇ ವೇಳೆ ತಮ್ಮ ಭಾಷಣದಲ್ಲಿ ಹಮಾಸ್‌ ಹಾಗೂ ಇಸ್ರೇಲ್‌ ಮಾಡಿರುವ ದುಷ್ಕೃತ್ಯಗಳನ್ನು ಎಳೆಎಳೆಯಾಗಿ ವಿಶ್ಲೇಷಿಸಿ ಖಂಡಿಸಿದರು. ರಾಜಕುಟುಂಬದಲ್ಲಿ ಜನಿಸಿರುವ ಫೈಜ಼ಲ್‌ (78), 24 ವರ್ಷಗಳ ಕಾಲ ಸೌದಿ ಅರೇಬಿಯಾದ ಗುಪ್ತಚರ ವಿಭಾಗದ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದು ಸದ್ಯ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.

Share this article