ಇಸ್ಲಾಮಾಬಾದ್: ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ಈಗ 1 ಕೇಜಿ ಗೋಧಿ ಹಿಟ್ಟಿನ ಬೆಲೆ 800 ರು. ದಾಟಿದೆ. ಹೀಗಾಗಿ ಒಂದು ರೊಟ್ಟಿ 25 ರು.ಗಿಂತ ಕಮ್ಮಿಗೆ ಸಿಗುತ್ತಿಲ್ಲ. ಅಲ್ಲದೆ ಬಾಳೆಹಣ್ಣು ಬೆಲೆ ಕೂಡ 200 ರು. ಗಡಿ ದಾಟಿದೆ.
ಇಷ್ಟೆಲ್ಲ ಆದರೂ ಪಾಕಿಸ್ತಾನದ ಸಿರಿವಂತರು ಮದುವೆ ಊಟಕ್ಕೆ ಮನಬಂದಂತೆ ಹಣ ಹಾಗೂ ಆಹಾರಧಾನ್ಯ ಪೋಲು ಮಾಡುವುದು ನಿಂತಿಲ್ಲ. ಹೀಗಾಗಿ ಬೆಲೆ ನಿಯಂತ್ರಣ ಹಾಗೂ ಆಹಾರ ಪೋಲು ನಿಯಂತ್ರಣ ಉದ್ದೇಶದಿಂದ ಮದುವೆ ತಿನಿಸು ಹಾಗೂ ಭಕ್ಷ್ಯಗಳಿಗೆ ಲಗಾಮು ಹಾಕಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ.ಇದರ ಭಾಗವಾಗಿ ವಿಶೇಷವಾಗಿ ಮದುವೆಗಳು ಮತ್ತು ಸಮಾರಂಭಗಳಲ್ಲಿ. ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಮರ್ಯಮ್ ನವಾಜ್ ಅವರು ‘ಒಂದು ಭಕ್ಷ್ಯ’ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ನಿರ್ಧರಿಸಿದ್ದಾರೆ.
ಈ ನೀತಿಯನ್ನು 2016 ರಲ್ಲಿ ಮೊದಲು ಜಾರಿಗೆ ತರಲಾಯಿತು ಆದರೆ ಜನರು ಅದನ್ನು ಅನುಸರಿಸಲಿಲ್ಲ. ಇದೀಗ ಈ ನೀತಿಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. ಒಂದು ಭಕ್ಷ್ಯ'''' ನೀತಿಯ ಪ್ರಕಾರ, ಮದುವೆಯ ಪಾರ್ಟಿಗಳಲ್ಲಿ ಒಂದಕ್ಕಿಂತ ಹೆಚ್ಚು ಭಕ್ಷ್ಯಗಳನ್ನು ಅನುಮತಿಸಲಾಗುವುದಿಲ್ಲ. ಇದರರ್ಥ, ಆಹಾರ ಮೆನುವಿನಲ್ಲಿ ಕೇವಲ ತಲಾ ಒಂದು ತರಕಾರಿ, ಅನ್ನ, ರೊಟ್ಟಿ, ದಾಲ್, ಸಲಾಡ್, ತಂಪು ಪಾನೀಯ ಮತ್ತು ಒಂದು ಸಿಹಿತಿಂಡಿಯನ್ನು ನೀಡಲು ಅನುಮತಿಸಲಾಗಿದೆ. ಇದನ್ನು ಉಲ್ಲಂಘಿಸಿದವರ ಮೇಲೆ ಸರ್ಕಾರಿ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ ಮತ್ತು ದಂಡ ವಿಧಿಸುತ್ತಿದ್ದಾರೆ.
ಬಹು ಖಾದ್ಯಗಳನ್ನು ಬಡಿಸುವುದು ಅನಗತ್ಯ ವೆಚ್ಚಕ್ಕೆ ಕಾರಣವಾಗುತ್ತದೆ. ಹೀಗಾಗಿ ಈ ಕ್ರಮ ಎಂದು ಮರ್ಯಮ್ ನವಾಜ್ ಹೇಳಿದ್ದಾರೆ.
ಸಾಲದ ಶೂಲದಲ್ಲಿ ಪಾಕ್: ಪಾಕಿಸ್ತಾನವು ಪ್ರಸ್ತುತ ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಬೇಲ್‌ಔಟ್ ಪ್ಯಾಕೇಜ್‌ಗಳಲ್ಲಿ ಉಳಿದುಕೊಂಡಿದೆ ಮತ್ತು ಇತ್ತೀಚೆಗೆ, ಅದರ ಪ್ರಧಾನ ಮಂತ್ರಿ ಶೆಹಬಾಜ್ ಷರೀಫ್ ವಿತ್ತೀಯ ಸಹಾಯವನ್ನು ಪಡೆಯಲು ಸೌದಿ ಅರೇಬಿಯಾಕ್ಕೆ ಹೋದರೂ ಯಶಸ್ವಿಯಾಗಲಿಲ್ಲ. ಪಾಕಿಸ್ತಾನದಲ್ಲಿ ಹಣದುಬ್ಬರ ಈಗಾಗಲೇ ಶೇ.25 ಇದ್ದು ಏಷ್ಯಾದಲ್ಲೇ ಗರಿಷ್ಠವಾಗಿದೆ.