ಜಗತ್ತಿನ ಅತಿದೊಡ್ಡ ಸಾಫ್ಟ್‌ವೇರ್ ಕಂಪನಿಯಾದ ಮೈಕ್ರೋಸಾಫ್ಟ್‌ನ ಕ್ಲೌಡ್ ಸೇವೆಗಳಲ್ಲಿ ಶುಕ್ರವಾರ ಭಾರೀ ವ್ಯತ್ಯಯ ಕಂಡುಬಂದಿದ್ದು, ಜಗತ್ತಿನಾದ್ಯಂತ ಕೋಟ್ಯಂತರ ಜನರು ಸಮಸ್ಯೆಗೆ ತುತ್ತಾಗುವಂತಾಗಿದೆ.
ನವದೆಹಲಿ/ವಾಷಿಂಗ್ಟನ್: ಜಗತ್ತಿನ ಅತಿದೊಡ್ಡ ಸಾಫ್ಟ್‌ವೇರ್ ಕಂಪನಿಯಾದ ಮೈಕ್ರೋಸಾಫ್ಟ್‌ನ ಕ್ಲೌಡ್ ಸೇವೆಗಳಲ್ಲಿ ಶುಕ್ರವಾರ ಭಾರೀ ವ್ಯತ್ಯಯ ಕಂಡುಬಂದಿದ್ದು, ಜಗತ್ತಿನಾದ್ಯಂತ ಕೋಟ್ಯಂತರ ಜನರು ಸಮಸ್ಯೆಗೆ ತುತ್ತಾಗುವಂತಾಗಿದೆ. ಮೈಕ್ರೋಸಾಫ್ಟ್‌ನ ಕ್ರೌಡ್‌ಸ್ಟ್ರೈಕ್ ಸಂಸ್ಥೆ (ಸೈಬರ್ ಭದ್ರತಾ ಸಾಫ್ಟ್‌ವೇರ್ ಸಂಸ್ಥೆ), ಬಗ್ ಒಂದನ್ನು ತೆಗೆದು ಹಾಕಿ ಅಪ್ಡೇಟ್ ಮಾಡುವ ವೇಳೆ ಈ ಸಮಸ್ಯೆ ಸೃಷ್ಟಿಯಾಗಿದೆ. ಪರಿಣಾಮ ವಿಮಾನಯಾನ, ಬ್ಯಾಂಕಿಂಗ್, ಷೇರುಪೇಟೆ, ಮಾಧ್ಯಮ ಸಂಸ್ಥೆಗಳು ಸೇರಿದಂತೆ ಮೈಕ್ರೋಸಾಫ್ಟ್‌ನ ಕ್ಲೌಡ್ ಸೇವೆ ಬಳಸುವ ಎಲ್ಲಾ ಉದ್ಯಮಗಳು ಪರಿಣಾಮವನ್ನು ಎದುರಿಸಿವೆ. ಇದನ್ನು ಈವರೆಗಿನ ಅತಿ ದೊಡ್ಡ ಐಟಿ ಸಮಸ್ಯೆ ಎಂದು ಬಣ್ಣಿಸಲಾಗಿದೆ.
ಸಮಸ್ಯೆಗೆ ತುತ್ತಾದ ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ಬ್ಲ್ಯೂಸ್ಕ್ರೀನ್ ಆಪ್ ಡೆತ್ (ವಿಂಡೋಸ್ ತಂತಾನೆ ಆಫ್ ಆಗಿ ಮತ್ತೆ ರೀಸ್ಟಾರ್ಟ್) ಸಂದೇಶ ಕಾಣಿಸಿಕೊಂಡು, ಬಳಕೆದಾರರು ಹೈರಾಣುಗುವಂತೆ ಮಾಡಿದೆ.
ಮಧ್ಯಾಹ್ನ 12 ಗಂಟೆ ವೇಳೆಗೆ ಈ ಸಮಸ್ಯೆ ಆರಂಭವಾಗಿದ್ದು, ರಾತ್ರಿ 8ರ ವೇಳೆಗೆ ಬಗೆಹರಿದಿದೆ. ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಮೈಕ್ರೋಸಾಫ್ಟ್, ‘ತೊಂದರೆಗೊಳಗಾದ ನಮ್ಮ ಎಲ್ಲ ಆ್ಯಪ್ ಹಾಗೂ ಸೇವೆಗಳನ್ನು ಸರಿಪಡಿಸಲಾಗಿದೆ. ಇನ್ನು ಬಾಧಿತ ಸೇವೆಗಳು ಸರಿ ಹೋಗಲಿವೆ ಎಂಬ ಅಶಾಭಾವನೆ ಇದೆ’ ಎಂದು ಹೇಳಿದೆ.
ಆದಾಗ್ಯೂ ಒಟ್ಟಾರೆ ಈ ವಿದ್ಯಮಾನದಿಂದ ಕ್ರೌಡ್ ಸ್ಟ್ರೈಕ್ ಕಂಪನಿಗೆ 1.34 ಲಕ್ಷ ಕೋಟಿ ರು. ಹಾಗೂ ಮೈಕ್ರೋಸಾಫ್ಟ್ ಕಂಪನಿಗೆ 2 ಲಕ್ಷ ಕೋಟಿ ರು.ನಷ್ಟು ಮಾರುಕಟ್ಟೆಯಲ್ಲಿ ನಷ್ಟವಾಗಿದೆ. ಇದೇ ವೇಳೆ, ಮೈಕ್ರೋಸಾಫ್ಟ್ ಸೇವೆಯನ್ನೇ ನಂಬಿದ್ದ ವಿವಿಧ ವಲಯಗಳ ಸಾವಿರಾರು ಕಂಪನಿಗಳು ಲಕ್ಷಾಂತರ ಕೋಟಿ ರು. ಹಾನಿ ಅನುಭವಿಸಿವೆ.
ಬೆಳಗ್ಗೆಯಿಂದಲೇ ಸಮಸ್ಯೆ:
ಶುಕ್ರವಾರ ಬೆಳಗ್ಗೆಯಿಂದಲೇ ಈ ಸಮಸ್ಯೆ ಕಾಣಿಸಿಕೊಂಡ ಪರಿಣಾಮ ಮೊದಲು ಅಮೆರಿಕ, ಆಸ್ಟ್ರೇಲಿಯಾದಲ್ಲಿ ನೂರಾರು ವಿಮಾನಗಳ ಸಂಚಾರ ರದ್ದು ಮಾಡಲಾಯಿತು. ನೂರಾರು ವಿಮಾನಗಳ ಸಂಚಾರದ ಸಮಯದಲ್ಲಿ ಬದಲಾವಣೆ ಮಾಡಲಾಯಿತು. ಭಾರತದಲ್ಲೂ ಇಂಡಿಗೋ, ಸ್ಪೈಸ್‌ಜೆಟ್, ಅಕಾಸಾ ಏರ್, ವಿಸ್ತಾರಾ ಮೊದಲಾದ ವಿಮಾನಗಳ ಕಂಪನಿಗಳು ಇದರ ಪರಿಣಾಮಕ್ಕೆ ತುತ್ತಾದವು. ಹೀಗಾಗಿ ಟಿಕೆಟ್ ಬುಕಿಂಗ್, ಚೆಕ್ ಇನ್ ಮತ್ತು ಸಂಚಾರದ ಮಾಹಿತಿ ಸೇವೆಗೆ ತೊಂದರೆ ಆಯಿತು. ಹೀಗಾಗಿ ಪ್ರಯಾಣಿಕರ ಚೆಕ್ ಇನ್ ಪ್ರಕ್ರಿಯೆಯನ್ನು ವಿಮಾನಯಾನ ಕಂಪನಿಗಳು ಮ್ಯಾನ್ಯುಯಲ್ ಆಗಿ ನಡೆಸುವಂತಾಯಿತು.
ಕೆಲವು ಬ್ಯಾಂಕ್‌ಗಳು, ಮಾಧ್ಯಮಗಳು, ಷೇರುಪೇಟೆ, ಸಾಫ್ಟ್‌ವೇರ್ ಕಂಪನಿಗಳು ಹಾಗೂ ಮೈಕ್ರೋಸಾಫ್ಟ್ ಮೇಲೆ ಅವಲಂಬಿತವಾಗಿರುವ ಅನೇಕ ಕಂಪನಿಗಳು ಸೇವೆಯಲ್ಲಿ ಭಾರಿ ವ್ಯತ್ಯಯ ಅನುಭವಿಸಿದವು.
ಯಾವ್ಯಾವ ವಲಯಗಳಿಗೆ ಸಮಸ್ಯೆ?
ವಿಮಾನಯಾನ
ಬ್ಯಾಂಕಿಂಗ್
ಷೇರುಪೇಟೆ
ಮಾಧ್ಯಮ
ಇ ಕಾಮರ್ಸ್ ತಾಣಗಳು
ಜಿ ಮೇಲ್‌ಇನ್‌ಸ್ಟಾಗ್ರಾಂ
ಸಾಫ್ಟ್‌ವೇರ್ ಕಂಪನಿಗಳು
ಕ್ಲೌಡ್ ಸೇವೆ ಬಳಸುವ ವಲಯಗಳು
ಯಾವ ಆ್ಯಪ್ ಬಳಸಲು ಸಮಸ್ಯೆ? ಮೈಕ್ರೋಸಾಫ್ಟ್ 364, ಮೈಕ್ರೋಸಾಫ್ಟ್ ಟೀಮ್, ಮೈಕ್ರೋಸಾಫ್ಟ್ ಅಝೂರ್
ಏನಿದು ಕ್ರೌಡ್‌ಸ್ಟ್ರೈಕ್ ಸಮಸ್ಯೆ?
ಇದು ಬಳಕೆದಾರರಿಗೆ ಸೈಬರ್ ದಾಳಿಯಿಂದ ಹಿಡಿದು ನಾನಾ ರೀತಿಯ ಸೈಬರ್ ಭದ್ರತೆ ನೀಡುವ ಸಂಸ್ಥೆ. ಮೈಕ್ರೋಸಾಫ್ಟ್‌ನ ಕ್ಲೌಡ್ ಸೇವೆಗಳಿಗೆ ಇದು ಭದ್ರತೆ ನೀಡುತ್ತದೆ. ಹೀಗೆ ಭದ್ರತೆ ನೀಡುವ ಕ್ರೌಡ್‌ಸ್ಟ್ರೈಕ್ ಸಾಫ್ಟ್‌ವೇರ್, ಸಮಸ್ಯೆಯೊಂದನ್ನು ನಿವಾರಣೆ ಮಾಡಿ, ಆ ಸಂಬಂಧ ಸಾಫ್ಟ್‌ವೇರ್ ಅಪ್ಡೇಟ್ ಮಾಡಿದಾಗ ಅದರಲ್ಲಿ ಸಮಸ್ಯೆ ಕಾಣಿಸಿಕೊಂಡು, ಇಡೀ ಮೈಕ್ರೋಸಾಫ್ಟ್ ಕ್ಲೌಡ್ ಸೇವೆಗಳಲ್ಲಿ ವ್ಯತ್ಯಯಕ್ಕೆ ಕಾರಣವಾಗಿದೆ.
ಏನಿದು ಬ್ಲ್ಕೂಸ್ಕ್ರೀನ್ ಆಫ್ ಡೆತ್?
ಇದು ವಿಂಡೋಸ್ ಆಪರೇಟಿಂಗ್ ಸಿಸ್ಟಮ್‌ನಲ್ಲಿ ತೊಂದರೆ ಕಾಣಿಸಿಕೊಂಡಾಗ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಪರದೆ ಮೇಲೆ ಮೂಡುವ ಸಂದೇಶ. ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಸುರಕ್ಷಿತವಾಗಿ ಕಾರ್ಯನಿರ್ವಹಣೆ ಮಾಡುವುದು ಅಸಾಧ್ಯ ಎಂಬ ಪರಿಸ್ಥಿತಿ ನಿರ್ಮಾಣವಾದಾಗ ಸಿಸ್ಟಮ್ ಕ್ರ್ಯಾಶ್ ಆಗಿ ಈ ಸಂದೇಶ ಪರದೆ ಮೇಲೆ ಮೂಡುತ್ತದೆ. ಹೀಗೆ ಸಿಸ್ಟಮ್ ಕ್ರ್ಯಾಶ್ ಆದ ವೇಳೆ ಕಂಪ್ಯೂಟರ್ ತಂತಾನೆ ಆಫ್ ಆಗುತ್ತದೆ ಮತ್ತು ರೀಸ್ಟಾರ್ಟ್ ಆಗುತ್ತದೆ. ಈ ವೇಳೆ ಸೇವ್ ಮಾಡದೇ ಇರುವ ಡಾಟಾ ನಷ್ಟವಾಗುತ್ತದೆ.