ಕತಾರ್‌ನಲ್ಲಿ ಭಾರತೀಯರ ರಕ್ಷಣೆಗೆ ಮೋದಿ ಧನ್ಯವಾದ

KannadaprabhaNewsNetwork |  
Published : Feb 16, 2024, 01:45 AM ISTUpdated : Feb 16, 2024, 03:12 PM IST
Modi

ಸಾರಾಂಶ

ತೈಲಸಮೃದ್ಧ ದೇಶದ ದೊರೆಯನ್ನು ಭೇಟಿ ಮಾಡಿದ ಪ್ರಧಾನಿ ಮೋದಿ, ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಉಭಯ ನಾಯಕರ ನಡುವೆ ಮಾತುಕತೆ ನಡೆಯಿತು.

ಪಿಟಿಐ ದೋಹಾ

ಕತಾರ್‌ನಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿದ್ದ ಭಾರತೀಯ ನೌಕಾಪಡೆಯ 8 ಮಂದಿ ಮಾಜಿ ಅಧಿಕಾರಿಗಳನ್ನು ಅಲ್ಲಿನ ನ್ಯಾಯಾಲಯ ಬಿಡುಗಡೆ ಮಾಡಿ ಭಾರತಕ್ಕೆ ಕಳುಹಿಸಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿಯವರು ಕತಾರ್‌ನ ಅರಸ ಶೇಖ್‌ ತಮಿಮ್‌ ಬಿನ್‌ ಹಮದ್‌ ಅಲ್‌-ಥನಿ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದರು.

ಗುರುವಾರ ನಡೆದ ಮಾತುಕತೆಯ ವೇಳೆ ಕತಾರ್‌ನಲ್ಲಿನ ಭಾರತೀಯ ಸಮುದಾಯದ ರಕ್ಷಣೆಗಾಗಿ ಮೋದಿಯವರು ತಮಿಮ್‌ ಅವರಿಗೆ ಧನ್ಯವಾದ ಅರ್ಪಿಸಿದರು ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಯುಎಇ ಪ್ರವಾಸಕ್ಕೆ ತೆರಳಿದ್ದ ಮೋದಿ ಬುಧವಾರ ಅಲ್ಲಿ ಬೃಹತ್‌ ಹಿಂದೂ ದೇಗುಲವನ್ನು ಲೋಕಾರ್ಪಣೆ ಮಾಡಿದ ಬಳಿಕ ರಾತ್ರಿ ಕತಾರ್‌ಗೆ ತೆರಳಿದ್ದರು. 

ಗುರುವಾರ ಕತಾರ್‌ನ ದೊರೆ ಶೇಖ್‌ ತಮಿಮ್‌ ಜೊತೆ ದ್ವಿಪಕ್ಷೀಯ ಸಂಬಂಧ ವೃದ್ಧಿಯ ಕುರಿತು ಮಾತುಕತೆ ನಡೆಸಿದರು. 

‘ವ್ಯಾಪಾರ, ಹೂಡಿಕೆ, ಇಂಧನ, ಬಾಹ್ಯಾಕಾಶ, ಸಂಸ್ಕೃತಿ ಹಾಗೂ ಜನರ ಸಹಭಾಗಿತ್ವದ ಕುರಿತು ಫಲಪ್ರದ ಮಾತುಕತೆ ನಡೆಯಿತು. 

ಇದೇ ವೇಳೆ ಉಭಯ ನಾಯಕರು ಪ್ರಾದೇಶಿಕ ಹಾಗೂ ಜಾಗತಿಕ ವಿಚಾರಗಳ ಕುರಿತೂ ಚರ್ಚಿಸಿದರು’ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಬುಧವಾರ ರಾತ್ರಿಯೇ ಮೋದಿಯವರು ಕತಾರ್‌ ಪ್ರಧಾನಿ ಶೇಖ್‌ ಮೊಹಮ್ಮದ್‌ ಬಿನ್‌ ಅಬ್ದುಲ್‌ ರೆಹಮಾನ್‌ ಅಲ್‌-ಥನಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. 

ಬಳಿಕ ಕತಾರ್‌ ಪ್ರಧಾನಿಯವರು ಮೋದಿಗೆ ಔತಣ ಏರ್ಪಡಿಸಿದ್ದರು.ಇದು ಕತಾರ್‌ಗೆ ಪ್ರಧಾನಿ ಮೋದಿ ನೀಡಿದ ಎರಡನೇ ಭೇಟಿಯಾಗಿದೆ. 2016ರಲ್ಲಿ ಅವರು ಮೊದಲ ಬಾರಿ ಕತಾರ್‌ಗೆ ತೆರಳಿದ್ದರು. 

ಬಳಿಕ, ಇತ್ತೀಚೆಗೆ ದುಬೈನಲ್ಲಿ ನಡೆದಿದ್ದ ಹವಾಮಾನ ಬದಲಾವಣೆ ಶೃಂಗದ ವೇಳೆ ಕತಾರ್‌ನ ದೊರೆಯನ್ನು ಭೇಟಿಯಾಗಿ, ಗಲ್ಲುಶಿಕ್ಷೆಗೆ ಗುರಿಯಾಗಿದ್ದ ಭಾರತೀಯರ ಬಿಡುಗಡೆಯ ಕುರಿತು ಮಾತುಕತೆ ನಡೆಸಿದ್ದರು ಎಂದು ಹೇಳಲಾಗಿತ್ತು.

ಕತಾರ್‌ ದೊರೆಗೆ ಭಾರತಕ್ಕೆ ಆಹ್ವಾನ
ನವದೆಹಲಿ: ಎರಡು ದಿನಗಳ ಕೊಲ್ಲಿ ರಾಷ್ಟ್ರದಲ್ಲಿರುವ ಪ್ರಧಾನಿ ಮೋದಿ ಗುರುವಾರದಂದು ಕತಾರ್‌ಗೆ ಭೇಟಿ ನೀಡಿ ಭಾರತೀಯ ಸಮುದಾಯವನ್ನು ಭೇಟಿಯಾದರು. 

ಬಳಿಕ ಕತಾರ್‌ ದೊರೆಯೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಕತಾರ್‌ ದೊರೆ ಶೇಖ್‌ ತಮೀಮ್‌ಗೆ ಭಾರತಕ್ಕೆ ಆಗಮಿಸುವಂತೆಯೂ ಪ್ರಧಾನಿ ಮೋದಿ ಆಹ್ವಾನ ನೀಡಿದರು

PREV

Recommended Stories

ಯುದ್ಧದಲ್ಲಿ ಪರಸ್ಪರರಿಗೆ ಸಹಕಾರ : ಪಾಕಿಸ್ತಾನ - ಸೌದಿ ಅರೇಬಿಯಾ ಸಹಿ
ಪಾಕ್‌ ವಿರುದ್ಧ ಗೆದ್ದು ಪಹಲ್ಗಾಂ ಸಂತ್ರಸ್ತರು, ಸೇನೆಗೆ ಅರ್ಪಿಸಿದ ಭಾರತ ಕ್ರಿಕೆಟ್‌ ತಂಡ!