ಹೈಫಾ: ‘ಇಸ್ರೇಲ್‌ನ ಬಂದರು ನಗರಿ ಹೈಫಾಗೆ ಒಟ್ಟೊಮನ್ನರಿಂದ ಸ್ವಾತಂತ್ರ್ಯ ಕೊಡಿಸಿದ್ದು ಬ್ರಿಟಿಷರಲ್ಲ, ಭಾರತೀಯರು. ಇದನ್ನು ಶಾಲೆಯ ಪಠ್ಯಪುಸ್ತಕಗಳಲ್ಲೂ ಸೇರ್ಪಡೆ ಮಾಡಲಾಗುವುದು’ ಎಂದು ಹೈಫಾ ನಗರದ ಮೇಯರ್ ಯೋನಾ ಯಾಹವ್ ಹೇಳಿದ್ದಾರೆ. ಇದರೊಂದಿಗೆ ಈ ಸಮರದಲ್ಲಿ ಭಾಗಿಯಾಗಿದ್ದ ಮೈಸೂರಿನ ಅಶ್ವದಳ ಸೇರಿ ದೇಶದ ಇತರೆ ಭಾಗಗಳ ಅಶ್ವದಳಗಳ ಹೆಸರು ಕೂಡ ಪಠ್ಯದ ಭಾಗವಾಗಲಿದೆ.
ಯುದ್ಧದಲ್ಲಿ ಮಡಿದ ಯೋಧರಿಗೆ ಹೈಫಾದಲ್ಲಿ ನಿರ್ಮಿಸಿರುವ ಸ್ಮಾರಕದಲ್ಲಿ ಸೋಮವಾರ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ಯೋನಾ, ‘ನಮ್ಮ ಶಾಲಾ ಪಠ್ಯದಲ್ಲಿ ಹೈಫಾ ನಗರವನ್ನು ವಿಮುಕ್ತಿಗೊಳಿಸಿದ್ದು ಬ್ರಿಟಿಷರು ಎಂದೇ ಬೋಧಿಸಲಾಗಿತ್ತು. ಆದರೆ ಇತಿಹಾಸಕಾರರೊಬ್ಬರು ತಾವು ನಡೆಸಿದ ಅಧ್ಯಯನದ ಅಂಶಗಳನ್ನು ಮುಂದಿಟ್ಟು, ಹೈಫಾ ನಗರಕ್ಕೆ ಸ್ವಾತಂತ್ರ್ಯ ನೀಡಿದ್ದು ಭಾರತೀಯರೇ ಹೊರತು ಬ್ರಿಟೀಷರಲ್ಲ ಎಂದು ಮಾಹಿತಿ ನೀಡಿದ್ದರು. ಹೀಗಾಗಿ ದಶಕಗಳಿಂದ ಪಠ್ಯದಲ್ಲಿ ಸೇರಿರುವ ಬ್ರಿಟಿಷರು ಎಂಬ ಪದವನ್ನು ತೆಗೆದು ಅದರಲ್ಲಿ ಭಾರತೀಯರು ಎಂದು ಸೇರಿಸಲಾಗುವುದು’ ಎಂದು ಹೇಳಿದ್ದಾರೆ.
ಮೊದಲ ಮಹಾಯುದ್ಧದ ವೇಳೆ ಭಾರತೀಯರು ಬ್ರಿಟನ್ ಆಳ್ವಿಕೆಗೆ ಒಳಪಟ್ಟಿದ್ದ ಕಾರಣ, ಇಸ್ರೇಲಿ ಪಠ್ಯಗಳಲ್ಲಿ ಭಾರತದ ಯೋಧರನ್ನು ಬ್ರಿಟನ್ ಸೇನೆ ಎಂದೇ ನಮೂದಿಸಲಾಗಿತ್ತು.
ಭಾರತೀಯರಿಂದ ಸ್ವಾತಂತ್ರ್ಯ:
ಮೊದಲ ವಿಶ್ವಯುದ್ಧದ ವೇಳೆ ಹೈಫಾಗೆ ಸ್ವಾತಂತ್ರ್ಯ ಕೊಡಿಸಲು ಅಂದಿನ ಬ್ರಿಟಿಷ್ ಆಡಳಿತದ ಭಾಗವಾಗಿದ್ದ ಮೈಸೂರು, ಹೈದರಾಬಾದ್, ಜೋಧಪುರದ ಅಶ್ವದಳದ ಸೈನಿಕರು ಮೇಜರ್ ದಲ್ಪತ್ ಸಿಂಗ್ ಶೇಖಾವತ್ ನೇತೃತ್ವದಲ್ಲಿ ಹೋರಾಡಿದ್ದರು. ಪರಿಣಾಮವಾಗಿ 402 ವರ್ಷಗಳ ಕಾಲ ಒಟ್ಟೊಮನ್ ಸಾಮ್ರಾಜ್ಯದ ಆಳ್ವಿಕೆಯಲ್ಲಿದ್ದ ನಗರ 1918ರಲ್ಲಿ ಸ್ವತಂತ್ರವಾಗಿತ್ತು. ಇದರ ನೆನಪಿಗಾಗಿ ಭಾರತಿಯ ಸೇನೆ ಇವತ್ತಿಗೂ ಸೆ.23 ಅನ್ನು ಹೈಫಾ ದಿನವೆಂದು ಆಚರಿಸಿ, ಹುತಾತ್ಮರಿಗೆ ಗೌರವ ಸಂದಾಯ ಮಾಡುತ್ತದೆ. ಜತೆಗೆ, ಭಾರತೀಯ ಮಿಷನ್ ಮತ್ತು ಹೈಫಾ ಮುನಿಸಿಪಾಲಿಟಿ ಜತೆಗೂಡಿ ಸುಮಾರು 900 ಹುತಾತ್ಮರ ಸ್ಮಾರಕವಿರುವಲ್ಲಿ ಪ್ರತಿ ವರ್ಷ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ.
ಮೈಸೂರು ಪಾತ್ರವೇನು?:
ಹೈಫಾ ಮುಕ್ತಿ ಯುದ್ಧದಲ್ಲಿ ಭಾಗವಹಿಸಲು ಮೈಸೂರಿನ ಅಶ್ವದಳವು 1914ರ ಅ.13ರಂದು ಬಿ.ಚಾಮರಾಜ ಅರಸ್ ಅವರ ನೇತೃತ್ವದಲ್ಲಿ ಬೆಂಗಳೂರಿನಿಂದ ಹೊರಟು ನವೆಂಬರ್‌ನಲ್ಲಿ ಸುಯೆಜ್ ತಲುಪಿತ್ತು. ಮೇಜರ್ ಎಂ.ಎಚ್. ಹೆಂಡರ್ಸನ್ ಕೂಡ ಅದರೊಂದಿಗಿದ್ದರು. ಇದರಲ್ಲಿ 29 ಅಧಿಕಾರಿಗಳು, 444 ಸೈನಿಕರು, 526 ಕುದುರೆ, 49 ಹೇಸರಗತ್ತೆ, 132 ಹಿಂಬಾಲಕರು ಇದ್ದರು. ಹೋದವರಲ್ಲಿ ಹಲವರು ಹುತಾತ್ಮರಾಗಿದ್ದು, ಉಳಿದವರು 1920ರಲ್ಲಿ ವಿಜಯಿಗಳಾಗಿ ಮರಳಿದ್ದರು.
- ಮೊದಲ ವಿಶ್ವ ಯುದ್ಧದ ವೇಳೆ ಒಟ್ಟೊಮನ್ನರಿಂದ ಹೈಫಾಗೆ ಸ್ವಾತಂತ್ರ್ಯ ಕೊಡಿಸುವ ಹೋರಾಟ ನಡೆದಿತ್ತು
- ಬ್ರಿಟಿಷ್ ಆಡಳಿತದ ಭಾಗವಾಗಿದ್ದ ಮೈಸೂರು, ಹೈದರಾಬಾದ್, ಜೋಧಪುರ ಯೋಧರು ಹೋರಾಡಿದ್ದರು
- ಈ ಸಂಬಂಧ ಸ್ಮಾರಕ ನಿರ್ಮಿಸಿ ಯೋಧರ ಶೌರ್ಯವನ್ನು ಇವತ್ತಿಗೂ ಭಾರತ
- ಇಸ್ರೇಲ್ ಕೊಂಡಾಡುತ್ತವೆ- ಆದರೆ ಶಾಲಾ ಪಠ್ಯದಲ್ಲಿ ಹೈಫಾ ಸ್ವಾತಂತ್ರ್ಯ ಕೊಡಿಸಿದ್ದು ಬ್ರಿಟಿಷರಿಂದ ಎಂದು ಉಲ್ಲೇಖ ಮಾಡಲಾಗಿದೆ
- ಅದನ್ನು ಬದಲಿಸಿ, ಸ್ವಾತಂತ್ರ್ಯ ಕೊಡಿಸಿದ್ದು ಭಾರತೀಯರು ಎಂದು ಬದಲಿಸುತ್ತೇವೆ: ಮೇಯರ್ ಯೋನಾ