ಯುದ್ಧ ನಿಲ್ಲಿಸಿ ಪುಟಿನ್‌, ಝೆಲೆನ್‌ಸ್ಕಿಗೆ ಮೋದಿ ಕರೆ

KannadaprabhaNewsNetwork |  
Published : Mar 21, 2024, 01:03 AM IST
ಪ್ರಧಾನಿ ನರೇಂದ್ರ ಮೋದಿ | Kannada Prabha

ಸಾರಾಂಶ

ಸಾವಿರಾರು ಯೋಧರು, ನಾಗರಿಕರ ಸಾವಿಗೆ ಕಾರಣವಾದ, ಭಾರೀ ಪ್ರಮಾಣದ ಆಸ್ತಿಪಾಸ್ತಿ ಹಾನಿಗೆ ಕಾರಣವಾದ ರಷ್ಯಾ- ಉಕ್ರೇನ್‌ ಯುದ್ಧ ನಿಲ್ಲಿಸುವಂತೆ ಪ್ರಧಾನಿ ಮೋದಿ ಉಭಯ ದೇಶಗಳಿಗೆ ಮತ್ತೊಮ್ಮೆ ಮನವಿ ಮಾಡಿದ್ದಾರೆ.

ನವದೆಹಲಿ: ಸಾವಿರಾರು ಯೋಧರು, ನಾಗರಿಕರ ಸಾವಿಗೆ ಕಾರಣವಾದ, ಭಾರೀ ಪ್ರಮಾಣದ ಆಸ್ತಿಪಾಸ್ತಿ ಹಾನಿಗೆ ಕಾರಣವಾದ ರಷ್ಯಾ- ಉಕ್ರೇನ್‌ ಯುದ್ಧ ನಿಲ್ಲಿಸುವಂತೆ ಪ್ರಧಾನಿ ಮೋದಿ ಉಭಯ ದೇಶಗಳಿಗೆ ಮತ್ತೊಮ್ಮೆ ಮನವಿ ಮಾಡಿದ್ದಾರೆ. ಅಲ್ಲದೆ ಮಾತುಕತೆ ಮತ್ತು ಸಂಧಾನದ ಮೂಲಕ ಬಿಕ್ಕಟ್ಟು ಇತ್ಯರ್ಥಕ್ಕೆ ಮುಂದಾಗುವಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಮತ್ತು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್‌ಕಿಗೆ ಸಲಹೆ ನೀಡಿದ್ದಾರೆ.

2 ವರ್ಷದ ಹಿಂದೆ ಆರಂಭವಾದ ಯುದ್ಧ ಸ್ಥಗಿತಕ್ಕೆ ಪದೇ ಪದೇ ಮನವಿ ಮಾಡುತ್ತಲೇ ಬಂದಿರುವ ಮೋದಿ, ಇದು ಯುದ್ಧದ ಸಮಯವಲ್ಲ ಎಂದು ಈ ಹಿಂದೆ ಪುಟಿನ್‌ಗೆ ಹೇಳಿದ್ದ ಕಿವಿಮಾತು ಜಾಗತಿಕ ಮಟ್ಟದಲ್ಲಿ ಭಾರೀ ಸುದ್ದಿ ಮಾಡಿತ್ತು. ಜೊತೆಗೆ ಉಕ್ರೇನ್‌ ಮೇಲಿನ ಸಂಭವನೀಯ ಪರಮಾಣು ಬಾಂಬ್‌ ದಾಳಿಯನ್ನು ಮೋದಿ ತಡೆದಿದ್ದರು ಎಂದು ಇತ್ತೀಚೆಗಷ್ಟೇ ಅಮೆರಿಕದ ಪತ್ರಿಕೆಯೊಂದು ವರದಿ ಮಾಡಿತ್ತು.ದೂರವಾಣಿ ಕರೆ: ಇತ್ತೀಚೆಗಷ್ಟೇ ರಷ್ಯಾ ಅಧ್ಯಕ್ಷರಾಗಿ ಪುನರಾಯ್ಕೆಯಾದ ಪುಟಿನ್‌ಗೆ ಅಭಿನಂದಿಸುವ ಸಲುವಾಗಿ ಪ್ರಧಾನಿ ಮೋದಿ ಬುಧವಾರ ದೂರವಾಣಿ ಕರೆ ಮಾಡಿದ್ದರು. ಈ ವೇಳೆ ಅಭಿನಂದನೆ ಸಲ್ಲಿಸಿದ ಮೋದಿ ಉಭಯ ದೇಶಗಳ ಸಂಬಂಧವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಭರವಸೆ ನೀಡಿದರು. ಜೊತೆಗೆ ಯುದ್ಧವನ್ನು ರಾಜತಾಂತ್ರಿಕತೆ ಹಾಗೂ ಮಾತುಕತೆ ಮೂಲಕ ಬಗೆಹರಿಸಲು ಎಲ್ಲ ಸಹಕಾರ ನೀಡಲು ಬದ್ಧವಾಗಿದೆ ಎಂದು ಪ್ರಧಾನಿ ಪುನರುಚ್ಚರಿಸಿದರು.

ಝೆಲೆನ್‌ಸ್ಕಿಗೆ ಕರೆ: ಪುಟಿನ್‌ ಬಳಿಕ ಉಕ್ರೇನ್‌ ಅಧ್ಯಕ್ಷ ವೊಲೋದಿಮಿರ್‌ ಝೆಲೆನ್ಸ್ಕಿ ಜೊತೆ ಮಾತನಾಡಿದ ಪ್ರಧಾನಿ,‘ರಷ್ಯಾ ವಿರುದ್ಧ ಯುದ್ಧ ನಿಲ್ಲಿಸಲು ಭಾರತ ವೇದಿಕೆಯಾಗಲಿದೆ. ಜೊತೆಗೆ ಜನಕೇಂದ್ರಿತ ಭಾರತದ ನಿಲುವಿನಿಂದ ಉಕ್ರೇನ್‌ಗೆ ಪರಿಹಾರ ಒದಗಿಸುವಲ್ಲಿ ಬದ್ಧವಾಗಿದೆ ಎಂದು ಭರವಸೆ ನೀಡಿದರು.

ಮೋದಿಗೆ ಆಹ್ವಾನ: ಮಾತುಕತೆ ವೇಳೆ ಉಭಯ ನಾಯಕರು ತಮ್ಮ ದೇಶಕ್ಕೆ ಆಗಮಿಸುವಂತೆ ಮೋದಿಗೆ ಆಹ್ವಾನ ನೀಡಿದರು. ಇದೇ ವೇಳೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜಯಭೇರಿ ಸಾಧಿಸುವಂತೆ ಪುಟಿನ್‌ ಮೋದಿ ಅವರಿಗೆ ಶುಭಕೋರಿದರು.

PREV

Recommended Stories

ಪಿಒಕೆನಲ್ಲಿ ಪಹಲ್ಗಾಂ ಉಗ್ರನ ಸಾಂಕೇತಿಕ ಅಂತ್ಯಕ್ರಿಯೆ!
ಶ್ವೇತಭವನ ವಕ್ತಾರೆಯ ತುಟಿ, ಸೌಂದರ್ಯ ಹೊಗಳಿದ ಟ್ರಂಪ್!