ಚಂದ್ರನ ಮೇಲೆ ವಿವಿಧ ಸಂಶೋಧನಾ ಉಪಕರಣಗಳನ್ನು ಹೊತ್ತಿದ್ದ ಮೊದಲ ಖಾಸಗಿ ಲ್ಯಾಂಡರ್‌ ಸ್ಪರ್ಶ!

KannadaprabhaNewsNetwork |  
Published : Mar 03, 2025, 01:48 AM ISTUpdated : Mar 03, 2025, 04:13 AM IST
ಚಂದ್ರನಿಂದ ಕಂಡ ಭೂಮಿ | Kannada Prabha

ಸಾರಾಂಶ

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ವಿವಿಧ ಸಂಶೋಧನಾ ಉಪಕರಣಗಳನ್ನು ಹೊತ್ತಿದ್ದ ಖಾಸಗಿ ಸಂಸ್ಥೆಯೊಂದರ ಲ್ಯಾಂಡರ್‌ ನೌಕೆ ಭಾನುವಾರ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದಿದೆ.

ಕೇಪ್ ಕೆನವರಲ್: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ವಿವಿಧ ಸಂಶೋಧನಾ ಉಪಕರಣಗಳನ್ನು ಹೊತ್ತಿದ್ದ ಖಾಸಗಿ ಸಂಸ್ಥೆಯೊಂದರ ಲ್ಯಾಂಡರ್‌ ನೌಕೆ ಭಾನುವಾರ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದಿದೆ. ಇದುವರೆಗೆ ರಷ್ಯಾ, ಅಮೆರಿಕ, ಚೀನಾ, ಜಪಾನ್‌ ಮತ್ತು ಭಾರತದ ಸರ್ಕಾರಿ ಬಾಹ್ಯಾಕಾಶ ಸಂಸ್ಥೆಗಳು ತಮ್ಮ ನೌಕೆಯನ್ನು ಚಂದ್ರನ ಮೇಲೆ ಇಳಿಸಲು ಯಶಸ್ವಿಯಾಗಿದ್ದವು. ಆದರೆ ಇದೀಗ ಮೊದಲ ಬಾರಿಗೆ ಖಾಸಗಿ ಕಂಪನಿಯೊಂದರ ಲ್ಯಾಂಡರ್‌ ಚಂದ್ರನ ಭೂಮಿ ಸ್ಪರ್ಶಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಯಾಗಿದೆ.

ಅಮೆರಿಕದ ‘ಫಯರ್‌ಫ್ಲೈ ಏರೋಸ್ಪೇಸ್‌’ ಎಂಬ ಖಾಸಗಿ ಕಂಪನಿ ಹಾರಿಬಿಟ್ಟಿದ್ದ ‘ಬ್ಲೂ ಘೋಸ್ಟ್‌’ ಲ್ಯಾಂಡರ್‌ ಭಾನುವಾರ ಸರಾಗವಾಗಿ ಚಂದ್ರನ ಭೂಮಿಯನ್ನು ಸ್ಪರ್ಶ ಮಾಡಿದೆ.

ಕಳೆದ ಜನವರಿ ತಿಂಗಳಲ್ಲಿ ಉಡ್ಡಯನಗೊಂಡಿದ್ದ ನೌಕೆಯಲ್ಲಿದ್ದ ಬ್ಲೂ ಘೋಸ್ಟ್ ಲ್ಯಾಂಡರ್ ಬಳಿಕ ಚಂದ್ರನ ಕಕ್ಷೆ ಪ್ರವೇಶಿಸಿತ್ತು. ಅದು ಭಾನುವಾರ ಚಂದ್ರನ ಈಶಾನ್ಯ ಭಾಗದಲ್ಲಿ ಸ್ವಯಂಚಾಲಿತವಾಗಿ ಭೂಸ್ಪರ್ಶ ಮಾಡಿದೆ. ಒಂದೊಮ್ಮೆ ಚಂದ್ರನಲ್ಲಿ ಜ್ವಾಲಾಮುಖಿ ಸ್ಫೋಟದಿಂದ ಸೃಷ್ಟಿಯಾಗಿದ್ದ ಬೆಟ್ಟಪ್ರದೇಶದಂಥ ಜಾಗದಲ್ಲಿ ಬ್ಲೂ ಘೋಸ್ಟ್‌ ಇಳಿದಿದೆ. ಈ ಲ್ಯಾಂಡರ್‌ ಡ್ರಿಲ್‌ ಹಾಗೂ ವ್ಯಾಕ್ಯೂಂನಂತಹ ಉಪಕರಣಗಳನ್ನು ತನ್ನೊಂದಿಗೆ ಹೊತ್ತೊಯ್ದಿದ್ದು, ನಾಸಾದ ಹಲವು ಪ್ರಯೋಗಗಳನ್ನು ನಡೆಸಲಿದೆ. ಲ್ಯಾಂಡರ್‌ ತಾನು ಚಂದ್ರನ ಭೂಮಿಯ ಸ್ಪರ್ಶಕ್ಕಾಗಿ ಸಾಗುವ ವೇಳೆ ಮಾರ್ಗಮಧ್ಯದಿಂದ ಭೂಮಿಯ ಅದ್ಭುತ ಫೋಟೋಗಳನ್ನು ಸೆರೆಹಿಡಿದು ರವಾನಿಸಿದೆ.

ಈ ಹಿಂದೆ ಕೂಡಾ ಖಾಸಗಿ ಸಂಸ್ಥೆಗಳು ಇಂಥ ಪ್ರಯತ್ನ ಮಾಡಿದ್ದವಾದರೂ ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಿ ಇಳಿದ ಮೊದಲ ಲ್ಯಾಂಡರ್‌ ಇದಾಗಿದೆ. ಉಳಿದಂತೆ ರಷ್ಯಾ, ಅಮೆರಿಕ, ಚೀನಾ, ಭಾರತ ಮತ್ತು ಜಪಾನ್‌ನ ಅಧಿಕೃತ ವ್ಯೋಮ ಸಂಸ್ಥೆಗಳಷ್ಟೇ ಈ ಸಾಧನೆ ಮಾಡಿವೆ.

2 ಮೀ. ಎತ್ತರವಿರುವ ಈ ಲ್ಯಾಂಡರ್‌, ಚಂದ್ರನ ಮೇಲ್ಮೈಯಿಂದ ಧೂಳು ಸಂಗ್ರಹ, 3 ಮೀ. ಆಳಕ್ಕಿಳಿದು ಉಷ್ಣಾಂಶ ಮಾಪನ ಸೇರಿ ಹಲವು ಕೆಲಸಗಳನ್ನು ಮಾಡಲಿದೆ. 4 ಮೀ. ಎತ್ತರದ ಇನ್ನೊಂದು ಲ್ಯಾಂಡರ್‌ ಗುರುವಾರ ಚಂದ್ರನ ಮೇಲಿಳಿಯಲಿದೆ. ಈ ಲ್ಯಾಂಡರ್‌ಗಳನ್ನು ಚಂದ್ರನ ಮೇಲೆ ಇಳಿಸಲು ಖಾಸಗಿ ಕಂಪನಿಗೆ ನಾಸಾ ಅಂದಾಜು 850 ಕೋಟಿ ರು. ಪಾವತಿಸಿತ್ತು.

- ಇತಿಹಾಸ ಸೃಷ್ಟಿ

- ಅಮೆರಿಕದ ‘ಫಯರ್‌ಫ್ಲೈ ಏರೋಸ್ಪೇಸ್‌’ ಖಾಸಗಿ ಕಂಪನಿಯ ‘ಬ್ಲೂ ಘೋಸ್ಟ್‌’ ಲ್ಯಾಂಡರ್‌ ಸಾಧನೆ

- ಲ್ಯಾಂಡರ್‌ನಿಂದ ಚಂದ್ರನ ಧೂಳು ಸಂಗ್ರಹ, ಉಷ್ಣಾಂಶ ಮಾಪನ । ನಾಸಾ ಸಂಶೋಧನೆಗೆ ನೆರವು

ಐತಿಹಾಸಿಕ ಏಕೆ?

ಇದುವರೆಗೆ ರಷ್ಯಾ, ಅಮೆರಿಕ, ಚೀನಾ, ಜಪಾನ್‌ ಮತ್ತು ಭಾರತದ ಸರ್ಕಾರಿ ಬಾಹ್ಯಾಕಾಶ ಸಂಸ್ಥೆಗಳು ತಮ್ಮ ನೌಕೆಯನ್ನು ಚಂದ್ರನ ಮೇಲೆ ಇಳಿಸಿದ್ದವು. ಇದೀಗ ಮೊದಲ ಬಾರಿಗೆ ಖಾಸಗಿ ಕಂಪನಿಯೊಂದರ ಲ್ಯಾಂಡರ್‌ ಚಂದ್ರನ ಸ್ಪರ್ಶಿಸಿದೆ. ಹೀಗಾಗಿ ಇದು ಐತಿಹಾಸಿಕ.

ಉಪಯೋಗವೇನು?

- ಈಗ 3 ಮೀ. ಎತ್ತರ ಇರುವ ಒಂದು ಲ್ಯಾಂಡರ್ ಭೂಸ್ಪರ್ಶ

- ಚಂದ್ರನ ಈಶಾನ್ಯ ಭಾಗದಲ್ಲಿ ಸ್ವಯಂಚಾಲಿತವಾಗಿ ಲ್ಯಾಂಡ್‌

- ಲ್ಯಾಂಡರ್‌ನಿಂದ ಚಂದ್ರನ ಮೇಲ್ಮೈಯಿಂದ ಧೂಳು ಸಂಗ್ರಹ

- ಚಂದ್ರನ ನೆಲದಿಂದ 3 ಮೀ. ಆಳಕ್ಕಿಳಿದು ಉಷ್ಣಾಂಶ ಮಾಪನ

- 4 ಮೀ. ಎತ್ತರದ ಇನ್ನೊಂದು ಲ್ಯಾಂಡರ್‌ ಗುರುವಾರ ಚಂದ್ರಸ್ಪರ್ಶ

- ಆ ಲ್ಯಾಂಡರ್‌ನಿಂದ ಚಂದ್ರನ ಮೇಲಿನ ಇನ್ನಷ್ಟು ವೈಶಿಷ್ಟ್ಯಗಳ ಅಧ್ಯಯನ

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಮರುಭೂಮಿ ಸೌದಿಯಲ್ಲಿ ಹಿಮಪಾತ, ಮಳೆ!
ಸಿಡ್ನಿಯಲ್ಲಿ ಇನ್ನೊಂದು ದಾಳಿ ಸಂಚು ವಿಫಲ